ಕರ್ನಾಟಕ

ಪೇಜಾವರ ಶ್ರೀಗಳ ಬಗ್ಗೆ ಅವಹೇಳನಕಾರಿ ಹೇಳಿಕೆ; ಪರ-ವಿರೋಧ ಚರ್ಚೆ ಬಳಿಕ ಕ್ಷಮೆ ಕೇಳಿದ ಹಂಸಲೇಖ

Pinterest LinkedIn Tumblr

ಬೆಂಗಳೂರು: ಖ್ಯಾತ ಚಲನಚಿತ್ರ ಸಂಗೀತ ನಿರ್ದೇಶಕ, ಸಾಹಿತಿ ಹಂಸಲೇಖ ಪೇಜಾವರ ಶ್ರೀಗಳ ಬಗ್ಗೆ ಅವಹೇಳನಕಾರಿ ಹೇಳಿಕೆ ನೀಡಿ ವಿವಾದಕ್ಕೀಡಾದ ಘಟನೆ ನಡೆದಿದೆ. ಸಾರ್ವಜನಿಕ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿರುವ ವಿಚಾರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ವ್ಯಾಪಕವಾಗಿ ಪರ ವಿರೋಧ ಚರ್ಚೆ ನಡೆದಿತ್ತು. ನೆಟ್ಟಿಗರು ಹಂಸಲೇಖ ಮಾತುಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು ಈ ಹಿನ್ನೆಲೆಯಲ್ಲಿ ಅವರು ವಿಡಿಯೋ ಮುಖಾಂತರ ಕ್ಷಮೆ ಕೇಳಿದ್ದಾರೆ.

ಸಾರ್ವಜನಿಕ ಕಾರ್ಯಕ್ರಮ ಒಂದರಲ್ಲಿ ನಾದಬ್ರಹ್ಮ ಹಂಸಲೇಖ ಪೇಜಾವರ ಶ್ರೀಗಳ ಬಗ್ಗೆ ಮಾತನಾಡಿರುವುದು ಸಾಮಾಜಿಕ ಜಾಲತಾಣದಲ್ಲಿ ವಿವಾದ ಹುಟ್ಟುಹಾಕಿತ್ತು. ಫೇಸ್ಬುಕ್​ನಲ್ಲಿ ಜನರು ವಿವಿಧ ರೀತಿಯ ಕಮೆಂಟ್​ಗಳನ್ನು ಮಾಡಿ ವಿಡಿಯೋ ಹಂಚಿಕೊಂಡಿದ್ದರು. ಈ ವಿವಾದವನ್ನು ಉದ್ದೇಶಿಸಿ ಕ್ಷಮೆ ಕೇಳುವ ಮೂಲಕ ಹಂಸಲೇಖ ಪ್ರತಿಕ್ರಿಯೆ ನೀಡಿದ್ದಾರೆ.

”ನನಗೆ ಗೊತ್ತಿದೆ. ಎಲ್ಲಾ ಮಾತುಗಳಿಗೂ ಅದು ವೇದಿಕೆಯಲ್ಲ, ತಪ್ಪು. ಆ ವೇದಿಕೆಯಲ್ಲಿ ನುಡಿದರೆ ಮುತ್ತಿನಹಾರದಂತಿರಬೇಕು ಎಂದು ಇರಬೇಕಿತ್ತು. ಆದರೆ, ತಪ್ಪಾಗಿದೆ. ಅಸ್ಪ್ರಶ್ಯತೆ ಎಂಬುದು ನಮ್ಮ ದೇಶಕ್ಕೆ ಅಂಟಿದ ಶಾಪ. ಈ ಅನಿಷ್ಠವನ್ನು ತೊಡೆದು ಹಾಕುವುದಕ್ಕೆ ಪೇಜಾವರರಂಥ ಗುರುಹಿರಿಯರು ಅಪಾರ ಪ್ರಯತ್ನ ನಡೆಸುತ್ತಿದ್ದಾರೆ. ಅದರ ಬಗ್ಗೆ ನನಗೆ ಆ ಬಗ್ಗೆ ಅಪಾರ ಗೌರವವಿದೆ” ಎಂದು ಹೇಳಿದ್ದಾರೆ.

“ನಾನು ಒಬ್ಬ ಸಂಗೀತಗಾರ. ನಮಗ್ಯಾಕೆ ಟ್ರೋಲು, ಕಂಟ್ರೋಲ್ ಆಗಿರುವುದು ನಮ್ಮ ಕೆಲಸ. ನನಗೆ ಯಾರಿಗೂ ನೋವು ಕೊಡಲು ಇಷ್ಟವಿಲ್ಲ. ನನ್ನ ಸಂಗೀತದಂತೆ ನನ್ನ ಮಾತು, ಬದುಕು ಕೂಡ ಎಲ್ಲರಿಗೂ ಸುಖ ಕೊಡಬೇಕು. ಆದರೆ, ಎಲ್ಲಾ ಅನಿಷ್ಠಗಳನ್ನು ತೊಡೆದು ಹಾಕುವ ದಿಸೆಯಲ್ಲಿ ನನ್ನ ಪಾತ್ರವೂ ಯಾವುದೇ ಮೂಲಕ ಇದ್ದರೆ ಅದನ್ನು ನಾನು ಮಾಡಿಯೇ ಮಾಡ್ತೇನೆ” ಎಂದು ಹೇಳಿದ್ದಾರೆ.

