ಮುಂಬೈ

ಕಾಮಾಟಿಪುರದ ವಂಡರ್ ಹುಡುಗಿ ಶ್ವೇತಾ ಕತ್ತಿ: ರೆಡ್‌ಲೈಟಿನಿಂದ ಲೈಮ್‌ಲೈಟಿಗೆ

Pinterest LinkedIn Tumblr

swetha

‘ಅಮೆರಿಕಕ್ಕೆ ಹೋಗಲು ವಿಮಾನದಲ್ಲಿ ಹತ್ತಿ ಕುಳಿತಾಗ ಒಂದುಸಲ ಮ್ಯಾಪ್ ನೋಡಿದೆ. ಎಷ್ಟೋ ಸಾವಿರ ಕಿಲೋಮೀಟರ್ ದೂರ ಹೋಗುವುದು ಬಾಕಿಯಿತ್ತು. ಅಷ್ಟು ದೂರ ಪ್ರಯಾಣ ಮಾಡಬೇಕಲ್ಲ ಎಂದುಹೆದರಿಕೆಯಾಯಿತು. ಆದರೆ ಮನೆಯಿಂದ ಬಹಳ ದೂರ ಹೋಗುತ್ತಿದ್ದೇನೆ ಅಂತ ಯೋಚಿಸಿದಾಗ ತುಂಬಾ ಖುಷಿಯಾಯಿತು!’

ಮುಂಬೈನ ನಟೋರಿಯಸ್ ವೇಶ್ಯಾವಾಟಿಕೆ ಅಡ್ಡೆಯಾದ ಕಾಮಾಟಿಪುರದಲ್ಲಿ ಬೆಳೆದಹುಡುಗಿಯವಳು. ಅಲ್ಲಿಂದ ಹೇಗಾದರೂ ಹೊರಬಿದ್ದರೆ ಸಾಕು ಎಂದು ಹಂಬಲಿಸುತ್ತಿದ್ದವಳನ್ನು ವಿಧಿ ಅಮೆರಿಕಕ್ಕೆ ಕರೆದೊಯ್ಯುತ್ತಿತ್ತು.ಅಲ್ಲಿನ ಪ್ರಸಿದ್ಧ ಬಾರ್ಡ್ ಕಾಲೇಜಿನಲ್ಲಿ ಅವಳು ಸೈಕಾಲಜಿ ಓದುವವಳಿದ್ದಳು. ಅದಕ್ಕಾಗಿಸ್ಕಾಲರ್‌ಶಿಪ್ ಸಿಕ್ಕಿತ್ತು. ಇತಿಹಾಸ ಕರಾಳವಾಗಿದ್ದರೂ ಭವಿಷ್ಯದ ಬಗ್ಗೆ ಅವಳ ಕಣ್ಣಿನಲ್ಲಿ ಬಣ್ಣಬಣ್ಣದ ಕನಸುಗಳಿದ್ದವು. ದೇವದಾಸಿಯಾಗಿ ಕಾಮಾಟಿಪುರದಲ್ಲಿ ಸೇರಿಕೊಂಡು ಅಮ್ಮ ಪಟ್ಟ ಕಷ್ಟಗಳು ಕಣ್ಣಮುಂದೆ ಓಡುತ್ತಿದ್ದವು. ಅದಕ್ಕಿಂತ ವೇಗದಲ್ಲಿ ವಿಮಾನ ಹಾರುತ್ತಿತ್ತು.

ಹಾಗೆ ಹಾರಿ ಅಮೆರಿಕಕ್ಕೆ ಹೋದವಳ ಹೆಸರು ಶ್ವೇತಾ ಕತ್ತಿ. ಓದಿದ್ದು ಪಿಯುಸಿ. ಮೂಲ ಊರು ಬೆಳಗಾವಿ ಜಿಲ್ಲೆ. ಹುಟ್ಟಿದ್ದು ಮುಂಬೈನಲ್ಲಿ. ಬೆಳೆದಿದ್ದು ವೇಶ್ಯೆಯರಅಡ್ಡೆಯಲ್ಲಿ. ಅಮೆರಿಕಕ್ಕೆ ಹೋಗುವಾಗ ವಯಸ್ಸು 18.

ಹೆಣ್ಮಕ್ಕಳು ವೇಶ್ಯಾವಾಟಿಕೆ ಅಡ್ಡೆ ಸೇರುವಂತಾದರೆ ಅಥವಾ ಅಲ್ಲಿರುವ ಹೆಂಗಸರ ಮಕ್ಕಳಾಗಿ ಹುಟ್ಟಿ ಬೆಳೆದರೆ ಏನಾಗುತ್ತದೆ ಎಂಬುದುನಮಗೆಲ್ಲ ಗೊತ್ತು. ಕಾಮಾಟಿಪುರವೇಕೆ, ದೇಶದ ಯಾವುದೇ ರೆಡ್‌ಲೈಟ್ ಏರಿಯಾದಲ್ಲಿ ಹುಡುಕಿದರೂ ಇಂತಹ ನತದೃಷ್ಟ ಹೆಣ್ಮಕ್ಕಳ ಸಾವಿರಾರು ಕರುಣಾಜನಕ ಕತೆಗಳು ಸಿಗುತ್ತವೆ. ಅಲ್ಲಿರುವ ಹೆಣ್ಮಕ್ಕಳ ಮುಖವನ್ನೊಮ್ಮೆ ಆಪ್ತವಾಗಿ ನೋಡಿದರೆ ಅವರ ಕಣ್ಣುಗಳಲ್ಲಿಅವೆಷ್ಟೋ ನೋವಿನ ನಿದರ್ಶನಗಳು ತುಳುಕುತ್ತಿರುತ್ತವೆ. ವೇಶ್ಯೆಯ ಮಗಳು ವೇಶ್ಯೆ ಎಂಬ ಕೆಟ್ಟ ಗಾದೆ ನಿಜವೇ ಆಗಿಬಿಟ್ಟಿದೆ. ಒಮ್ಮೆ ಆ ಕೂಪ ಸೇರಿದರೆ ಹೊರಬರುವುದು ಕಷ್ಟ. ಅಲ್ಲಿ ಹುಟ್ಟಿದವರಿಗೆ ಅದೊಂದು ದಂಧೆಯನ್ನು ಬಿಟ್ಟರೆ ಇನ್ನೇನೂ ಗೊತ್ತಿರುವುದಿಲ್ಲ. ಶಾಲೆಗೆ ಹೋಗುವುದಿಲ್ಲ. ಮೈ ಬಲಿಯುವುದನ್ನೇ ಕಾಯುತ್ತ, ಮನಸ್ಸು ಬಲಿಯುವುದರೊಳಗೇಅವರನ್ನು ಮೈ ಮಾರಾಟದ ದಂಧೆಗೆ ಇಳಿಸಲಾಗುತ್ತದೆ. ನಂತರದ್ದು ದುರಂತ ಕತೆ. ಅದೇನು ಎಂಬುದನ್ನು ಸಾಕಷ್ಟು ಸಿನಿಮಾಗಳಲ್ಲೂ ನೋಡಿದ್ದೇವೆ. ಅವ್ಯಾವುವೂ ಕೇವಲ ಕಪೋಲಕಲ್ಪಿತವಲ್ಲ. ನಿಜವಾಗಿಯೂ ನಮ್ಮ ದೇಶದ ಬೇರೆ ಬೇರೆ ನಗರಗಳ ಕೆಂಪುದೀಪದ ಪ್ರದೇಶಗಳಲ್ಲಿ ನಡೆಯುವಂಥವೇ.

