ಮನೋರಂಜನೆ

ಹಿಟ್ ಆಂಡ್ ರನ್ ಪ್ರಕರಣ : ಸಲ್ಮಾನ್‌ಖಾನ್‌ ಬಚಾವ್; ಮುಂಬೈ ಹೈಕೋರ್ಟ್ ಜಾಮಿನು ಮಂಜೂರು

Pinterest LinkedIn Tumblr

salmankhan

ಮುಂಬೈ, ಮೇ 8: ಹಿಟ್ ಆಂಡ್ ರನ್ ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್‌ಖಾನ್‌ಗೆ ಮುಂಬೈ ಹೈಕೋರ್ಟ್ ನಿರೀಕ್ಷೆಯಂತೆಯೇ ಕೊನೆಗೂ ಜಾಮಿನು ಮಂಜೂರು ಮಾಡಿದೆ. 30 ಸಾವಿರ ರೂ. ಬಾಂಡ್ ನೀಡಬೇಕು ಮತ್ತು ಸೆಷನ್ಸ್ ನ್ಯಾಯಾಲಯಕ್ಕೆ ಪಾಸ್‌ಪೋರ್ಟ್ ಒಪ್ಪಿಸಬೇಕು ಎಂಬ ಷರತ್ತುಗಳೊಂದಿಗೆ ಹೈಕೋರ್ಟ್ ಸಲ್ಮಾನ್‌ಖಾನ್‌ಗೆ ಜಾಮೀನು ಮಂಜೂರು ಮಾಡಿತು. ಇಲ್ಲಿನ ಕೆಳ ನ್ಯಾಯಾಲಯ ನೀಡಿದ್ದ ಐದು ವರ್ಷ ಜೈಲು ಶಿಕ್ಷೆಯ ತೀರ್ಪನ್ನು ಅಮಾನತಿನಲ್ಲಿಟ್ಟ ಹೈಕೋರ್ಟ್, ಅಳೆದು-ತೂಗಿ ಕೊನೆಗೂ ಸಲ್ಮಾನ್‌ಖಾನ್ ಜೈಲು ಪಾಲಾಗುವುದನ್ನು ತಪ್ಪಿಸಿದೆ.

2002ರ ಹಿಟ್ ಅಂಡ್ ರನ್ ಪ್ರಕರಣದಲ್ಲಿ 13 ವರ್ಷಗಳ ಸುದೀರ್ಘ ವಿಚಾರಣೆ ನಂತರ ಮುಂಬೈ ಸೆಷನ್ಸ್ ನ್ಯಾಯಾಲಯ ಮೇ 6ರಂದು ಸಲ್ಮಾನ್‌ಖಾನ್‌ಗೆ ಐದು ವರ್ಷ ಕಾರಾಗೃಹ ವಾಸ ಮತ್ತು 25 ಸಾವಿರ ರೂ. ದಂಡ ವಿಧಿಸುವ ಮೂಲಕ ಶಿಕ್ಷೆಯ ಪ್ರಮಾಣವನ್ನು ಪ್ರಕಟಿಸಿತ್ತು.

2002ರ ಸೆಪ್ಟೆಂಬರ್ 28ರ ರಾತ್ರಿ ಸಲ್ಮಾನ್‌ಖಾನ್ ತನ್ನ ಮಿತ್ರರೊಂದಿಗೆ ಮದ್ಯಪಾನ ಮಾಡಿ ಮಧ್ಯರಾತ್ರಿ ಕಾರು ಚಲಾಯಿಸಿಕೊಂಡು ಬರುವಾಗ ಬಾಂದ್ರಾದ ಹಿಲ್ ರಸ್ತೆಯಲ್ಲಿ ಫುಟ್‌ಪಾತ್ ಮೇಲೆ ಮಲಗಿದ್ದ ಐವರ ಮೇಲೆ ಕಾರು ನುಗ್ಗಿಸಿದ್ದರು. ಈ ಅಪಘಾತದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟು ನಾಲ್ವರು ಗಾಯಗೊಂಡಿದ್ದರು. ಈ ಪ್ರಕರಣ ಸೆಷನ್ಸ್ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಸಲ್ಮಾನ್‌ಖಾನ್ ಆರೋಪಿ ಎಂದು ಸಾಬೀತಾಗಿತ್ತು. ಬಾಲಿವುಡ್‌ನ ಜನಪ್ರಿಯ ನಟ ಸಲ್ಮಾನ್‌ಖಾನ್ ಅವರಿಗೆ ಶಿಕ್ಷೆಯಾಗಿದ್ದು ದೇಶಾದ್ಯಂತ ಭಾರೀ ಸಂಚಲನ ಉಂಟುಮಾಡಿತ್ತು. ಬಾಲಿವುಡ್ ನಿರ್ಮಾಪಕರು ಸಲ್ಮಾನ್‌ಖಾನ್ ಮೇಲೆ ನೂರಾರು ಕೋಟಿ ಬಂಡವಾಳ ಹೂಡಿ ಸಲ್ಮಾನ್‌ಗೆ ಶಿಕ್ಷೆಯಾದ್ದರಿಂದ ತಲೆ ಮೇಲೆ ಕೈ ಹೊತ್ತು ಕುಳಿತಿದ್ದರು. ಸದ್ಯ ಸಲ್ಮಾನ್‌ಗೆ ಬೇಲ್ ಸಿಕ್ಕಿರುವುದು ಚಿತ್ರ ನಿರ್ಮಾಪಕರಿಗೂ ಸ್ವಲ್ಪ ನಿರಾಳವಾದಂತಾಗಿದೆ.

