ಕರ್ನಾಟಕ

ಪೊಲೀಸರು ಧರಿಸಿದ ಕೇಸರಿ ಉಡುಗೆ ಬಗ್ಗೆ ಸರಕಾರದ ವಿರುದ್ಧ ಮಾಜಿ ಸಿಎಂ ಸಿದ್ಧರಾಮಯ್ಯ ವಾಗ್ದಾಳಿ

Pinterest LinkedIn Tumblr

ಬೆಂಗಳೂರು: ಮಂಗಳೂರಿನಲ್ಲಿ ಬಜರಂಗದಳ ಕಾರ್ಯಕರ್ತರಿಗೆ ತ್ರಿಶೂಲ ದೀಕ್ಷೆ ಹಾಗೂ ವಿಜಯಪುರ, ಹಾಗೂ ಉಡುಪಿ ಕಾಪು ಪೊಲೀಸ್ ಠಾಣೆಯ ಸಿಬ್ಬಂದಿ ಮೊಮ್ಮೆ ಹಬ್ಬದ ದಿನ ಧರಿಸಿದ ಉಡುಗೆ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, ಕಾಡಿನ‌ ಕಾನೂನನ್ನು ಜಾರಿಗೆ ತರಲು ಬೀದಿಗಿಳಿದಂತಿದೆ ಎಂದು ರಾಜ್ಯ ಸರ್ಕಾರ ಹಾಗೂ ಪೊಲೀಸ್ ಇಲಾಖೆ ವಿರುದ್ಧ ಕಿಡಿಕಾರಿದ್ದಾರೆ.

ಪೊಲೀಸರ ಧಿರಿಸು ಮಾತ್ರ ಯಾಕೆ ಬದಲಾಯಿಸಿದ್ದೀರಿ ಮುಖ್ಯಮಂತ್ರಿಗಳೇ? ಅವರ ಕೈಗೆ ತ್ರಿಶೂಲಗಳನ್ನೂ ಕೊಟ್ಟು ಹಿಂಸೆಯ ದೀಕ್ಷೆ ಕೊಟ್ಟು ಬಿಡಿ. ಅಲ್ಲಿಗೆ ನಿಮ್ಮ ಜಂಗಲ್ ರಾಜ್ ಸ್ಥಾಪನೆಯ‌ ಕನಸು ನನಸಾಗಬಹುದು ಎಂದು ಹರಿಹಾಯ್ದಿದ್ದಾರೆ.

ಒಂದೆಡೆ ಅಮಾಯಕ ಯುವಕ-ಯುವತಿಯರ ಮೇಲೆ ಅನೈತಿಕ‌ ಪೊಲೀಸ್‌ಗಿರಿಯ ದೌರ್ಜನ್ಯ ಇನ್ನೊಂದೆಡೆ ಶಾಸಕರಿಂದಲೇ ಠಾಣೆಗೆ ನುಗ್ಗಿ ಆರೋಪಿಗಳ ಬಿಡುಗಡೆ… ಮತ್ತೊಂದೆಡೆ ಬಹಿರಂಗವಾಗಿ ತ್ರಿಶೂಲ ಹಂಚಿ ಹಿಂಸಾಚಾರಕ್ಕೆ ಕರೆ ಇದಕ್ಕೆಲ್ಲ ಮುಖ್ಯಮಂತ್ರಿಗಳ ಬಹಿರಂಗ ಬೆಂಬಲ, ರಾಜ್ಯದಲ್ಲಿ ಸರ್ಕಾರ ಇದೆಯೇ? ಎಂದೂ ಅವರು ಪ್ರಶ್ನಿಸಿದ್ದಾರೆ.

ಗೂಂಡಾಗಿರಿಯನ್ನು ಕ್ರಿಯೆಗೆ ಪ್ರತಿಕ್ರಿಯೆ ಎಂದು ಸಮರ್ಥಿಸಿದ ‘ಸಿಎಂ ಕರೆಗೆ ಓಗೊಟ್ಟು ಪೊಲೀಸರು ನೆಲದ ಕಾನೂನನ್ನು ಠಾಣೆಯೊಳಗೆ ಕೂಡಿ ಹಾಕಿ ಕಾಡಿನ ಕಾನೂನನ್ನು ಜಾರಿಗೆ ತರಲು ಬೀದಿಗಿಳಿದಂತಿದೆ’. ಹಾಗಾಗಿ ‘ನಾಡಿನ ಜನತೆ ತಮ್ಮ ಸುರಕ್ಷತೆಗಾಗಿ ಮನೆಯೊಳಗೆ ಇರುವುದು ಕ್ಷೇಮಕರ’ ಎಂದು ಸರಣಿ ಟ್ವೀಟ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.

ಕರ್ನಾಟಕದ ಜನಪರವಾದ ಉತ್ತಮ ಆಡಳಿತಕ್ಕೆ ಒಂದು ಗೌರವದ ಪರಂಪರೆ ಇದೆ. ಇದು ಯೋಗಿ ಆದಿತ್ಯನಾಥ್ ಅವರ ಉತ್ತರ ಪ್ರದೇಶದ ಜಂಗರ್ ರಾಜ್ ಅಲ್ಲ. ಬೊಮ್ಮಾಯಿ ಅವರೇ ಸಂವಿಧಾನಬದ್ಧವಾಗಿ ಆಡಳಿತ ನಡೆಸಲು ಸಾಧ್ಯವಾಗದಿದ್ದರೆ ದಯವಿಟ್ಟು ರಾಜೀನಾಮೆ ಕೊಟ್ಟು ಪ್ರಜಾಪ್ರಭುತ್ವ ಉಳಿಸಿ ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

Comments are closed.