ಆದರೆ ಕಾಲ ಬದಲಾಗುತ್ತಿದೆ. ಕೆಂಪುದೀಪದಡಿ ಅಲ್ಲೊಂದು ಇಲ್ಲೊಲ್ಲೊಂದು ಹೂಅರಳುತ್ತಿವೆ. ವೇಶ್ಯಾವಾಟಿಕೆಯಿಂದ ತಪ್ಪಿಸಿಕೊಂಡು ಓಡಿಹೋಗಿ ತಾನಂದುಕೊಂಡಿದ್ದನ್ನು ಸಾಧಿಸಿದವರು, ಅಲ್ಲೇ ಇದ್ದುಕೊಂಡು ವ್ಯವಸ್ಥೆ ವಿರುದ್ಧ ಹೋರಾಡಿ ಗೆದ್ದವರು, ಮೈ ಮಾರುವ ದಂಧೆ ಬಿಟ್ಟು ಸ್ವಯಂ ಉದ್ಯೋಗ ಆರಂಭಿಸಿ ಬದುಕು ಕಟ್ಟಿಕೊಂಡವರು, ತಮ್ಮ ಸುತ್ತಮುತ್ತ ಇರುವ ವೇಶ್ಯೆಯರಲ್ಲಿ ಲೈಂಗಿಕ ಹಾಗೂ ಆರೋಗ್ಯ ಜಾಗೃತಿ ಮೂಡಿಸುತ್ತ ಸಮಾಜ ಸೇವೆ ಮಾಡುತ್ತಿರುವವರು, ಎನ್‌ಜಿಒಗಳ ಜೊತೆ ಸೇರಿಕೊಂಡು ಲೈಂಗಿಕ ಕಾರ್ಯಕರ್ತೆಯರ ಒಳಿತಿಗೆ ಕೆಲಸ ಮಾಡುತ್ತಿರುವವರು ಹೀಗೆ ರೆಡ್‌ಲೈಟ್ ಏರಿಯಾದಲ್ಲಿ ಹುಟ್ಟಿ ಅಲ್ಲಿನ ದಂಧೆಗೆ ಅಂಟಿಕೊಳ್ಳದೆ ಸಮಾಜದ ಮುಖ್ಯವಾಹಿನಿಯಲ್ಲಿ ಬೆರೆತ ಕೆಲವರಿದ್ದಾರೆ. ಇವರ ಸಂಖ್ಯೆ ಬಹಳ ಅಂದರೆ ಬಹಳ ಸಣ್ಣದು.

ವೇಶ್ಯಾವಾಟಿಕೆ ಅಡ್ಡೆಯಲ್ಲಿ ಒಮ್ಮೆ ಕಾಣಿಸಿಕೊಂಡರೆ ಮುಗಿಯಿತು, ಅವರು ಇನ್ನಾವುದಕ್ಕೂ ಲಾಯಕ್ಕಲ್ಲ ಎಂದು ಶರಾ ಬರೆದುಬಿಡುವ ಸಾಮಾಜಿಕ ವ್ಯವಸ್ಥೆಯಲ್ಲಿ ನಾವಿದ್ದೇವೆ. ಹಾಗಾಗಿ ಕೆಂಪುದೀಪದಡಿ ಹುಟ್ಟಿದವರು ಅಲ್ಲೇ ನವೆದು ಸಾಯಬೇಕೇ ವಿನಃ ಅಲ್ಲಿಂದಹೊರಬಂದು ತಮ್ಮದೇ ಬದುಕು ಕಟ್ಟಿಕೊಳ್ಳುವುದನ್ನು ಜನಸಾಮಾನ್ಯರು ಪ್ರೋತ್ಸಾಹಿಸುವುದಿಲ್ಲ. ಅಥವಾ ಅದು ಸಾಧ್ಯ ಎಂಬುದನ್ನೇ ನಂಬುವುದಿಲ್ಲ. ತಲೆಗೊಂದು ಮಾತನಾಡಿಅಲ್ಲೇ ಅವರು ಕೊಳೆಯುವಂತೆ ಮಾಡುತ್ತಾರೆ. ವೇಶ್ಯೆಯರ ವಿಷಯದಲ್ಲಿ ನಮ್ಮದು ಕ್ರೂರ ಸಮಾಜ.

ಶ್ವೇತಾ ಕತ್ತಿ ಇಂಥವುಗಳನ್ನೆಲ್ಲ ಮೆಟ್ಟಿ ನಿಂತು ಗೆದ್ದ ವೀರ ಕನ್ನಡತಿ. ಬೆಳಗಾವಿ ಜಿಲ್ಲೆ ಅವಳ ಪೂರ್ವಜರ ತವರೂರು. ಒಂದು ಕಾಲದಲ್ಲಿಅವಳ ಅಜ್ಜ ಮುಂಬೈನಲ್ಲಿ ವೇಶ್ಯಾಗೃಹ ನಡೆಸುತ್ತಿದ್ದ. ಅವನು ಕುಡಿತ, ಡ್ರಗ್ಸ್‌ಗೆ ದಾಸನಾಗಿಅಕಾಲಿಕವಾಗಿ ಸಾಯುವಾಗ ಶ್ವೇತಾಳ ಅಜ್ಜಿಗೆ ನಯಾಪೈಸೆಯನ್ನೂ ಬಿಟ್ಟುಹೋಗಿರಲಿಲ್ಲ.ಬದಲಿಗೆ ಅವಳ ಹೊಟ್ಟೆಯಲ್ಲಿ ಶ್ವೇತಾಳಅಮ್ಮನನ್ನು ಬಿಟ್ಟುಹೋಗಿದ್ದ. ಗಂಡ ಸತ್ತಮೇಲೆ ಅವಳ ಅಜ್ಜಿ ವೇಶ್ಯಾಗೃಹ ಮಾರಿ ಅಲ್ಲೇಕೆಲಸಕ್ಕೆ ಉಳಿದಳು. ಪಾತ್ರೆ ತೊಳೆಯುವುದು, ಮನೆ ಒರೆಸುವುದು ಗುಡಿಸುವುದು ಅವಳ ಕೆಲಸ. ಅಲ್ಲೇ ಶ್ವೇತಾಳ ತಾಯಿ ವಂದನಾ ಹುಟ್ಟಿದಳು. ಅವಳು ಬಡತನದಿಂದಲೋ ಅಥವಾ ಮೂಢನಂಬಿಕೆಯಿಂದಲೋದೇವದಾಸಿಯಾದಳು. ಆದರೂ ಒಬ್ಬ ಗಂಡಸಿನ ಜೊತೆ ಪ್ರೀತಿಗೆ ಬಿದ್ದಳು. ಅವನು ಶ್ವೇತಾಳನ್ನು ಹುಟ್ಟಿಸಿ ಕೈಕೊಟ್ಟ. ನಂತರ ಮತ್ತೊಬ್ಬ ಇವರಿಬ್ಬರಿಗೂ ಆಶ್ರಯ ನೀಡಿದ… ಇವೆಲ್ಲ ನಡೆದಿದ್ದು ಕಾಮಾಟಿಪುರದ ಒಡಲಿನಲ್ಲೇ.