ಹಂಸಲೇಖರ ಮೊದಲ ಹೇಳಿಕೆ….
ಪೇಜಾವರ ಸ್ವಾಮಿಗಳು ದಲಿತರ ಮನೆಗೆ ವಾಸ್ತವ್ಯಕ್ಕೆ ಹೋಗಿದ್ದಾರೆ ಅಂತ ಸ್ಟೇಟ್‌ಮೆಂಟ್ ಬಂದಿದೆ. ಪೇಜಾವರ ಸ್ವಾಮಿಗಳು ದಲಿತರ ಮನೆಗೆ ಹೋಗಿ ಅಲ್ಲಿ ಕುಳಿತು ಕೊಳ್ಳಬಹುದಷ್ಟೇ, ಅವರು ಕೋಳಿ ಕೊಟ್ಟರೆ ತಿನ್ನೋಕೆ ಆಗುತ್ತದೆಯೇ..? ಕೋಳಿ ಬೇಡ, ಕುರಿ ರಕ್ತದ ಫ್ರೈ ಮಾಡಿಕೊಟ್ಟರೆ ತಿಂತಾರಾ..? ಲಿವರ್ ಫ್ರೈ ತಿಂತಾರಾ, ಆಗತ್ತಾ..? ಅಂದರೆ, ದಲಿತರ ಮನೆಗೆ ಬಲಿತರು ಹೋಗೋದು ಏನ್ ದೊಡ್ಡ ವಿಷ್ಯಾ ಅಂತ ನಂಗ್ ಅನ್ನಿಸ್ತು ಕುಮಾರಸ್ವಾಮಿ ಅವರು ಗ್ರಾಮ ವಾಸ್ತವ್ಯ ಅಂತ ಶುರು ಮಾಡಿದ್ರು. ಈಗ ಎಲ್ಲರೂ ಗ್ರಾಮ ವಾಸ್ತವ್ಯ ಶುರು ಮಾಡಿದ್ದಾರೆ ಎಂದು ಹೇಳಿದ್ದರು.

‘ಬಿಳಿಗಿರಿ ರಂಗಯ್ಯ ಸೋಲಿಗರ ಮನೆಯ ಹೆಣ್ಣಿನೊಂದಿಗೆ ರಮಿಸಿದರೆ, ಅದರಲ್ಲಿ ಏನ್ ದೊಡ್ಡ ವಿಷ್ಯ ಇದೆ? ಅದೇ ಸೋಲಿಗರ ಹೆಣ್ಣು ಮಗಳನ್ನು ಕರೆದುಕೊಂಡು ಹೋಗಿ ತನ್ನ ದೇವಾಲಯದಲ್ಲಿ ಇಟ್ಟು ಗೌರವಿಸಿದ್ದರೆ, ಅದು ಬಿಳಿಗಿರಿ ರಂಗಯ್ಯನ ತಾಕತ್ತು. ಸೂರ್ಯ ಉದಯಿಸುವುದಕ್ಕಿಂತ ಮುಂಚೆ ಸೋಲಿಗರ ಮನೆಗೆ ಬಂದು ಆ ಹೆಣ್ಣು ಮಗಳೊಂದಿಗೆ ಬಿಳಿಗಿರಿ ರಂಗಯ್ಯ ಸಂಸಾರ ನಡೆಸಿ ಬೆಳಕು ಹರಿಯುವುದರೊಳಗೆ ಹೋಗಿ ಕಲ್ಲಾಗುತ್ತಾನಂತೆ! ಅದೇನು ದೊಡ್ಡ ವಿಷಯ, ಅದೊಂದು ನಾಟಕ, ಬೂಟಾಟಿಕೆ.

ದಲಿತರ ಮನೆಗೆ ಬಲಿತರು ಹೋಗುವುದು ಅದೇನು ದೊಡ್ಡ ವಿಷಯವೇ..? ದಲಿತರನ್ನು ಬಲಿತರು ತಮ್ಮ ಮನೆಗಳಿಗೆ ಕರೆದುಕೊಂಡು ಹೋಗಬೇಕು. ಅವರ ಮನೆಯಲ್ಲಿ ಊಟ ಹಾಕಬೇಕು, ದಲಿತರ ಮುಟ್ಟಿದ ಲೋಟಗಳನ್ನು ನಾವು ತೊಳೆಯುತ್ತೀವಿ ಎಂದು ಬಲಿತರು ಹೇಳಬೇಕು’ ಎಂದು ಹಂಸಲೇಖ ಹೇಳಿದ್ದಾರೆ.

 

Comments are closed.