ಬೆಂಗಳೂರು: ನಟ ದಿ. ಚಿರಂಜೀವಿ ಸರ್ಜಾ-ಮೇಘನಾ ರಾಜ್ ಪುತ್ರನಿಗೆ ಇತ್ತೀಚೆಗಷ್ಟೇ ಹಿಂದೂ ಮತ್ತು ಕ್ರೈಸ್ತ ಸಂಪ್ರದಾಯಗಳ ಪ್ರಕಾರ ರಾಯನ್ ರಾಜ್ ಸರ್ಜಾ ಎಂದು ಹೆಸರು ಇಡಲಾಗಿದೆ.

ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಭಾರಿ ಚರ್ಚೆ ಆಗುತ್ತಿದ್ದು ಹಿಂದೂ ಸಂಪ್ರದಾಯದ ಜೊತೆಗೆ ಕ್ರೈಸ್ತ ಸಂಪ್ರದಾಯದ ಪ್ರಕಾರವೂ ಮಗನಿಗೆ ನಾಮಕರಣ ಮಾಡಿದ್ದರ ಬಗ್ಗೆ ಕೆಲ ನೆಟ್ಟಿಗರು ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಈ ಬಗ್ಗೆ ಸ್ಪಷ್ಟನೆ ನೀಡುವಂತೆ ಮೇಘನಾ ರಾಜ್ ಅವರು ಇನ್ಸ್ಟಾಗ್ರಾಮ್ನಲ್ಲಿ ನಾಮಕರಣ ಶಾಸ್ತ್ರದ ವಿಡಿಯೋ ಹಂಚಿಕೊಂಡು ಪೋಸ್ಟ್ವೊಂದನ್ನು ಮಾಡಿದ್ದಾರೆ.
‘ನನ್ನ ಮಗನಿಗೆ ಅತ್ಯುತ್ತಮವಾದನ್ನು ನೀಡುವುದು ತಾಯಿಯಾಗಿ ನನಗೆ ಮುಖ್ಯ ಜವಬ್ದಾರಿಯಾಗುತ್ತದೆ. ಅವನ ತಂದೆ-ತಾಯಿ ಖುಷಿಪಟ್ಟ ರೀತಿಯಲ್ಲಿ ಎರಡೂ ಧರ್ಮಗಳಲ್ಲಿ ಇರುವ ಒಳ್ಳೆಯದು ಅವನಿಗೆ ಯಾಕೆ ಸಿಗಬಾರದು? ಜಾತಿ-ಧರ್ಮಗಳ ಭೇದ ಇಲ್ಲದೇ ಎಲ್ಲ ಜನರು ಅವನಿಗಾಗಿ ಮತ್ತು ನಮ್ಮ ಕುಟುಂಬಕ್ಕಾಗಿ ಪ್ರಾರ್ಥಿಸಿದ್ದಾರೆ. ಎಲ್ಲ ದೇವರಿಂದಲೂ ನಾವು ಆಶೀರ್ವಾದ ಬೇಡುತ್ತೇವೆ’ ಎಂದು ಮೇಘನಾ ಪೋಸ್ಟ್ ಮಾಡಿದ್ದಾರೆ.
‘ಎರಡೂ ಸಂಪ್ರದಾಯದ ಪ್ರಕಾರ ಇದನ್ನು ಮಾಡುವುದು ನನಗೆ ಮುಖ್ಯವಾಗಿತ್ತು. ಯಾಕೆಂದರೆ ಅವನ ತಂದೆ, ನಮ್ಮ ರಾಜ ಚಿರು ಅವರು ಮಾನವೀಯತೆಯಲ್ಲಿ ನಂಬಿಕೆ ಇಟ್ಟಿದ್ದರು. ಎರಡೂ ಸಂಪ್ರದಾಯದಲ್ಲಿ ಇರುವ ಉತ್ತಮ ವಿಚಾರಗಳನ್ನು ಆಚರಿಸಿದ್ದೇವೆ’ ಎಂದು ಮೇಘನಾ ಸ್ಪಷ್ಟನೆ ನೀಡಿದ್ದಾರೆ.
‘ರಾಯನ್ ಎಂಬ ಈ ಹೆಸರು ಕೂಡ ಎಲ್ಲ ಧರ್ಮಕ್ಕೆ ಸೇರಿದೆ. ಬೇರೆ ಬೇರೆ ವರ್ಷನ್, ಬೇರೆ ಬೇರೆ ಉಚ್ಛಾರ ಇರಬಹುದು. ಆದರೆ ಅರ್ಥ ಒಂದೇ. ರಾಯನ್ ರಾಜ್ ಸರ್ಜಾ ಎಂದು ನಮ್ಮ ಯುವರಾಜನನ್ನು ಪರಿಚಯಿಸುತ್ತಿದ್ದೇವೆ. ಮಗನೇ ನೀನು ತಂದೆಯಂತೆಯೇ ಬೆಳೆಯಬೇಕು. ಜನರನ್ನು ಮತ್ತು ಜನರು ಮಾಡುವ ಮಾನವೀಯ ಕೆಲಸಗಳನ್ನು ಅವರು ಪ್ರೀತಿಸುತ್ತಿದ್ದರು. ಜನರ ಹಿನ್ನೆಲೆ ನೋಡಿ ಪ್ರೀತಿಸುತ್ತಿರಲಿಲ್ಲ’ ಎಂದು ಮೇಘನಾ ಬರೆದುಕೊಂಡಿದ್ದಾರೆ.
Comments are closed.