ಇಷ್ಟೇ ಆಗಿದ್ದರೆ ಶ್ವೇತಾ ಕತ್ತಿಯ ಕತೆಯನ್ನು ಇಲ್ಲಿ ಬರೆಯಬೇಕಿರಲಿಲ್ಲ. ಇಂಥ ಘಟನೆಗಳು ಸಾಕಷ್ಟಿವೆ. ಆದರೆ ಇದರ ನಂತರದ್ದು ನಿಜವಾದ ವಂಡರ್ ಕತೆ. ಶ್ವೇತಾ ವೇಶ್ಯಾಗೃಹದಲ್ಲೇ ಬೆಳೆಯುತ್ತ ಮರಾಠಿ ಶಾಲೆಯಲ್ಲಿ ಓದುತ್ತಾಳೆ. ತನ್ನ ಸುತ್ತ ನಡೆಯುವ ದಂಧೆಯನ್ನು ನೋಡಿ ಬೆಚ್ಚಿ ಬೀಳುತ್ತಾಳೆ. ವೇಶ್ಯೆಯರ ಬದುಕಿನ ಬಗ್ಗೆ ಅಸಹ್ಯಪಡುತ್ತಾಳೆ. ಆದರೆ ಅಲ್ಲಿನ ವೇಶ್ಯೆಯರೇ ಅವಳನ್ನು ಬೆಳೆಸುತ್ತಾರೆ. ತಾನು ಅವರೊಳಗೊಬ್ಬಳಾಗಬಾರದು ಎಂದು ಶ್ವೇತಾ ಎನ್‌ಜಿಒ ಒಂದರಸಂಪರ್ಕಕ್ಕೆಬರುತ್ತಾಳೆ. ಆ ಎನ್‌ಜಿಒ ಶ್ವೇತಾಗೆ ಒಳ್ಳೆಯ ಶಿಕ್ಷಣ ನೀಡುತ್ತದೆ. ಸ್ಕಾಲರ್‌ಶಿಪ್ ಕೊಡಿಸಿ ಉನ್ನತ ಅಧ್ಯಯನಕ್ಕೆ ಅಮೆರಿಕಕ್ಕೆ ಕಳಿಸುತ್ತದೆ. ಅಲ್ಲಿ ಎಲ್ಲರ ಗಮನ ಸೆಳೆಯುವ ಶ್ವೇತಾ, ವಿಶ್ವಸಂಸ್ಥೆಯ ಯುವ ಸಾಧಕಿ ಪ್ರಶಸ್ತಿ ಪಡೆದು ಜಗತ್ತು ಹುಬ್ಬೇರಿಸುವಂತೆ ಮಾಡುತ್ತಾಳೆ. ಜಗತ್ಪ್ರಸಿದ್ಧ ನ್ಯೂಸ್‌ವೀಕ್ ಮ್ಯಾಗಜೀನ್‌ನ ‘ಗಮನಿಸಬೇಕಾದ 25 ಸಾಧಕಿಯರ ಪಟ್ಟಿ’ಯಲ್ಲಿ ಶ್ವೇತಾಳ ಹೆಸರು ಸೇರುತ್ತದೆ. ಕಾಮಾಟಿಪುರದ ಕೊಳಕು ಕೂಪದಲ್ಲಿ ಹುಟ್ಟಿದ ಹೆಣ್ಮಗಳು ಇಡೀ ಜಗತ್ತಿನ ಗಮನ ಸೆಳೆಯುವ ಸಾಧಕಿಯಾಗಿ ಹೊರಹೊಮ್ಮುತ್ತಾಳೆ!

ಮೇಲ್ನೋಟಕ್ಕೆ ಇದೊಂದು ಸಿನಿಮಾ ಕತೆ ಇದ್ದಂತಿದೆ. ಆದರೆ ಕನ್ನಡದ ಮೂಲದ ಹುಡುಗಿಯೊಬ್ಬಳ ನೈಜಕತೆ ಇದು ಎಂದಮೇಲೆ ಕನ್ನಡಿಗರು ಅಚ್ಚರಿಯನ್ನೂ ಹೆಮ್ಮೆಯನ್ನೂ ಏಕಕಾಲಕ್ಕೆ ಪಡಲುಅಡ್ಡಿಯಿಲ್ಲ.

ನನ್ನನ್ನು ದನದ ಸಗಣಿ ಅಂತಿದ್ರು!

ಶ್ವೇತಾ ಮೈಬಣ್ಣ ಕಪ್ಪು. ಮೇಲಾಗಿ ದಲಿತ ಕುಟುಂಬದಲ್ಲಿ ಹುಟ್ಟಿದವಳು. ಇವೆರಡರ ಜೊತೆಗೆ ಕಾಮಾಟಿಪುರದಲ್ಲಿ ಬೆಳೆದವಳು. ಈ ಮೂರು ಕಾರಣಕ್ಕೆ ಆಕೆ ಮುಂಬೈನಲ್ಲಿ ಶಾಲೆಗೆ ಹೋಗುವಾಗ ಸಹಪಾಠಿಗಳಾದಿಯಾಗಿ ಎಲ್ಲರೂ ಆಡಿಕೊಳ್ಳುತ್ತಿದ್ದರು. ಜನರು ಅವಳಿಗಿಟ್ಟಿದ್ದ ಹೆಸರು ದನದ ಸಗಣಿ ಹಾಗೂ ಕರಿ ಬಿದಿರು! ಈ ನಿಂದನೆಗಳನ್ನು ಕೇಳಿ ಪುಟ್ಟ ಹುಡುಗಿ ಕುಗ್ಗಿಹೋಗಿದ್ದಳು. ಎಲ್ಲರಂತೆ ಅವಳು ತನ್ನಗೆಳತಿಯರನ್ನು ಮನೆಗೆಕರೆದುಕೊಂಡು ಹೋಗುವಂತಿರಲಿಲ್ಲ. ಏಕೆಂದರೆ ಅದು ವೇಶ್ಯಾಗೃಹ. ಅಲ್ಲಿಗೆ ಮರ್ಯಾದಸ್ಥರಾರೂಬರುತ್ತಿರಲಿಲ್ಲ. ಇದು ಅವಳ ಆತ್ಮಸ್ಥೈರ್ಯವನ್ನೇ ಉಡುಗಿಸಿತ್ತು. ಆ ವಯಸ್ಸಿನಲ್ಲಿ ಪ್ರೋತ್ಸಾಹದ ಬದಲು ನಿಂದನೆ ಸಿಕ್ಕರೆ ಎಳೆಯ ಮನಸ್ಸು ಶಾಶ್ವತವಾಗಿ ಮುದುಡಿಹೋಗುತ್ತದೆ. ಶ್ವೇತಾ ಸ್ಥಿತಿಯೂ ಹಾಗೆಯೇ ಇತ್ತು.

