ಕರ್ನಾಟಕ

ಹಾನಗಲ್, ಸಿಂದಗಿ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಫಲಿತಾಂಶ ಇಂದು: ಮತ ಎಣಿಕೆ ಆರಂಭ

Pinterest LinkedIn Tumblr

ಬೆಂಗಳೂರು: ರಾಜ್ಯದ ಆಡಳಿತ ಪಕ್ಷ ಬಿಜೆಪಿ, ವಿರೋಧ ಪಕ್ಷಗಳಾದ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಪ್ರತಿಷ್ಠೆಯ ಕಣವಾಗಿರುವ ಸಿಂದಗಿ ಮತ್ತು ಹಾನಗಲ್ ಕ್ಷೇತ್ರಗಳ ಉಪ ಚುನಾವಣೆ ಫಲಿತಾಂಶ ನ.2 ಮಂಗಳವಾರ ಮಧ್ಯಾಹ್ನ ಹೊತ್ತಿಗೆ ಹೊರಬೀಳಲಿದೆ. 8 ಗಂಟೆಯ ಹೊತ್ತಿಗೆ ಮತ ಎಣಿಕೆ ಕಾರ್ಯ ಆರಂಭವಾಗಿದೆ.

ಸಿಂದಗಿ ಕ್ಷೇತ್ರದ ಉಪ ಚುನಾವಣೆಯ ಮತ ಎಣಿಕೆ ಕಾರ್ಯ ವಿಜಯಪುರದ ಸೈನಿಕ ಶಾಲೆಯಲ್ಲಿ ನಡೆಯಲಿದ್ದು ಹಾನಗಲ್ ಕ್ಷೇತ್ರದ ಮತ ಎಣಿಕೆ ಕಾರ್ಯ ಹಾವೇರಿಯ ಸರ್ಕಾರಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆಯುತ್ತಿದೆ. ಮೊದಲಿಗೆ ಎರಡು ಕ್ಷೇತ್ರದಲ್ಲಿ ಅಂಚೆ ಮತ್ತು ಸೇವಾ ಮತಗಳ ಎಣಿಕೆ ನಡೆಯುತ್ತಿದೆ.

ಅ. 30ರಂದು ಆ ಎರಡು ಕ್ಷೇತ್ರಗಳಿಗೆ ನಡೆದ ಮತದಾನದಲ್ಲಿ ಸಿಂದಗಿ ಕ್ಷೇತ್ರದಲ್ಲಿ ಶೇಕಡಾ 69.41ರಷ್ಟು ಮತ್ತು ಹಾನಗಲ್ ನಲ್ಲಿ ಶೇಕಡಾ 83.72ರಷ್ಟು ಮತದಾನವಾಗಿದೆ. ಸಿಂದಗಿನಲ್ಲಿ 22 ಸುತ್ತು, ಹಾನಗಲ್ ಅಲ್ಲಿ 19 ಸುತ್ತಿನ ಮತ ಎಣಿಕೆ ಬಳಿಕ ಫಲಿತಾಂಶ ಹೊರಬೀಳಲಿದೆ.

ಸಿಂದಗಿ ಕ್ಷೇತ್ರದಲ್ಲಿ ಬಿಜೆಪಿಯಿಂದ ರಮೇಶ್ ಭೂಸನೂರು, ಹಾನಗಲ್ ನಿಂದ ಬಿಜೆಪಿಯಿಂದ ಶಿವರಾಜ್ ಸಜ್ಜನರ್, ಕಾಂಗ್ರೆಸ್ ನಿಂದ ಸಿಂದಗಿ ಕ್ಷೇತ್ರದಲ್ಲಿ ಅಶೋಕ್ ಮನಗೂಳಿ, ಹಾನಗಲ್ ನಿಂದ ಶ್ರೀನಿವಾಸ್ ಮಾನೆ, ಜೆಡಿಎಸ್ ನಿಂದ ಸಿಂದಗಿಯಲ್ಲಿ ನಾಜಿಯಾ ಶಕಿಲಾ ಅಂಗಡಿ, ಹಾನಗಲ್ ನಿಂದ ನಿಯಾಜ್ ಖಾನ್ ಸ್ಪರ್ಧಿಸಿದ್ದಾರೆ.

ಮತ ಎಣಿಕೆ ಕೇಂದ್ರಗಳಲ್ಲಿ ಭದ್ರತೆ:
ಮತ ಎಣಿಕೆ ನಡೆಯುವಾಗ ಮತ್ತು ಫಲಿತಾಂಶ ಹೊರಬಿದ್ದ ಮೇಲೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ.

Comments are closed.