ಕರ್ನಾಟಕ

ರೂಪಾಂತರಿ ಕರೊನಾ: ಲಾಕ್​ಡೌನ್, ಸೀಲ್​ಡೌನ್ ಅನಗತ್ಯ- ಆರೋಗ್ಯ ಸಚಿವ ಡಾ.ಸುಧಾಕರ್

Pinterest LinkedIn Tumblr


ಬೆಂಗಳೂರು : ಇಂಗ್ಲೆಂಡ್ ನಿಂದ ರಾಜ್ಯಕ್ಕೆ ಬಂದವರಲ್ಲಿ ಮೂವರಲ್ಲಿ ರೂಪಾಂತರಿ ಕರೊನಾ ಪತ್ತೆಯಾಗಿದ್ದರೂ ಲಾಕ್​ಡೌನ್, ಇಡೀ ಪ್ರದೇಶ ಅಥವಾ ಬಡಾವಣೆ ಸೀಲ್​ಡೌನ್ ಅನಗತ್ಯವೆಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಮಂಗಳವಾರ ಪ್ರಕರಣಗಳು ಹೊರಬಿದ್ದ ಬಳಿಕ ಭೇಟಿಯಾದ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಂಗಳೂರಿನ ತಾಯಿ-ಮಗು, ಮತ್ತೊಬ್ಬ ಮಹಿಳೆಯಲ್ಲಿ ಹೊಸ ಪ್ರಭೇದದ ಸೋಂಕು ಪತ್ತೆಯಾಗಿರುವುದು ಐಸಿಎಂಆರ್ ನೀಡಿದ ಮಾಹಿತಿಯಿಂದ ಗೊತ್ತಾಗಿದೆ. ಬ್ರಿಟನ್​ನಲ್ಲಿ ಕಾಣಿಸಿಕೊಂಡ ರೂಪಾಂತರಿ ಕರೊನಾ ರಾಜ್ಯದಲ್ಲಿ ಪತ್ತೆಯಾದ ಕಾರಣಕ್ಕೆ ಲಾಕ್​ಡೌನ್, ಇಡೀ ಪ್ರದೇಶ ಅಥವಾ ಸೀಲ್ ಡೌನ್ ಅನಗತ್ಯವಾಗಿದೆ. ಕೇಂದ್ರದ ಮಾರ್ಗಸೂಚಿಯಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.

ಶಾಲೆ-ಕಾಲೇಜುಗಳು ಪುನರಾರಂಭ ಅಬಾಧಿತ: ಬ್ರಿಟನ್​ನಲ್ಲಿ ಪತ್ತೆಯಾದ ವೈರಸ್ ಪ್ರಕರಣಗಳು ರಾಜ್ಯದಲ್ಲೂ ಪತ್ತೆಯಾಗಿದ್ದರಿಂದ ಆತಂಕ ಇಲ್ಲವೇ ಗಾಬರಿಯಾಗಬೇಕಾದ ಅಗತ್ಯವಿಲ್ಲ. ಈಗಾಗಲೇ ನಿರ್ಧರಿಸಿರುವಂತೆ ಜ.1ರಿಂದ ಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳು ಪುನರಾರಂಭ ಅಬಾಧಿತವೆಂದು ಹೇಳಿದರು. ಅಷ್ಟಕ್ಕೂ ಬ್ರಿಟನ್​ನಿಂದ ವಾಪಸ್ಸಾದ ಎಲ್ಲರಿಗೂ ಕರೊನಾ ಸೋಂಕು ದೃಢಪಟ್ಟಿಲ್ಲ. ತಜ್ಞರು ಹೇಳುವ ಪ್ರಕಾರ ಸಮುದಾಯದಲ್ಲಿ ರೋಗ ನಿರೋಧಕ ಶಕ್ತಿ ವೃದ್ಧಿಸಿದೆ. ಹೀಗಾಗಿ ರೂಪಾಂತರಿ ಕರೊನಾ ಹೆಚ್ಚಾಗಿ ಬಾಧಿಸುವುದಿಲ್ಲವೆಂಬ ಎಂಬ ವಿಶ್ವಾಸ ವ್ಯಕ್ತಪಡಿಸಿದರು.

ಮೂವರಿಗೆ ಚಿಕಿತ್ಸೆ, ಕ್ರಮ : ಹೊಸ ಮಾದರಿ ಕರೊನಾ ವೈರಸ್ ಸೋಂಕಿತ ಮೂವರಿಗೂ ನಿಮ್ಹಾನ್ಸ್​ನ ಪ್ರತ್ಯೇಕ ಕೊಠಡಿಯಲ್ಲಿಟ್ಟು ಚಿಕಿತ್ಸೆ ನೀಡಲಾಗುತ್ತಿದೆ. ಬ್ರಿಟನ್​ನಿಂದ ರಾಜ್ಯಕ್ಕೆ ಹಿಂದಿರುಗಿದ 1,614 ಜನರ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಒಳಪಡಿಸಲಾಗಿತ್ತು. ಇದರಲ್ಲಿ 1588 ಜನರ ಪರೀಕ್ಷಾ ವರದಿ ನೆಗೆಟಿವ್ ಬಂದಿದೆ. ಬಾಕಿ 26 ಜನರಿಗೆ ಕರೊನಾ ಸೋಂಕು ದೃಢಪಟ್ಟಿದ್ದರಿಂದ ಆಸ್ಪತ್ರೆಯಲ್ಲಿ ಪ್ರತ್ಯೇಕವಾಗಿರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಅಲ್ಲದೆ, ಸೋಂಕಿತರ ರಕ್ತದ ಮಾದರಿಯ ಹೆಚ್ಚಿನ ಅಧ್ಯಯನಕ್ಕಾಗಿ ನಿಮ್ಹಾನ್ಸ್​ನ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು ಎಂದು ವಿವರಿಸಿದರು.