ಅವಳ ತಾಯಿ ತಾನು ವೇಶ್ಯೆಯಾಗಬಾರದು ಎಂದು ಫ್ಯಾಕ್ಟರಿಯಲ್ಲಿ ಕೆಲಸ ಮಾಡುತ್ತಿದ್ದಳು. ಶ್ವೇತಾ ಸಣ್ಣ ಮಗುವಾಗಿದ್ದಾಗಲೂ ತಾಯಿ ಇಡೀ ದಿನ ಕೆಲಸಕ್ಕೆಂದು ಹೊರಗೆ ಹೋಗಬೇಕಾಗಿತ್ತು. ಆಗೆಲ್ಲ ಇವಳನ್ನು ನೋಡಿಕೊಳ್ಳುತ್ತಿದ್ದವರುಅಲ್ಲಿದ್ದ ವೇಶ್ಯೆಯರೇ. ಅವರು ಇವಳಿಗೆ ಜಡೆ ಹಾಕುತ್ತಿದ್ದರು. ಮೇಕಪ್ ಮಾಡುತ್ತಿದ್ದರು. ತಮ್ಮ ಮಗಳಂತೆ ಪ್ರೀತಿಸುತ್ತಿದ್ದರು. ಕಿಲಾಡಿ ಮಾಡಿದಾಗ ಹೊಡೆಯುತ್ತಿದ್ದರು. ಇವಳ ಜೊತೆ ದೀಪಾವಳಿ, ಹೋಳಿ ಮುಂತಾದಹಬ್ಬಗಳನ್ನು ಆಚರಿಸುತ್ತಿದ್ದರು. ತಮ್ಮದೇ ಕುಟುಂಬದ ಕುಡಿಯಂತೆ ಬೆಳೆಸಿದ್ದರು. ಶ್ವೇತಾಗೆ ತನ್ನವರು ಅಂತ ಯಾರಾದರೂ ಇದ್ದರೆ ಅದು ಕಾಮಾಟಿಪುರದ ವೇಶ್ಯೆಯರೇ.

ಶಾಲೆಗೆ ಹೋಗುವಂತಾದ ಮೇಲೆ ಶ್ವೇತಾಗೆ ತಾನಿರುವ ಜಾಗದಲ್ಲಿ ಏನು ನಡೆಯುತ್ತಿದೆ ಎಂಬುದು ಸ್ವಲ್ಪಸ್ವಲ್ಪವೇ ತಿಳಿಯತೊಡಗಿತು. ಕುಡಿದು ಬಂದು ವೇಶ್ಯೆಯರನ್ನು ಹೊಡೆಯುವ ಕ್ರೂರ ವಿಟಪುರುಷರು, ಕೆಟ್ಟಕೆಟ್ಟ ಶಬ್ದಗಳಲ್ಲಿ ಜಗಳವಾಡುವ ವೇಶ್ಯೆಯರು, ಅರೆಬರೆ ಬಾಗಿಲು ಮುಚ್ಚಿದ ಕೋಣೆಗಳಲ್ಲಿ ನಡೆಯುವ ಕಾಮಕೇಳಿಗಳು ಇವೆಲ್ಲ ಅವಳಿಗೆ ಸಣ್ಣ ವಯಸ್ಸಿನಲ್ಲೇ ಬಹುದೊಡ್ಡ ಪಾಠ ಕಲಿಸಿದವು. ಕೊನೆಕೊನೆಗೆ ಇವುಗಳಿಂದ ತಪ್ಪಿಸಿಕೊಳ್ಳಲು ಕೋಣೆಯಲ್ಲಿ ಬಾಗಿಲು ಮುಚ್ಚಿ ಕುಳಿತುಬಾಲಿವುಡ್ ಸಿನೆಮಾ ನೋಡುವುದನ್ನುಅಭ್ಯಾಸ ಮಾಡಿಕೊಂಡಳು. ಹೆದರಿದ ಮನಸ್ಸಿಗೆ ಜೀವನೋತ್ಸಾಹ ತುಂಬಿದ್ದು ಶಾರುಖ್,ಅಮೀರ್, ಸಲ್ಮಾನ್‌ಖಾನ್‌ಗಳು, ಐಶ್ವರ್ಯ, ಕರೀನಾ, ಕತ್ರಿನಾ, ದೀಪಿಕಾ ಪಡುಕೋಣೆಗಳು.

ಅಲ್ಲೊಂದು ಅತ್ಯಾಚಾರ

ಶ್ವೇತಾ ವೇಶ್ಯಾಗೃಹದಲ್ಲಿ ಬೆಳೆಯುವುದು ಅನಿವಾರ್ಯವೇ ಆಗಿದ್ದರೂ ಅವಳ ತಾಯಿ ವಂದನಾ ತನ್ನ ಮಗಳಿಗೆ ಇವ್ಯಾವುದರ ಗಂಧ ಸೋಕಬಾರದೆಂದು ಸದಾ ದೇವರನ್ನು ಬೇಡುತ್ತಿದ್ದಳು. ಆದರೆ, ವಂದನಾ ಕಾರ್ಖಾನೆಕೆಲಸಕ್ಕೆ ಹೋದಮೇಲೆ ಶ್ವೇತಾಳನ್ನು ವೇಶ್ಯೆಯರೇ ನೋಡಿಕೊಳ್ಳಬೇಕಿತ್ತು. ಅವರಿಗೆ ಗಿರಾಕಿಗಳು ಬಂದರೆ ಇವಳನ್ನು ಅಲ್ಲೇ ಬಿಟ್ಟು ಅವರ ಜೊತೆ ಹೋಗಬೇಕಿತ್ತು. ಇಂತಹುದೇ ಒಂದು ಅವಸರದಲ್ಲಿ 12 ವರ್ಷದ ಶ್ವೇತಾ ಮೇಲೆ ಯಾರೋ ಒಬ್ಬ ಅತ್ಯಾಚಾರ ಮಾಡಿಬಿಟ್ಟ. ಕಾಮಾಟಿಪುರದಲ್ಲಿ ನಡೆಯುವ ಅತ್ಯಾಚಾರದ ಸಾಕಷ್ಟು ಘಟನೆಗಳನ್ನು ಅದಕ್ಕೂ ಮೊದಲೇ ಶ್ವೇತಾ ಕೇಳಿದ್ದಳು. ಆದರೆ, ತನ್ನ ಮೇಲೇ ಅಂತಹದ್ದೊಂದು ದೌರ್ಜನ್ಯ ನಡೆದ ಮೇಲೆ ಖಿನ್ನತೆಗೆ ಜಾರಿದಳು. ಓದಿನಲ್ಲಿ ಆಸಕ್ತಿ ಕಳೆದುಹೋಯಿತು. ಶಾಲೆಗೆ ಹೋಗಬೇಕು ಅನ್ನಿಸಿದರೆ ಹೋಗುತ್ತಿದ್ದಳು, ಇಲ್ಲವಾದರೆ ಇಲ್ಲ. ಹೊಟ್ಟೆಪಾಡು ಸಾಗಬೇಕೆಂದರೆ ಅಮ್ಮ ಕೆಲಸಮಾಡಲೇಬೇಕಿತ್ತು. ಶ್ವೇತಾಗೆ ಪೂರ್ತಿಸಮಯ ನೀಡಲು ಅವಳಿಂದ ಸಾಧ್ಯವಾಗುತ್ತಿರಲಿಲ್ಲ.