ಐದು ವರ್ಷಗಳ ಜೈಲು ಶಿಕ್ಷೆಯನ್ನು ಪ್ರಶ್ನಿಸಿ ಸಲ್ಮಾನ್‌ಖಾನ್ ಹೈಕೋರ್ಟ್‌ನಲ್ಲಿ ಮನವಿ ಸಲ್ಲಿಸಿದ್ದರು. ಇದಕ್ಕೂ ಮುನ್ನ ಮೇ 6ರಂದು ಜಾಮೀನಿಗೂ ಅರ್ಜಿ ಸಲ್ಲಿಸಿದ್ದರು.

ಅರ್ಜಿ ಸಲ್ಲಿಸಿದ ಕೆಲವೇ ಕ್ಷಣಗಳಲ್ಲಿ ವಿಚಾರಣೆ ನಡೆಸಿದ ಹೈಕೋರ್ಟ್ ಸಲ್ಮಾನ್‌ಗೆ ಎರಡು ದಿನಗಳ ಜಾಮೀನು ನೀಡಿತ್ತು. ಇಂದು ಜಾಮೀನು ಅರ್ಜಿಯ ವಿಚಾರಣೆ ವೇಳೆ ಸಲ್ಮಾನ್ ಪರ ವಕೀಲರು ಸೆಷನ್ಸ್ ನ್ಯಾಯಾಲಯದಲ್ಲಿ ಇದುವರೆಗೆ ನಡೆದಿರುವ ವಿಚಾರಣೆಯಲ್ಲಿನ ಲೋಪದೋಷಗಳನ್ನು ಎತ್ತಿ ಆಕ್ಷೇಪಣೆ ಸಲ್ಲಿಸಿದರು. ಸಲ್ಮಾನ್ ತಂದೆ ಕೂಡ ಈ ಪ್ರಕರಣದಲ್ಲಿ ಕೆಲವು ಸಾಕ್ಷಿಗಳ ವಿಚಾರಣೆ ನಡೆಸಿಲ್ಲ ಎಂದು ಆಕ್ಷೇಪಿಸಿ ನ್ಯಾಯಾಲಯದೆದುರು ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಗಳನ್ನು ಪರಿಶೀಲಿಸಿದ ನ್ಯಾಯಾಲಯದ ತಿಪ್ಸೆ ಅವರು ಪ್ರಾಸಿಕ್ಯೂಷನ್ ಪರ ವಕೀಲರಿಗೆ ಕೆಲವು ಪ್ರಶ್ನೆಗಳನ್ನು ಹಾಕಿದರು. ಅಂದು ರಾತ್ರಿ ಸಲ್ಮಾನ್‌ಖಾನ್ ಜತೆ ಕಾರಿನಲ್ಲಿದ್ದ ಅವರ ಮಿತ್ರ ಕಮಾಲ್‌ಖಾನ್‌ನ ವಿಚಾರಣೆ ನಡೆಸಿಲ್ಲವೇಕೆ ಎಂದು ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಪ್ರಾಸಿಕ್ಯೂಷನ್ ಪರ ವಕೀಲರು ಕಮಾಲ್‌ಖಾನ್ ವಿದೇಶದಲ್ಲಿ ನೆಲೆಸಿ ಅಲ್ಲಿನ ಪೌರತ್ವ ಪಡೆದಿರುವುದರಿಂದ ಅವರು ವಿಚಾರಣೆಗೆ ಲಭ್ಯವಾಗಿಲ್ಲ ಎಂದು ಹೇಳಿದರು.