ಏಕರೂಪದ ಮಾಹಿತಿ ವ್ಯವಸ್ಥೆ : ಎಸ್-ಜೀನ್ಸ್ ಸೀಕ್ವೆನ್ಸ್ ಅಧ್ಯಯನಕ್ಕಾಗಿ ದೇಶದಲ್ಲಿ 10 ಪ್ರಯೋಗಾಲಯಗಳನ್ನು ಕೇಂದ್ರ ಸರ್ಕಾರ ಗೊತ್ತುಪಡಿಸಿದ್ದು, ಆ ಪೈಕಿ ಬೆಂಗಳೂರಿನ ಎರಡು ಲ್ಯಾಬ್​ಗಳು ಸೇರಿವೆ. ಈ ಲ್ಯಾಬ್​ಗಳಲ್ಲಿ ಪರೀಕ್ಷೆ ಮಾಡಿದ ವರದಿಯನ್ನು ನೇರವಾಗಿ ಐಸಿಎಂಆರ್​ಗೆ ಕಳುಹಿಸಲಾಗುತ್ತದೆ. ಏಕರೂಪದ ಮಾಹಿತಿ ವ್ಯವಸ್ಥೆಯಾಗಿರುವ ಕಾರಣ ಯಾವುದೇ ಗೊಂದಲಗಳಾಗುವುದಿಲ್ಲ. ಬ್ರಿಟನ್​ನಿಂದ ಮರಳಿದವರ ಪೈಕಿ ನೆಗೆಟಿವ್ ವರದಿ ಬಂದವರಿಗೆ ಮನೆಯಲ್ಲೇ ಪ್ರತ್ಯೇಕವಾಗಿರಲು ಸೂಚಿಸಲಾಗಿದೆ. ಕೇಂದ್ರದ ಸೂಚನೆಯಂತೆ 28 ದಿನ ಹೋಮ್ ಕ್ವಾರಂಟೈನ್​ನಲ್ಲಿ ಇರಬೇಕಾಗುತ್ತದೆ ಎಂದು ಡಾ.ಸುಧಾಕರ್ ಹೇಳಿದರು.

ಸಂಪರ್ಕಿತರ ಪತ್ತೆ, ನಿಗಾ: ಯು.ಕೆ.ಯಿಂದ ವಿಮಾನದಲ್ಲಿ ಬಂದವರ ಸಹ ಪ್ರಯಾಣಿಕರು, ಸೋಂಕಿತರ ಪ್ರಥಮ ಮತ್ತು ದ್ವಿತೀಯ ಸಂರ್ಪತರನ್ನು ಪತ್ತೆ ಹಚ್ಚಿ ಪರೀಕ್ಷಿಸಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಹೋಮ್ ಕ್ವಾರಂಟೈನ್​ನಲ್ಲಿ ಇರಲು ಸೂಚಿಸಿದ್ದು, ಸರ್ಕಾರ ವಿಫಲವಾಗಿರುವ ಪ್ರಶ್ನೆಯೇ ಉದ್ಭವಿಸುವುದು ಎಂದು ತಳ್ಳಿಹಾಕಿದರು.

ಕಠಿಣ ಕ್ರಮದ ಎಚ್ಚರಿಕೆ : ಇಂಗ್ಲೆಂಡ್​ನಿಂದ ಹಿಂದಿರುಗಿದವರ ಪೈಕಿ ಕೆಲವರು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡ ಕಾರಣ ಸಂಪರ್ಕ ಸಿಗುತ್ತಿಲ್ಲ. ಅಂತಹವರನ್ನು ಪೊಲೀಸರು ಪತ್ತೆ ಮಾಡುತ್ತಿದ್ದು, 48 ಗಂಟೆಗಳ ಗಡುವು ನೀಡಲಾಗಿದೆ. ನಂತರವೂ ಸಿಗದಿದ್ದರೆ ಕಾನೂನು ರೀತ್ಯ ಅಪರಾಧವಾಗುತ್ತದೆ. ವೈಯಕ್ತಿಕ, ಸಮುದಾಯದ ಆರೋಗ್ಯ ರಕ್ಷಣೆ ದೃಷ್ಟಿಯಿಂದ ಪರೀಕ್ಷೆಗೆ ಒಳಗಾಗಲೇಬೇಕು. ಇಲ್ಲವಾದರೆ ನಿಗದಿತ ಗಡುವು ಮುಗಿದ ಬಳಿಕ ಕಾನೂನು ರೀತ್ಯ ಕಠಿಣ ಕ್ರಮಕೈಗೊಳ್ಳಬೇಕಾಗುತ್ತದೆ ಎಂದು ಡಾ.ಸುಧಾಕರ್ ಎಚ್ಚರಿಸಿದರು.

Comments are closed.