ಶ್ವೇತಾ ಇರುವ ಮನೆ ಇನ್ನಿತರ ವೇಶ್ಯಾಗೃಹಗಳಿಂದ ಪ್ರತ್ಯೇಕವಾಗಿಯೇನೂ ಇರಲಿಲ್ಲ. ಇವಳು ಹಾಗೂ ಇವಳಮ್ಮ ಇರುವ ಮನೆಯನ್ನೂ, ವೇಶ್ಯೆಯರು ದಂಧೆ ನಡೆಸುತ್ತಿದ್ದ ಜಾಗವನ್ನೂ ಪ್ರತ್ಯೇಕಿಸುತ್ತಿದ್ದುದು ತೆಳುವಾದ ಪರದೆಗಳು ಮಾತ್ರ. ಅಲ್ಲಿ ನಡೆಯುವುದೆಲ್ಲ ಇವಳಿಗೆ ಕಾಣಿಸುತ್ತಿತ್ತು, ಕೇಳಿಸುತ್ತಿತ್ತು.ಚಿಕ್ಕಂದಿನಿಂದಲೇ ನೋಡಬಾರದ್ದನ್ನು ನೋಡಿ ಬೆಳೆದ ಇವಳಿಗೆ ತನ್ನ ಮೇಲೆ ಅತ್ಯಾಚಾರ ನಡೆದ ಮೇಲಂತೂ ಗಂಡಸರು-ಹೆಂಗಸರು ಒಟ್ಟಾಗಿ ಇರುವುದನ್ನು ನೋಡಿದಾಗ ಮನಸ್ಸು ವಿಪರೀತ ಹಿಂಸೆ ಅನುಭವಿಸುತ್ತಿತ್ತು. ಹಾಗಾಗಿ ಸೆಕ್ಸ್‌ಗೂ ಪ್ರೀತಿಗೂ ಶ್ವೇತಾಳ ಜಗತ್ತಿನಲ್ಲಿ ಒಂದಕ್ಕೊಂದು ಸಂಬಂಧವೇ ಇರಲಿಲ್ಲ.

ಇಬ್ಬರು ಅಪ್ಪಂದಿರ ದ್ವೇಷದ ಮಗಳು

ಶ್ವೇತಾ ಹುಟ್ಟುವುದಕ್ಕಿಂತ ಮೊದಲು ಅಮ್ಮ ವಂದನಾ ದೇವದಾಸಿಯಾಗಿದ್ದರೂ ಸುರೇಶ್ ಹೊಸ್ಮನೆ ಎಂಬುವನೊಂದಿಗೆ ಪ್ರೀತಿಗೆಬಿದ್ದಿದ್ದಳು. ಆದರೆ ದೇವದಾಸಿಯನ್ನು ಮದುವೆಯಾಗಲು ಅವನು ಸಿದ್ಧನಿರಲಿಲ್ಲ. ಆದರೂ ವಂದನಾ ಅವನನ್ನು ಎಷ್ಟು ಪ್ರೀತಿಸುತ್ತಿದ್ದಳು ಅಂದರೆ, ಅವನು ಮದುವೆಯಾಗುವುದರೊಳಗೆ ತನಗೆ ಪ್ರೀತಿಯ ದ್ಯೋತಕವಾಗಿ ಮಗುವೊಂದನ್ನು ಕೊಡಬೇಕೆಂದು ಹಠ ಹಿಡಿದಿದ್ದಳು! ಹಾಗೆ ಹುಟ್ಟಿದವಳೇ ಶ್ವೇತಾ. ಕ್ರಮೇಣ ವಂದನಾ ಹಾಗೂ ಸುರೇಶ್ ನಡುವಿನ ಆಕರ್ಷಣೆಕಡಿಮೆಯಾಯಿತು. ಅಷ್ಟರಲ್ಲಿ ಅವನಿಗೆ ಬೇರೆ ಮದುವೆಯೂ ಆಯಿತು. ಆ ವೇಳೆಗೆರವಿಂದರ್ ಕತ್ತಿ ಎಂಬ ವ್ಯಕ್ತಿ ಈ ತಾಯಿ-ಮಗಳಿಗೆ ಆಶ್ರಯ ನೀಡಲು ಮುಂದೆಬಂದ. ಅವನಿಗೆ ಆಗಲೇ ಮದುವೆಯಾಗಿ ಇಬ್ಬರು ಹೆಣ್ಮಕ್ಕಳಿದ್ದರು. ಆದರೂ ವಂದನಾ ಅವನನ್ನೇ ತನ್ನ ಗಂಡ ಎಂದುಕೊಂಡಳು. ಅವನು ಕಟ್ಟದಿದ್ದರೂ ತಾನೇ ಒಂದು ತಾಳಿ ಕಟ್ಟಿಕೊಂಡಳು. ಶ್ವೇತಾ ಅವನನ್ನೇ ಅನಿವಾರ್ಯವಾಗಿ ಅಪ್ಪ ಎಂದುಕೊಳ್ಳಬೇಕಾಯಿತು. ಹಾಗಾಗಿ ಅವಳ ಹೆಸರಿನ ಮುಂದೆ ಅವನ ಸರ್‌ನೇಮ್ ‘ಕತ್ತಿ’ ಅಂಟಿಕೊಂಡಿತು. ಆದರೆ ಅವನು ಯಾವತ್ತೂ ಇವಳಿಗೆ ಅಪ್ಪ ಎಂಬ ಭಾವನೆಯೇ ಬರಲಿಲ್ಲ. ಏಕೆಂದರೆ ಇವಳು ಕಪ್ಪಗಿದ್ದಳು, ಅವನು ಹತ್ತಿಯಂತೆ ಬೆಳ್ಳಗಿದ್ದ. ಮೇಲಾಗಿ ಅವನನ್ನು ಕಂಡರೆ ಇವಳಿಗಾಗುತ್ತಿರಲಿಲ್ಲ, ಇವಳನ್ನು ಕಂಡರೆ ಅವನಿಗಾಗುತ್ತಿರಲಿಲ್ಲ. ಪ್ರತಿದಿನ ಕುಡಿದು ಮನೆಗೆ ಬರುತ್ತಿದ್ದ. ವಂದನಾಗೂಅವನಿಗೂ ಜಗಳವಾಗುತ್ತಿತ್ತು. ದನಕ್ಕೆಬಡಿದಂತೆ ತಾಯಿ, ಮಗಳಿಗೆ ಬಡಿಯುತ್ತಿದ್ದ. ಇವಳು ಯಾರಿಗೋ ಹುಟ್ಟಿದವಳು ಎಂಬ ಬೈಗುಳ ಮೇಲಿಂದ ಮೇಲೆ ಅವನ ಬಾಯಲ್ಲಿ ಬರುತ್ತಿತ್ತು. ಹಾಗಂದರೆ ಏನು ಎಂದು ಶ್ವೇತಾ ಅಮ್ಮನನ್ನು ಕೇಳುತ್ತಿದ್ದಳು. ಅವಳು ಏನೋ ಕತೆ ಹೇಳಿ ಅದನ್ನು ಮರೆಸುತ್ತಿದ್ದಳು.

