ಕರ್ನಾಟಕ

2021-22ರ ಬಜೆಟ್‌ ಗಾತ್ರ 2,46,207 ಕೋಟಿ ರೂ.ಗೆ ಏರಿಕೆ

Pinterest LinkedIn Tumblr

ಬೆಂಗಳೂರು: 2021-22ರ ಬಜೆಟ್‌ ಗಾತ್ರ 2,46,207 ಕೋಟಿ ರೂ.ಗೆ ಏರಿಕೆಯಾಗಿದೆ. 2020-21ರ ಬಜೆಟ್‌ ಗಾತ್ರ 2,37,893 ಕೋಟಿ ರೂ. ಇತ್ತು. ಇದಕ್ಕೆ ಹೋಲಿಸಿದರೆ ಈ ಬಾರಿಯ ಬಜೆಟ್‌ ಗಾತ್ರ 8,314 ಕೋಟಿ ರೂ. ವೃದ್ಧಿಸಿದೆ.

ಹಣಕಾಸು ಸಚಿವರೂ ಆಗಿರುವ ಸಿಎಂ ಬಿಎಸ್‌ ಯಡಿಯೂರಪ್ಪ ಸೋಮವಾರ ಕೊರತೆ ಬಜೆಟ್‌ ಮಂಡಿಸಿದ್ದು, 2021-22ರಲ್ಲಿ ಆದಾಯ ಸಂಗ್ರಹ 2,43,734 ಕೋಟಿ ರೂ. ಇರಲಿದೆ ಎಂದು ಅಂದಾಜಿಸಿದ್ದಾರೆ.

ಇದರಲ್ಲಿ 1,72,271 ಕೋಟಿ ರೂ. ರಾಜಸ್ವ ಸಂಗ್ರಹ, 71,332 ಕೋಟಿ ರೂ. ಸಾಲ ಹಾಗೂ 71,463 ಕೋಟಿ ರೂ. ಬಂಡವಾಳ ಜಮೆಗಳು ಒಳಗೊಂಡಿವೆ. 1,87,405 ಕೋಟಿ ರೂ. ರಾಜಸ್ವ ವೆಚ್ಚ, 44,237 ಕೋಟಿ ರೂ. ಬಂಡವಾಳ ವೆಚ್ಚ, ಸಾಲ ಮರುಪಾವತಿಗೆ 14,565 ಕೋಟಿ ರೂ. ಸೇರಿ ಒಟ್ಟು ವೆಚ್ಚ 2,46,207 ಕೋಟಿ ರೂ.ಗಳಾಗಿವೆ.

ರಾಜಸ್ವ ಕೊರತೆಯು 15,134 ಕೋಟಿ ರೂ. ತಲುಪಲಿದೆ ಎಂದು ಅಂದಾಜಿಸಲಾಗಿದೆ. ಒಟ್ಟಾರೆ ವಿತ್ತೀಯ ಕೊರತೆ 59,240 ಕೋಟಿ ರೂ. ಇರಲಿದೆ ಎಂದುಕೊಳ್ಳಲಾಗಿದೆ. ಇದು ರಾಜ್ಯದ ಆಂತರಿಕ ಉತ್ಪನ್ನದ (ಜಿಎಸ್‌ಡಿಪಿ) ಶೇ. 3.48ರಷ್ಟಾಗುತ್ತದೆ. ಈ ಮೂಲಕ ವಿತ್ತೀಯ ಕೊರತೆ ಜಿಎಸ್‌ಡಿಪಿಯ ಶೇ.3ರ ಗಡಿಯನ್ನು ಮೀರಲಿದೆ. ಇದರೊಂದಿಗೆ 2021-22ರ ಅಂತ್ಯಕ್ಕೆ ರಾಜ್ಯದ ಒಟ್ಟು ಸಾಲ 4,57,899 ಕೋಟಿ ರೂ.ಗೆ ಹೆಚ್ಚಳವಾಗಲಿದೆ. ಇದು ಜಿಎಸ್‌ಡಿಪಿಯ ಶೇ. 26.9ರಷ್ಟಾಗುತ್ತದೆ ಎಂದು ಬಜೆಟ್‌ ಭಾಷಣದಲ್ಲಿ ಸಿಎಂ ತಿಳಿಸಿದ್ದಾರೆ.

2020-21ರಲ್ಲಿ ಆದಾಯ ಸಂಗ್ರಹ ಕುಸಿತ
2020-21ರ ಪರಿಷ್ಕೃತ ಅಂದಾಜಿನಲ್ಲಿ ಒಟ್ಟಾರೆ 2,33,134 ಕೋಟಿ ರೂ. ಆದಾಯ ಸಂಗ್ರಹದ ಗುರಿ ಹೊಂದಲಾಗಿತ್ತು. ಆದರೆ ನಿರೀಕ್ಷೆಗಿಂತ ಕಡಿಮೆ ಆದಾಯ ಸಂಗ್ರಹವಾಗಿದ್ದು, 2,30,381 ಕೋಟಿ ರೂ. ಇರಲಿದೆ ಎಂದುಕೊಳ್ಳಲಾಗಿದೆ. ರಾಜಸ್ವ ಸಂಗ್ರಹ 1,59,709 ಕೋಟಿ ರೂ. ಇರಲಿದ್ದರೆ, ಇದರಲ್ಲಿ ಜಿಎಸ್‌ಟಿ ಪರಿಹಾರ ಒಳಗೊಂಡಂತೆ ಸ್ವಂತ ತೆರಿಗೆ ರಾಜಸ್ವ ಸಂಗ್ರಹವು 1,17,782 ಕೋಟಿ ರೂ.ಗಳಾಗಿವೆ.

ಪರಿಷ್ಕೃತ ಅಂದಾಜಿನ ಪ್ರಕಾರ ರಾಜ್ಯದ 2020-21ರ ಒಟ್ಟು ವೆಚ್ಚವು 2,29,925 ಕೋಟಿ ರೂ.ಗಳಾಗಿವೆ.

Comments are closed.