ಕರ್ನಾಟಕ

ಬೆಂಗಳೂರಿನ ಒಂಟಿ ಮಹಿಳೆಯ ಬರ್ಬರ ಕೊಲೆ; ಅಪ್ರಾಪ್ತ ಯುವಕ ಪೊಲೀಸರ ವಶಕ್ಕೆ..!

Pinterest LinkedIn Tumblr

ಬೆಂಗಳೂರು: ಬೆಚ್ಚಿ ಬೀಳಿಸಿದ್ದ ಒಂಟಿ ಮಹಿಳೆಯ ಬರ್ಬರ ಹತ್ಯೆ ಪ್ರಕರಣ ಸಂಬಂಧ ತನಿಖೆ ಕೈಗೊಂಡ ಕೆಲವೇ ಗಂಟೆಗಳಲ್ಲಿ ಬನಶಂಕರಿ ಪೊಲೀಸರು ಹಂತಕನನ್ನು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬನಶಂಕರಿ ಯಾರಬ್ ನಗರದ ಮನೆಯೊಂದರಲ್ಲಿ ನಿನ್ನೆ ಸಂಜೆ 28 ವರ್ಷದ ಅಫ್ರೀಂ ಖಾನಂ ಎಂಬುವರ ಹತ್ಯೆಯಾಗಿತ್ತು‌.‌ ಮೆಲ್ನೋಟಕ್ಕೆ ಮಹಿಳೆಯ ಕೊಲೆಯನ್ನು ಪತಿಯೇ ಮಾಡಿರಬಹುದು ಎಂದು ಪೊಲೀಸರು ಪ್ರಾಥಮಿಕ ತನಿಖೆಯಲ್ಲಿ ಶಂಕೆ ವ್ಯಕ್ತಪಡಿಸಿದ್ದರು‌‌. ಈ ಸಂಬಂಧ ವಿಚಾರಣೆ ನಡೆಸಿದ್ದ ಇನ್ಸ್​ಪೆಕ್ಟರ್ ಪುಟ್ಟಸ್ವಾಮಿ ನೇತೃತ್ವದ ತಂಡ ಮಹಿಳೆಯ ಪತಿ ಹಾಗೂ ಸಂಬಂಧಿಕರನ್ನು ಪ್ರಶ್ನಿಸಿದಾಗ ಹತ್ಯೆಗೆ ಗಂಡನಲ್ಲ, ಸಂಬಂಧಿಕನೇ ಕಾರಣ ಎಂಬುದು ತಿಳಿದುಬಮದಿದೆ.

ಮಹಿಳೆಯ ಸಂಬಂಧಿಕನಾಗಿದ್ದ 17 ವರ್ಷದ ಯುವಕನನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಕೋಣನಕುಂಟೆಯಲ್ಲಿ ವಾಸವಾಗಿದ್ದ ಬಾಲಕ‌, ಖಾಸಗಿ ಕಾಲೇಜಿನಲ್ಲಿ ಫಸ್ಟ್ ಪಿಯು ವ್ಯಾಸಂಗ ಮಾಡುತ್ತಿದ್ದ.