ಬದುಕಿನ ಹಾದಿ ತೋರಿದ ವೇಶ್ಯೆ

ಶ್ವೇತಾಳಿಗಾಗಿ ಅವಳಮ್ಮ ಮಾಡಿದ ಏಕೈಕ ಒಳ್ಳೆಯ ಕೆಲಸವೆಂದರೆ ಅವಳನ್ನು ಶಾಲೆಗೆ ಕಳಿಸಿದ್ದು. ತನ್ನಂತೆ ಅನಕ್ಷರಸ್ಥೆಯಾಗಿ, ಆಮೇಲೆದೇವದಾಸಿಯಾಗಿ ತನ್ನ ಮಗಳೂ ಬದುಕನ್ನು ನರಕ ಮಾಡಿಕೊಳ್ಳಬಾರದು ಎಂದು ಅವಳು ಶ್ವೇತಾಳನ್ನು ತಪ್ಪದೇ ಶಾಲೆಗೆ ಕಳಿಸುತ್ತಿದ್ದಳು. ಆದರೆ ಇವಳಿಗೆ ಶಾಲೆಯೆಂದರೆ ಅದೇನೋ ದ್ವೇಷ. ಅಲ್ಲಿರುವವರೆಲ್ಲ ಇವಳನ್ನು ಕಾಮಾಟಿಪುರದವಳು ಎಂದು ಆಡಿಕೊಳ್ಳುತ್ತಿದ್ದರು. ಹಾಗಾಗಿ ಅಮ್ಮ ಕೆಲಸಕ್ಕೆ ಹೋದಮೇಲೆ ಇವಳು ಶಾಲೆಗೆ ಚಕ್ಕರ್ ಹೊಡೆದು ಮನೆಯಲ್ಲಿ ಕುಳಿತು ಟೀವಿ ನೋಡುತ್ತಿದ್ದಳು. ಇವೆಲ್ಲವೂ ಬದಲಾಗಿದ್ದು ಇನ್ನೊಬ್ಬಳು ವೇಶ್ಯೆಯಿಂದ.

ಶ್ವೇತಾಳ ಮನೆಯ ಪಕ್ಕದಲ್ಲೇ ರಾಧಾ ಎಂಬ ವೇಶ್ಯೆಯಿದ್ದಳು. ಅವಳು ಶ್ವೇತಾಗೆ ಓದಿನಲ್ಲಿ ಇಷ್ಟವಿಲ್ಲದೆ ಇರುವುದನ್ನುಗಮನಿಸಿದ್ದಳು. ಒಂದು ದಿನ ಇವಳು ಶಾಲೆಗೆ ಹೋಗದೆ ಮನೆಯಲ್ಲಿ ಟೀವಿ ನೋಡುತ್ತಿದ್ದಾಗ ರಾಧಾ ಅಲ್ಲಿಗೆ ಬಂದು ಮಡಿಲ ಮೇಲೆ ಕೂರಿಸಿಕೊಂಡು ಬುದ್ಧಿ ಹೇಳಿದಳು. ಈಗ ನೀನು ಓದದೆ ಇದ್ದರೆ ಮುಂದೆ ನಮ್ಮಂತೆ ವೇಶ್ಯೆಯಾಗಿ ಬದುಕಬೇಕಾಗುತ್ತದೆ. ನೀನು ಹಾಗಾಗಬಾರದು ಅಲ್ವಾ? ಚೆನ್ನಾಗಿ ಓದಿ ಒಳ್ಳೆಯ ವ್ಯಕ್ತಿಯಾಗಬೇಕು ಎಂದು ಅವಳು ತಿಳಿಹೇಳಿದ್ದು ಶ್ವೇತಾಳ ಮನಸ್ಸಿಗೆ ನಾಟಿತು. ಅಂದಿನಿಂದ ಚೆನ್ನಾಗಿ ಓದತೊಡಗಿದಳು. ಆದರೆ ರೆಗ್ಯುಲರ್ ಆಗಿ ಶಾಲೆಗೆ ಮಾತ್ರ ಹೋಗುತ್ತಿರಲಿಲ್ಲ.

ಶ್ವೇತಾಗೆ ಇದ್ದ ಏಕೈಕ ಗೆಳತಿಯೆಂದರೆ ಕವಿತಾ ಕತ್ತಿ ಎಂಬ ಹುಡುಗಿ. ಆಕೆ ಇವಳ ಮಲತಂದೆ ರವಿಂದರ್ ಕತ್ತಿಯ ನಿಜವಾದ ಹೆಂಡತಿಯ ಮಗಳು. ರವಿಂದರ್ ಕತ್ತಿವಂದನಾಳನ್ನು ‘ಇಟ್ಟುಕೊಳ್ಳುವುದಕ್ಕಿಂತ’ ಮೊದಲೇ ಶ್ವೇತಾಗೆ ಕವಿತಾ ಜೊತೆ ಸ್ನೇಹವಿತ್ತು. ಅದು ಶ್ವೇತಾ ಅಮೆರಿಕಕ್ಕೆ ಹೋಗುವವರೆಗೂ ಮುಂದುವರೆಯಿತು.

ರಾಧಾ ಬುದ್ಧಿವಾದ ಹೇಳಿದ ನಂತರ ಶ್ವೇತಾ ಸ್ಥಳೀಯ ಎನ್‌ಜಿಒ ಒಂದರ ಟ್ಯೂಷನ್ ಕ್ಲಾಸಿಗೆ ಹೋಗತೊಡಗಿದಳು. ಅದರ ಹೆಸರು ಅಪ್ನೆ ಆಪ್. ಅದು ಲೈಂಗಿಕ ಕಾರ್ಯಕರ್ತೆಯರ ಮಕ್ಕಳಿಗಾಗಿ ನಡೆಸುವ ಟ್ಯೂಶನ್. ಅಲ್ಲಿಗೆ ಶ್ವೇತಾ ಹೋಗುವುದು ರವಿಂದರ್ ಕತ್ತಿಗೆ ಇಷ್ಟವಿರಲಿಲ್ಲ. ಅದಕ್ಕೆ ಶ್ವೇತಾ ತಲೆಕೆಡಿಸಿಕೊಳ್ಳಲಿಲ್ಲ.