ಇದರಿಂದ ತೃಪ್ತರಾಗದ ನ್ಯಾಯಾಧೀಶರು ಸೆಷನ್ಸ್ ನ್ಯಾಯಾಲಯ ನೀಡಿದ್ದ ಶಿಕ್ಷೆಯ ತೀರ್ಪನ್ನು ಅಮಾನತಿನಲ್ಲಿಟ್ಟು ಸಲ್ಮಾನ್‌ಖಾನ್‌ಗೆ ಜಾಮೀನು ನೀಡಿದರು. ಇದಕ್ಕೂ ಮುನ್ನ ದೇಶಾದ್ಯಂತ ಸಲ್ಮಾನ್‌ಖಾನ್ ಅಭಿಮಾನಿಗಳು ಅವನಿಗೆ ಶಿಕ್ಷೆಯಾಗದಂತೆ ವಿವಿಧ ಪೂಜೆ-ಹೋಮ-ಹವನಾದಿಗಳನ್ನು ನೆರವೇರಿಸಿದರು. ಕೆಲವು ಅಭಿಮಾನಿಗಳು ಸಲ್ಮಾನ್ ಮನೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು. ಈ ವೇಳೆ ಸಲ್ಮಾನ್‌ಖಾನ್ ಕಟ್ಟಾಭಿಮಾನಿಯೊಬ್ಬ ವಿಷ ಸೇವಿಸಿ ಆತ್ಮಹತ್ಯೆಗೂ ಪ್ರಯತ್ನಿಸಿದ ಘಟನೆ ನಡೆಯಿತು.

ಈ ಎಲ್ಲ ಹೈ ಡ್ರಾಮಾಗಳೂ ಕೆಲವೇ ಗಂಟೆಗಳಲ್ಲಿ ನಡೆದು ನ್ಯಾಯಾಧೀಶ ತಿಪ್ಸೆ ಸಲ್ಮಾನ್‌ಖಾನ್‌ಗೆ ಜಾಮೀನು ನೀಡಿದರು. ಮೇ 10ರಿಂದ ಹೈಕೋರ್ಟ್ ಪೀಠಕ್ಕೆ ಬೇಸಿಗೆ ರಜೆ ಇರುವುದರಿಂದ ಇಂದು ತೀರ್ಪು ನೀಡದಿದ್ದರೆ ಸಲ್ಮಾನ್‌ಖಾನ್ ಜೈಲಿಗೆ ಹೋಗಬೇಕಾಗಿತ್ತು.

ಸಲ್ಲುಗೆ ಜಾಮೀನು : ಮುಗಿಲು ಮುಟ್ಟಿದ ಅಭಿಮಾನಿಗಳ ಸಂಭ್ರಮ

ಹಿಟ್ ಅಂಡ್ ರನ್ ಪ್ರಕರಣದಲ್ಲಿ ಬಾಲಿವುಡ್ ನಟ ಸಲ್ಮಾನ್‌ಖಾನ್‌ಗೆ ಜಾಮೀನು ದೊರೆಯುತ್ತಿದ್ದಂತೆ ನಟನ ಅಭಿಮಾನಿಗಳು ಕುಣಿದು ಕುಪ್ಪಳಿಸಿ ಸಂಬ್ರಮ ಆಚರಿಸಿದರು. ಮುಂಬೈ ಹೈಕೋರ್ಟ್ ಎದುರು ಸೇರಿದ್ದ ಸಾವಿರಾರು ಅಭಿಮಾನಿಗಳು ಕುಣಿದಾಡಿದರು. ಪರಸ್ಪರ ಸಿಹಿ ಹಂಚಿ ಸಂಭ್ರಮಿಸಿಸದರು. ಇಂದು ಬೆಳಗ್ಗೆಯಿಂದಲೇ ಹೈಕೋರ್ಟ್ ಹಾಗೂ ಬಾಂದ್ರಾದಲ್ಲಿನ ಸಲ್ಮಾನ್‌ಖಾನ್‌ನ ನಿವಾಸದೆದುರು ಜಮಾಯಿಸಿದ್ದ ವಾದ-ಪ್ರತಿವಾದಗಳನ್ನು ಆಲಿಸಿದ ನ್ಯಾಯಾಧೀಶ ಅಭಯ್ ತಿಪ್ಸೆ ಅವರು ಸೆಷನ್ಸ್ ನ್ಯಾಯಾಲಯದ ತೀರ್ಪು ಅಮಾನತು ಮಾಡಿ ಜಾಮೀನು ಮಂಜೂರು ಮಾಡಿ ತೀರ್ಪು ಪ್ರಕಟಿಸುತ್ತಿದ್ದಂತೆ ಅಭಿಮಾನಿಗಳು ಸಂಭ್ರಮದಿಂದ ಕುಣಿದಾಡಿದರು. ಸದ್ಯ ಹೈಕೋರ್ಟ್ ಆದೇಶದಂತೆ ಸಲ್ಮಾನ್‌ಖಾನ್ ಸೆಷನ್ಸ್ ನ್ಯಾಯಾಲಯಕ್ಕೆ ಶರಣಾಗಿದ್ದು, 30 ಸಾವಿರ ರೂ.ಗಳ ವೈಯಕ್ತಿಕ ಬಾಂಡ್ ನೀಡಿ ಜಾಮೀನು ಪಡೆಯಲಿದ್ದಾರೆ.

Write A Comment