ಮುಂಬೈ

ಸಮಯೋಚಿತ ನಡೆಯಿಂದ ಗೆಳತಿ ಮಾನ ರಕ್ಷಿಸಿದ ಯುವಕ..!

Pinterest LinkedIn Tumblr

man

ಮುಂಬೈ: ಯುವಕನೊಬ್ಬ ತನ್ನ ಸಹೋದ್ಯೋಗಿ ಯುವತಿಯೊಂದಿಗೆ ರಾತ್ರಿ ವೇಳೆ ಬೈಕಿನಲ್ಲಿ ಬರುತ್ತಿದ್ದಾಗ ನಕಲಿ ಪೊಲೀಸರಿಬ್ಬರು ಅವರನ್ನು ಅಡ್ಡಗಟ್ಟಿ ಯುವತಿಯನ್ನು ತಮ್ಮ ಬೈಕಿನಲ್ಲಿ ಕೂರಿಸಿಕೊಂಡು ಹೊರಟಿದ್ದು, ಈ ವೇಳೆ ಯುವಕ ತೋರಿದ ಸಮಯಪ್ರಜ್ಞೆಯಿಂದಾಗಿ ದೊಡ್ಡ ದುರಂತ ತಪ್ಪಿದಂತಾಗಿದೆ.

ಮುಂಬೈನಲ್ಲಿ ಈ ಘಟನೆ ನಡೆದಿದ್ದು, ಯುವಕ ಹಾಗೂ ಯುವತಿ ಬೈಕಿನಲ್ಲಿ ಬರುತ್ತಿರುವ ವೇಳೆ ಪೊಲೀಸ್ ವಿಷಲ್ ಹಾಕಿದ ಇಬ್ಬರು ವ್ಯಕ್ತಿಗಳು ಇವರನ್ನು ತಡೆದಿದ್ದಾರೆ. ಪೊಲೀಸರೆಂದು ಭಾವಿಸಿ ಬೈಕ್ ನಿಲ್ಲಿಸಿದ ಬಳಿಕ ಒಬ್ಬಾತ ಯುವಕನ ಡ್ರೈವಿಂಗ್ ಲೈಸೆನ್ಸ್ ಕೇಳಿದ್ದಾನೆ. ಅದನ್ನು ನೀಡಿದಾಗ ಹರಿದು ಹಾಕಿದ ಅವರುಗಳು ತಮ್ಮೊಂದಿಗೆ ಠಾಣೆಗೆ ಬರುವಂತೆ ತಿಳಿಸಿದ್ದಾರೆ.

ಒಬ್ಬಾತ ಯುವಕನನ್ನು ತನ್ನ ಬೈಕಿನಲ್ಲಿ ಕೂರಿಸಿಕೊಂಡರೆ, ಮತ್ತೊಬ್ಬ ಆರೋಪಿ ಯುವಕನ ಬೈಕಿನಲ್ಲಿ ಆತನೊಂದಿಗಿದ್ದ ಯುವತಿಯನ್ನು ಕೂರಿಸಿಕೊಂಡು ಹೊರಟಿದ್ದಾನೆ. ಆದರೆ ಅವರು ಪೊಲೀಸ್ ಠಾಣೆಗೆ ತೆರಳದೆ ನಿರ್ಜನ ಪ್ರದೇಶದತ್ತ ವಾಹನ ತಿರುಗಿಸಿದ್ದಾರೆ. ಆಪಾಯದ ಮುನ್ಸೂಚನೆ ಅರಿತ ಯುವಕ ಸಹಾಯಕ್ಕಾಗಿ ಜೋರಾಗಿ ಕಿರುಚಿಕೊಂಡಿದ್ದಾನಲ್ಲದೇ ಬೈಕಿನ ಕೀ ಯನ್ನು ತೆಗೆದು ಬಿಸಾಡಿದ್ದಾನೆ.

ಇವರುಗಳ ಅದೃಷ್ಟಕ್ಕೆ ಸನಿಹದಲ್ಲೇ ರಾತ್ರಿ ಪಾಳಿಯ ಪೊಲೀಸರು ಗಸ್ತು ತಿರುಗುತ್ತಿದ್ದು, ಯುವಕನ ಕಿರುಚಾಟ ಕೇಳಿ ಓಡಿ ಬಂದಿದ್ದಾರೆ. ಪರಾರಿಯಾಗಲು ಯತ್ನಿಸಿದ ಇಬ್ಬರು ಆರೋಪಿಗಳ ಪೈಕಿ ಒಬ್ಬನನ್ನು ಸ್ಥಳದಲ್ಲಿಯೇ ವಶಕ್ಕೆ ಪಡೆದಿದ್ದು, ಮತ್ತೊಬ್ಬನನ್ನು ಮರು ದಿನ ಬಂಧಿಸಿದ್ದಾರೆ. ಬಂಧಿತ ಆರೋಪಿಗಳ ವಿರುದ್ದ ಹಲವು ಪ್ರಕರಣಗಳನ್ನು ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳನ್ನು ಜೈಲಿಗೆ ಕಳುಹಿಸಿದ್ದಾರೆ.

Write A Comment