ಕರ್ನಾಟಕ

ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ 24 ಮಂದಿ ಸಾವು

Pinterest LinkedIn Tumblr

ಚಾಮರಾಜನಗರ: ಚಾಮರಾಜನಗರ ಕೋವಿಡ್ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ 24 ಮಂದಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಕೊರೋನಾ ಸೋಂಕಿತರು ಮೃತಪಟ್ಟಿರುವ ವಿಷಯವನ್ನು ಆರೋಗ್ಯಾಧಿಕಾರಿಗಳು ಖಚಿತಪಡಿಸಿದ್ದಾರೆ. ಆದರೆ ಈ ಬಗ್ಗೆ ಚಾಮರಾಜನಗರ ಜಿಲ್ಲಾಡಳಿತ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ ಎಂದು ತಿಳಿದು ಬಂದಿದೆ. ಆಮ್ಲಜನಕ ಕೊರತೆಯಿಂದಾಗಿ ಬಲಿಯಾಗಿರುವ ಶಂಕೆ ವ್ಯಕ್ತವಾಗಿದೆ.

ಸಾವಿನ ಸಂಖ್ಯೆ ಏರುತ್ತಿದ್ದಂತೆ ಹೆಚ್ಚುವರಿ ಜಿಲ್ಲಾಧಿಕಾರಿ ಕಾತ್ಯಾಯಿನಿದೇವಿ, ಹೆಚ್ಚುವರಿ ಎಸ್ಪಿ ಅನಿತಾಹದ್ದಣ್ಣನವರ್ ಜಿಲ್ಲಾಸ್ಪತ್ರೆಗೆ ದೌಡಾಯಿಸಿದ್ದಾರೆ. ಮೃತರ ಕುಟುಂಬಸ್ಥರು ಆಸ್ಪತ್ರೆ ಮುಂದೆ ಜಮಾಯಿಸಿದ್ದು, ಅವರ ಆಕ್ರಂದನ ಮುಗಿಲು ಮುಟ್ಟಿದೆ.

ಚಾಮರಾಜನಗರದಲ್ಲಿ ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್ ನಿರ್ಮಾಣ ಮಾಡಿದ್ದರೂ ಆಕ್ಸಿಜನ್​ ಪರದಾಟ ಮಾತ್ರ ತಪ್ಪಿಲ್ಲ. ಆಕ್ಸಿಜನ್ ಕೊರತೆಯಿಂದ ನಾನ್ ಕೋವಿಡ್ ವ್ಯಕ್ತಿ ಸಾವನ್ನಪ್ಪಿರುವ ಆರೋಪವೂ ಕೇಳಿ ಬಂದಿದೆ. ಈಗಾಗಲೇ ಕೋವಿಡ್​ ಆಸ್ಪತ್ರೆಯಲ್ಲಿ ಆಕ್ಸಿಜನ್ ಕೊರತೆಯಿಂದಾಗಿ 24 ಮಂದಿ ಸಾವನ್ನಪ್ಪಿದ್ದಾರೆ.

ಕೋವಿಡ್ ಸೋಂಕಿತರಿಗೆ ಆಕ್ಸಿಜನ್ ಕೊಡುವಂತೆ ಕುಟುಂಬಸ್ಥರು ಗೋಳಾಡುತ್ತಿದ್ದಾರೆ. ಆದರೆ ಆಕ್ಸಿಜನ್ ಕೊರತೆಯ ವಿಚಾರದಲ್ಲಿ ವೈದ್ಯರೂ ಸಹ ಅಸಹಾಯಕರಾಗಿದ್ದಾರೆ. ಸೋಂಕಿತರ ಪ್ರಾಣವುಳಿಸಲು ಕುಟುಂಬಸ್ಥರು ಪರದಾಟ ನಡೆಸುತ್ತಿದ್ದಾರೆ. ಕೊರೋನಾ ಸೋಂಕಿತರಿಗೆ ಅವರ ಕುಟುಂಬಸ್ಥರು ನ್ಯೂಸ್ ಪೇಪರ್​ನಲ್ಲಿ ಗಾಳಿ ಬೀಸುತ್ತಿದ್ದಾರೆ.

ಈ ಕಡೆ ಲಿಕ್ವಿಡ್ ಆಕ್ಸಿಜನ್ ಪ್ಲಾಂಟ್, ಆ ಕಡೆ ಜಂಬೋ ಸಿಲಿಂಡರ್ ಗಳಿದ್ದರೂ ಸಹ ಏನು ಪ್ರಯೋಜನವಾಗಿಲ್ಲ ಎಂದು ಜಿಲ್ಲಾಸ್ಪತ್ರೆ ಮುಂದೆ ಸೋಂಕಿತರ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Comments are closed.