ಹೈಸ್ಕೂಲ್ ಮುಗಿಸಿ ಪಿಯುಸಿ ಕಾಲೇಜಿಗೆ ಸೇರಿದರೂ ಶ್ವೇತಾ ಕ್ಲಾಸಿಗೆ ಸರಿಯಾಗಿ ಹೋಗುತ್ತಿರಲಿಲ್ಲ. ಕ್ಯಾಂಪಸ್‌ನಲ್ಲಿ ಓಡಾಡುತ್ತ, ಮರದಡಿಗೆ ಕುಳಿತು ಪುಸ್ತಕ ಓದುತ್ತ ಟೈಂಪಾಸ್ ಮಾಡುತ್ತಿದ್ದಳು. ಅವಳಿಗೆ ಸ್ನೇಹಿತರಿರಲಿಲ್ಲ. ಶಾಲೆಯಲ್ಲಿ ಕೆಟ್ಟ ಹೆಸರುಗಳಿಂದ ಕರೆಯುತ್ತಿದ್ದ ಸ್ನೇಹಿತರಿಂದಾಗಿ ಹೊಸಬರ ಜೊತೆ ಗೆಳೆತನ ಮಾಡುವುದಕ್ಕೆ ಮನಸ್ಸು ಹಿಂಜರಿಯುತ್ತಿತ್ತು. ಹಾಗೆ ನೋಡಿದರೆ ಶಾಲೆಯಲ್ಲಿ ಕೇಳುತ್ತಿದ್ದಷ್ಟು ಬೈಗುಳ ಕಾಲೇಜಿನಲ್ಲಿ ಕೇಳಬೇಕಾಗಿರಲಿಲ್ಲ.

ಅಮೆರಿಕಕ್ಕೆ ಹೋಗುವ ಕನಸು

ಪಿಯುಸಿ ಮುಗಿಯುವುದಕ್ಕೂ ಮೊದಲೇ ಶ್ವೇತಾ ಅಮೆರಿಕಕ್ಕೆ ಹೋಗುವ ಕನಸುಕಾಣತೊಡಗಿದ್ದಳು. ಬುದ್ಧಿ ತಿಳಿದಾಗಿನಿಂದಲೂ ಒಂದಲ್ಲಾ ಒಂದು ದಿನ ನಾನು ಅಮೆರಿಕಕ್ಕೆ ಹೋಗಬೇಕು ಎಂಬುದು ಅವಳ ಆಸೆಯಾಗಿತ್ತು. ಪಿಯುಸಿ ವೇಳೆಗೆ ಅವಳಿಗೆ ಎನ್‌ಜಿಒಗಳ ಸಾಂಗತ್ಯ ಪ್ರಾಪ್ತಿಯಾಗಿತ್ತು. ಅವುಗಳ ಜೊತೆ ಸೇರಿಕೊಂಡು ವೇಶ್ಯೆಯರಲ್ಲಿ ಅರಿವು ಮೂಡಿಸುವ ಕೆಲಸದಲ್ಲಿ ತೊಡಗಿಕೊಂಡಿದ್ದಳು. ಜೊತೆಗೇ ಓದು ಸಾಗಿತ್ತು. ಅವಳಿಗೆ ತನ್ನಲ್ಲಿ ಭರವಸೆ ಮೂಡುತ್ತಿದ್ದುದೇ ಎನ್‌ಜಿಒಗಳಲ್ಲಿ ಎಲ್ಲರೊಂದಿಗೆ ಸೇರಿ ಕೆಲಸ ಮಾಡುವಾಗ. ಅಲ್ಲಿ ಯಾರೂ ಇವಳನ್ನು ಕಾಮಾಟಿಪುರದ ಹುಡುಗಿ ಎಂಬಂತೆ ನೋಡುತ್ತಿರಲಿಲ್ಲ. ಏಕೆಂದರೆ ಅಲ್ಲಿದ್ದವರೆಲ್ಲ ಇಂತಹ ನತದೃಷ್ಟೆಯರೇ ಆಗಿದ್ದರು.

ಸಾಮಾಜಿಕ ಕೆಲಸ ಕಾರ್ಯಗಳಲ್ಲಿತೊಡಗಿಸಿಕೊಂಡಾಗ ಅವಳು ಒಂದೂರಿನಿಂದ ಇನ್ನೊಂದೂರಿಗೆ ಹೋಗಬೇಕಾಗಿತ್ತು. ಲೈಂಗಿಕ ಕಾರ್ಯಕರ್ತೆಯರಿಗಾಗಿ ಕೆಲಸ ಮಾಡುವ ಬೇರೆ ಬೇರೆ ಎನ್‌ಜಿಒಗಳ ಜೊತೆಬೆರೆಯಬೇಕಾಗಿತ್ತು. ಹಾಗೆ ಪರಿಚಯವಾಗಿದ್ದೇ ಕ್ರಾಂತಿ ಎಂಬ ಎನ್‌ಜಿಒ. ಅದು ಶ್ವೇತಾಳ ಓದಿನ ಸಂಪೂರ್ಣ ಹೊಣೆ ಹೊತ್ತಿತು.ಅಲ್ಲಿದ್ದುಕೊಂಡು ಓದುವಾಗಲೇ ಅಮೆರಿಕದ ಬಾರ್ಡ್ ಕಾಲೇಜಿನಲ್ಲಿ ಇವಳಿಗೆ ಪಿಯುಸಿ ನಂತರ ಪದವಿ ಓದಲು ಸ್ಕಾಲರ್‌ಶಿಪ್ ಸಿಕ್ಕಿತು. ಅಮೆರಿಕದಲ್ಲಿ ಮನಶ್ಶಾಸ್ತ್ರ ಓದಬೇಕು, ನಂತರ ವಾಪಸ್ ಬಂದುವೇಶ್ಯೆಯರಿಗೆ ಕೌನ್ಸೆಲಿಂಗ್‌ಮಾಡಿ ಅವರಲ್ಲಿಜೀವನೋತ್ಸಾಹ ತುಂಬುವ ಕೆಲಸ ಮಾಡಬೇಕೆಂಬುದು ಶ್ವೇತಾಳ ಕನಸಾಗಿತ್ತು. ಅದನ್ನು ನನಸಾಗಿಸುವ ಬಾರ್ಡ್ ಕಾಲೇಜಿನ ಸ್ಕಾಲರ್‌ಶಿಪ್ ಸಿಕ್ಕಾಗ ಆಕೆ ಅಕ್ಷರಶಃ ಕುಣಿದುಬಿಟ್ಟಳು. ಪಿಯುಸಿ ಮುಗಿದಾಕ್ಷಣ ಅಮೆರಿಕದ ವಿಮಾನ ಹತ್ತಿದಳು.

