ಕರ್ನಾಟಕ

ಈಡಿಗ ಸಮುದಾಯಕ್ಕೂ ಅಭಿವೃದ್ಧಿ ನಿಗಮ ರಚಿಸುವಂತೆ ಬಿಜೆಪಿ ನಾಯಕ ಮಾಲೀಕಯ್ಯ ಗುತ್ತೇದಾರ ಒತ್ತಾಯ

Pinterest LinkedIn Tumblr

ಕಲಬುರ್ಗಿ: ಮುಖ್ಯಮಂತ್ರಿ ಯಡಿಯೂರಪ್ಪ ಮರಾಠ, ವೀರಶೈವ-ಲಿಂಗಾಯತ ನಿಗಮ ರಚನೆ ಮಾಡಿರುವ ಬೆನ್ನಲ್ಲೇ ಒಕ್ಕಲಿಗ ಅಭಿವೃದ್ಧಿ ನಿಗಮಕ್ಕೆ ಒತ್ತಾಯ ಹೆಚ್ಚುತ್ತಿದ್ದು, ಈಗ ಈಡಿಗ ಸಮುದಾಯಕ್ಕೂ ಅಭಿವೃದ್ಧಿ ನಿಗಮ ರಚಿಸುವಂತೆ ಬಿಜೆಪಿಯ ನಾಯಕರೊಬ್ಬರು ಸರಕಾರವನ್ನು ಆಗ್ರಹಿಸಿದ್ದಾರೆ.

ಈಡಿಗ ಸಮುದಾಯಕ್ಕೂ ಅಭಿವೃದ್ಧಿ ನಿಗಮ ರಚಿಸುವಂತೆ ಮಾಜಿ ಸಚಿವ, ಬಿಜೆಪಿ ರಾಜ್ಯ ಉಪಾಧ್ಯಕ್ಷ ಮಾಲೀಕಯ್ಯ ಗುತ್ತೇದಾರ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ದು, ನಿಗಮಕ್ಕೆ 400 ಕೋಟಿ ರೂ.ನೀಡುವಂತೆ ಆಗ್ರಹಿಸಿದ್ದಾರೆ.

ಮರಾಠ ಮತ್ತು ವೀರಶೈವ ಲಿಂಗಾಯತ ಪ್ರಾಧಿಕಾರ ರಚಿಸಿರೋದಕ್ಕೆ ಸ್ವಾಗತ. ಲಿಂಗಾಯತ ಹಾಗೂ ಮರಾಠ ಸಮುದಾಯಗಳಲ್ಲಿಯೂ ಸಾಕಷ್ಟು ಬಡವರಿದ್ದಾರೆ. ಇದರ ಬೆನ್ನ ಹಿಂದೆಯೇ ಒಕ್ಕಲಿಗ ಸಮುದಾಯವೂ ಅಭಿವೃದ್ದಿ ನಿಗಮ ಕೇಳುತ್ತಿದೆ. ಅದೇ ರೀತಿಯಾಗಿ ಈಡಿಗ ಸಮುದಾಯವೂ ರಾಜ್ಯದಲ್ಲಿ ಅತ್ಯಂತ ಹಿಂದುಳಿದಿದೆ. ರಾಜ್ಯದಲ್ಲಿ 80 ಲಕ್ಷದಷ್ಟು ಈಡಿಗ ಜನಸಂಖ್ಯೆ ಇದೆ. ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಅತ್ಯಂತ ಹಿಂದುಳಿದಿದೆ. ಈಡಿಗ ಸಮುದಾಯದಲ್ಲಿಯೂ ಬಡವರಿದ್ದಾರೆ. ಈಡಿಗ ಸಮಾಜದ ಅಭಿವೃದ್ಧಿಗೆ ಶ್ರೀ ನಾರಾಯಣ ಗುರುಗಳ ಹೆಸರಿನ ಮೇಲೆ ಪ್ರತ್ಯೇಕ ನಿಗಮ ಸ್ಥಾಪಿಸಬೇಕೆಂಬುದು ಬಹು ದಿನಗಳ ಬೇಡಿಕೆಯಾಗಿದೆ. ದಯವಿಟ್ಟು ನಮ್ಮ ಸಮಾಜವನ್ನೂ ಪರಿಗಣಿಸಿ. ನಮ್ಮ ಸಮಾಜ ಯಾವತ್ತಿಗೂ ನಿಮ್ಮ ಜೊತೆಗಿದೆ. ಸಾಕಷ್ಟು ಒತ್ತಡ ಬಂದರೂ ನಾವು ನಿಮ್ಮ ನಾಯಕತ್ವಕ್ಕೆ ಬೆಂಬಲ ನೀಡುತ್ತಲೇ ಬಂದಿದ್ದೇವೆ ಎಂದಿದ್ದಾರೆ.

ಕೂಡಲೇ ಆರ್ಯ – ಈಡಿಗ ಅಭಿವೃದ್ಧಿ ನಿಗಮ ಸ್ಥಾಪಿಸಿ, ಕಾರ್ಯರೂಪಕ್ಕೆ ತನ್ನಿ. ನಿಗಮಕ್ಕೆ 400 ಕೋಟಿ ರೂ.ಗಳಷ್ಟು ಅನುದಾನ ನೀಡಿ, ಆರ್ಥಿಕ ಸಹಾಯ ಮಾಡಬೇಕು. ಈಡಿಗ ಸಮುದಾಯದ ಸರ್ವತೋಮುಖ ಅಭಿವೃದ್ಧಿಗೆ ಕ್ರಮ ಕೈಗೊಳ್ಳಿ ಎಂದು ಸಿಎಂ ಯಡಿಯೂರಪ್ಪಗೆ ಮಾಲೀಕಯ್ಯ ಗುತ್ತೇದಾರ ಆಗ್ರಹಿಸಿದ್ದಾರೆ. ಈ ಬೆಳವಣಿಗೆ ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಬಿಸಿ ತುಪ್ಪವಾಗಿ ಮಾರ್ಪಟ್ಟಿದೆ.

Comments are closed.