ಯಾರಬ್ ನಗರದಲ್ಲಿ ನಾಲ್ಕು ವರ್ಷಗಳಿಂದ ಮೃತ ಮಹಿಳೆ ಅಫ್ರೀಂ ಖಾನಂ ಈಕೆಯ ಪತಿ ಲಾಲು ವಾಸವಾಗಿದ್ದರು. ಪತಿ ಟಿಂಬರ್ ಯಾರ್ಡ್​ನಲ್ಲಿ ಕೆಲಸ‌ ಮಾಡುತ್ತಿದ್ದ‌. ಇವರು ಎಂಟು ವರ್ಷಗಳ ಹಿಂದೆ ಮದುವೆಯಾಗಿದ್ದು, ಇಬ್ಬರು‌ ಮಕ್ಕಳಿದ್ದಾರೆ. ಕಳೆದ‌‌ ಆರು ತಿಂಗಳಿಂದ ಕೌಟುಂಬಿಕ ಕಾರಣಕ್ಕಾಗಿ ಇಬ್ಬರ ನಡುವೆ ಜಗಳವಾಗುತಿತ್ತು. ಪತ್ನಿಯು ಬೇರೆಯವರೊಂದಿಗೆ ಸಂಬಂಧ ಹೊಂದಿರುವುದಾಗಿ ಪತಿ ಗಲಾಟೆ ಮಾಡುತ್ತಿದ್ದ. ಇದೇ ವಿಚಾರವಾಗಿ ಸೋಮವಾರ ಇಬ್ಬರು ನಡುವೆ ಜಗಳವಾಗಿತ್ತು. ಮೊಮ್ಮಕ್ಕಳನ್ನು ಕರೆದುಕೊಂಡು ಹೋಗುವಂತೆ ಪತ್ನಿಯ ತಾಯಿಗೆ ಲಾಲು ಸೂಚಿಸಿ ಕೆಲಸಕ್ಕೆ ಹೋಗಿದ್ದ. ಯಾರೂ ಇಲ್ಲದಿರುವುದನ್ನು ಮನಗಂಡಿದ್ದ ಸಂಬಂಧಿಕನಾಗಿದ್ದ ಬಾಲಕ‌ ಮಹಿಳೆ ಮನೆಗೆ ಬಂದಿದ್ದ. ಕಳೆದ ಆರು ತಿಂಗಳಿಂದ ಇಬ್ಬರ ನಡುವೆ ಅನೈತಿಕ ಸಂಬಂಧವಿತ್ತು ಎನ್ನಲಾಗಿದೆ. ಗಂಡನ ಕಿರುಕುಳ ತಾಳಲಾರದೆ ಬಾಲಕನಿಗೆ ಎಲ್ಲಾದರೂ ದೂರ ಹೋಗೋಣ ಎಂದು ಮಹಿಳೆ ಹೇಳುತ್ತಿದ್ದಳಂತೆ. ಇದಕ್ಕೆ ಬಾಲಕ ವಿರೋಧ ವ್ಯಕ್ತಪಡಿಸಿದ್ದ. ನಿನ್ನೆ ಮಧ್ಯಾಹ್ನ ಸಹ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದೆ. ನೋಡು ನೋಡುತ್ತಿದ್ದಂತೆ ಜಗಳ ವಿಕೋಪಕ್ಕೆ ಹೋಗಿದೆ.ಇಬ್ಬರ ಜಗಳ ಕೊಲೆಯಲ್ಲಿ ಅಂತ್ಯಇಬ್ಬರು ಹೊಡೆದಾಡಿಕೊಂಡಿದ್ದಾರೆ. ಈ ವೇಳೆ ಮನೆಯಲ್ಲಿದ್ದ ಚಾಕು ಹಾಗೂ ಕತ್ತರಿಯಿಂದ ಬಾಲಕ ಮನಬಂದಂತೆ ಚುಚ್ಚಿದ್ದಾನೆ‌. ತೀವ್ರವಾಗಿ ಗಾಯಗೊಂಡ ಮಹಿಳೆ ಮೃತಪಟ್ಟಿದ್ದಾಳೆ. ಸಹಜ ಸಾವು ಎಂದು ಬಿಂಬಿಸಲು ಬೆಡ್​ಶೀಟ್​ಗೆ ಗ್ಯಾಸ್​ನಿಂದ ಬೆಂಕಿ ಹಚ್ಚಿಸಿಕೊಂಡು, ಹಾಸಿಗೆಗೆ ಬೆಂಕಿ ಹತ್ತಿಸಿದ್ದಾನೆ. ಆತಂಕದಿಂದಲೇ ಮನೆಗೆ ಬೀಗ ಹಾಕಿ ತಪ್ಪಿಸಿಕೊಂಡಿದ್ದಾನೆ. ಹಾಸಿಗೆ ಬೆಂಕಿ ಕಿಡಿ ಸಣ್ಣ ಪ್ರಮಾಣದಲ್ಲಿ ಹೊತ್ತಿಕೊಂಡಿತ್ತು. ಬಳಿಕ ಮನೆಯಿಂದ ಹೊಗೆ ಬರುತ್ತಿರುವುದನ್ನು‌ ಕಂಡು ಸ್ಥಳೀಯರು ಹಾಗೂ ಸಂಬಂಧಿಕರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದರು.

Comments are closed.