ಒಂದು ವಿಶೇಷವೇನು ಗೊತ್ತಾ?ವೇಶ್ಯಾಗೃಹದಲ್ಲಿ ಹುಟ್ಟಿ ಅಮೆರಿಕಕ್ಕೆ ಉನ್ನತ ವಿದ್ಯಾಭ್ಯಾಸಕ್ಕೆಂದು ಹೋದ ಮೊದಲಭಾರತೀಯ ಹುಡುಗಿ ಶ್ವೇತಾ. ಎನ್‌ಜಿಒದ ಸಹಾಯ ಸಿಕ್ಕಿದ್ದರಿಂದ ಅದೃಷ್ಟವಶಾತ್ ಇವಳಿಗೆ ಅಮೆರಿಕಕ್ಕೆ ಹೋಗುವುದು ಸಾಧ್ಯವಾಯಿತು ಎಂದು ಹೇಳುವವರಿದ್ದಾರೆ. ಆದರೆ ಅದರಲ್ಲಿ ಶ್ವೇತಾಳ ಪ್ರಯತ್ನದ ಪಾಲು ಸಾಕಷ್ಟಿದೆ. ಇವಳನ್ನು ಅಮೆರಿಕಕ್ಕೆ ಕಳಿಸಿದ ‘ಕ್ರಾಂತಿಸಂಘಟನೆ’ಯೇ ಆನಂತರ ಇನ್ನೂ ಕೆಲಹುಡುಗಿಯರನ್ನು ಬೇರೆ ಬೇರೆ ದೇಶಗಳಿಗೆ ಓದಲು ಕಳಿಸಿದೆ.

ರೆಡ್‌ಲೈಟಿನಿಂದ ಲೈಮ್‌ಲೈಟಿಗೆ

ಅಮೆರಿಕಕ್ಕೆ ಹೋಗುವವರೆಗೆ ಶ್ವೇತಾ ಎಲ್ಲದಕ್ಕೂ ಬೇರೆಯವರನ್ನು ಅವಲಂಬಿಸಿದ್ದಳು. ಆದರೆ, ಅಲ್ಲಿಗೆ ಹೋದಮೇಲೆ ಅವಳಿಗೆ ತನ್ನಲ್ಲಿ ಅಪಾರ ಆತ್ಮವಿಶ್ವಾಸ ಹುಟ್ಟಿತು. ಅಲ್ಲಿನ ಎನ್‌ಜಿಒಗಳ ಜೊತೆ ಸೇರಿ ಪರಿತ್ಯಕ್ತ ಹೆಣ್ಮಕ್ಕಳ ಒಳಿತಿಗಾಗಿ ಕೆಲಸ ಮಾಡತೊಡಗಿದಳು. ಓದಿನಿಂದ ಒಂದು ವರ್ಷ ರಜೆ ತೆಗೆದುಕೊಂಡು ಬೇರೆ ಬೇರೆ ದೇಶಕ್ಕೆ ಹೋಗಿ ಹೆಣ್ಮಕ್ಕಳಸಬಲೀಕರಣದ ಸಮಾವೇಶಗಳಲ್ಲಿ ಪಾಲ್ಗೊಂಡು ಭಾಷಣ ಮಾಡಿದಳು. ಹೀಗೆ ನೇಪಾಳ, ಜಾರ್ಖಂಡ್, ಗೋವಾಬೆಂಗಳೂರಿಗೂ ಬಂದು ಹೋದಳು. ಒಮ್ಮೆ ಅವಳ ಹೆಸರು ಈ ಕ್ಷೇತ್ರದಲ್ಲಿಪ್ರಚಾರಕ್ಕೆ ಬಂದ ಮೇಲೆ ಶ್ವೇತಾ ಸ್ಟಾರ್ ಆಗಿಬಿಟ್ಟಳು. ಅದರಲ್ಲಿಎನ್‌ಜಿಒಗಳ ಪಾತ್ರವೂ ಸಾಕಷ್ಟು ಇತ್ತೆನ್ನಿ. ಆದರೆ ಶ್ವೇತಾಕಮ್ಮಿಯೇನಲ್ಲ.ಅಮೆರಿಕನ್ ಹುಡುಗಿಯರಷ್ಟೇ ಅದ್ಭುತವಾಗಿ ಇಂಗ್ಲಿಷ್ ಮಾತನಾಡತೊಡಗಿದಳು. ಕಾಮಾಟಿಪುರದ ಬಗ್ಗೆ ಕೇಳಿ-ನೋಡಿ ತಿಳಿದಿದ್ದ ಕೆಲ ಅಮೆರಿಕದ ಸಂಪನ್ಮೂಲ ವ್ಯಕ್ತಿಗಳಿಗೆ ಇವಳನ್ನು ನೋಡಿ ಅಚ್ಚರಿಯಾಯಿತು. ಅಂತಹ ಪ್ರದೇಶದಿಂದ ಬಂದ ಹುಡುಗಿಯೊಬ್ಬಳು ಈ ಮಟ್ಟಕ್ಕೆ ಬೆಳೆಯುತ್ತಾಳೆಂದರೆ ಅದೊಂದು ವಿಸ್ಮಯ ಎಂಬಂತೆ ಪ್ರಚಾರ ನೀಡಿದರು.ಅದು ವಿಶ್ವಸಂಸ್ಥೆಯನ್ನೂ ತಲುಪಿತು. ಶ್ವೇತಾಗೆವಿಶ್ವಸಂಸ್ಥೆಯ 2014ರ ಯುವ ಸಾಧಕಿ ಪ್ರಶಸ್ತಿ ಬಂತು.

ಒಂದು ವರ್ಷದ ಓಡಾಟ ಮುಗಿಸಿ ಶ್ವೇತಾ ಈಗ ಮತ್ತೆ ಕಾಲೇಜಿಗೆ ಹೋಗುತ್ತಿದ್ದಾಳೆ. 2017ರ ವೇಳೆಗೆ ಅವಳು ಸೈಕಾಲಜಿಪದವೀಧರೆಯಾಗುತ್ತಾಳೆ. ಆಮೇಲೆ ಭಾರತಕ್ಕೆ ಬಂದು ವೇಶ್ಯಾವಾಟಿಕೆಯಲ್ಲಿರುವ ಮಹಿಳೆಯರ ಒಳಿತಿಗೆ ಕೆಲಸ ಮಾಡಬೇಕೆಂಬುದು ಅವಳ ಕನಸು. ಅವಳನ್ನು ಅಮೆರಿಕಕ್ಕೆ ಕಳಿಸಿದ ಕ್ರಾಂತಿ ಎನ್‌ಜಿಒ ಕೂಡ ಶ್ವೇತಾ ಮರಳಿ ಬಂದು ತಮ್ಮ ಸಂಘಟನೆಯನ್ನು ಬಲಪಡಿಸುತ್ತಾಳೆ ಎಂಬ ನಿರೀಕ್ಷೆಯಲ್ಲಿದೆ. ಬರದಿದ್ದರೆ ಚಿಂತೆಯಿಲ್ಲ, ಅವಳ ಬದುಕನ್ನು ಎಲ್ಲಿ ಬೇಕಾದರೂಕಟ್ಟಿಕೊಳ್ಳುವ ಸ್ವಾತಂತ್ರ್ಯ ಅವಳಿಗಿದೆ ಎಂಬುದು ‘ಕ್ರಾಂತಿ’ಯ ದೊಡ್ಡಗುಣ. ಶ್ವೇತಾ ಬರುತ್ತಾಳಾ? ಬದಲಾಗಬೇಕಾದ ಕಾಮಾಟಿಪುರ ಅವಳ ನಿರೀಕ್ಷೆಯಲ್ಲಿದೆ.

-ಸುಗಂಧರಾಜ

Write A Comment