ಕರ್ನಾಟಕ

ಚಿಕ್ಕಮಗಳೂರು ಜಿ.ಪಂ. ಅಧ್ಯಕ್ಷೆ ಸುಜಾತ ಬಿಜೆಪಿಯಿಂದ ಅಮಾನತು

Pinterest LinkedIn Tumblr


ಚಿಕ್ಕಮಗಳೂರು: ಪಕ್ಷ ವಿರೋಧಿ ಚಟುವಟಿಕೆಯ ಆರೋಪದ ಮೇಲೆ ಸುಜಾತ ಕೃಷ್ಣಪ್ಪ ಅವರನ್ನು ಅಮಾನತು ಮಾಡಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು ಆದೇಶ ಹೊರಡಿಸಿದ್ದಾರೆ.

ನೀವು ಪಕ್ಷದ ತೀರ್ಮಾನವನ್ನು ಉಲ್ಲಂಘಿಸಿ ಪಕ್ಷವಿರೋಧಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು, ಇದರಿಂದ ಪಕ್ಷಕ್ಕೆ ಮುಜುಗರ ಉಂಟಾಗಿ ಪಕ್ಷದ ಘನತೆಗೆ ಧಕ್ಕೆಯುಂಟಾಗಿದೆ. ಈ ಬಗ್ಗೆ ನೀವು ಖುದ್ದು ಹಾಜರಾಗಿ ಸಮಜಾಯಿಷಿ ನೀಡಲು ಸೂಚಿಸಿದರೂ ಕೂಡ ನೀವು ಸಮಾಜಾಯಿಷಿ ನೀಡಿಲ್ಲ, ಎಂದು ಅಮಾನತು ಆದೇಶದಲ್ಲಿ ತಿಳಿಸಿದ್ದಾರೆ.

ಪಕ್ಷದ ಆಂತರಿಕ ಒಪ್ಪಂದದಂತೆ ಅಧಿಕಾರದ ಅವಧಿ ಪೂರ್ಣಗೊಂಡರೂ ರಾಜೀನಾಮೆ ನೀಡದ ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ಅವರನ್ನು ಬಿಜೆಪಿ ಪಕ್ಷದಿಂದ ಅಮಾನತು ಮಾಡಲಾಗಿದೆ.

ಜಿಲ್ಲಾ ಪಂಚಾಯಿತಿ ಸದಸ್ಯರು ರಾಜೀನಾಮೆ ನೀಡಬೇಕೆಂದು ಸ್ವಪಕ್ಷೀಯರೇ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ವಿರುದ್ಧ ತಿರುಗಿ ಬಿದ್ದಿದ್ದರು. ಕಳೆದ ಎರಡು ಜಿಲ್ಲಾ ಪಂಚಾಯಿತಿಯ ಸಾಮಾನ್ಯ ಸಭೆಗಳಿಗೆ ಗೈರಾಗಿದ್ದ ಸದಸ್ಯರು ಬುಧವಾರ ನಡೆದ ಮೂರನೇ ಸಭೆಯಲ್ಲಿ ಭಾಗವಹಿಸಿ ಅಧ್ಯಕ್ಷ ವಿರುದ್ಧ ಅಸಮಾಧಾನ ಹೊರಹಾಕಿದರು.

ಜಿಲ್ಲಾ ಪಂಚಾಯಿತಿಯ ಸಾಮಾನ್ಯ ಸಭೆ ವೇಳೆ ಸಭಾಂಗಣದ ಬಾವಿಗಿಳಿದು ಅಧ್ಯಕ್ಷರ ವಿರುದ್ಧ ಧಿಕ್ಕಾರ ಕೂಗಿ ಸಭೆಯಿಂದ ಹೊರ ನಡೆದರು. ಮಾಧ್ಯಮಗಳ ಜೊತೆ ಮಾತನಾಡಿದ ಅಧ್ಯಕ್ಷೆ ಸುಜಾತ ಕೃಷ್ಣಪ್ಪ ರಾಜೀನಾಮೆ ನೀಡುವುದಿಲ್ಲ ಎಂದು ಹೇಳಿದ್ದರು. ಆದರೆ ಬುಧವಾರ ಸಂಜೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೃಷ್ಣಪ್ಪ ಅವರನ್ನು ಅಮಾನತು ಮಾಡಿ ಆದೇಶ ಹೊರಡಿಸಿದ್ದಾರೆ.

ಈ ಹಿಂದೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷೆಯಾಗಿದ್ದ ಚೈತ್ರ ಮಾಲ್ತೇಶ್ ಅವರು ಕೂಡ ಇದೇ ರೀತಿ ರಾಜೀನಾಮೆ ಕೊಡುವುದಿಲ್ಲ ಎಂದು ಮೊಂಡುತನ ಪ್ರದರ್ಶಿಸಿದ್ದರು. ಆಗ ಕೂಡ ಅವರನ್ನು ಪಕ್ಷ ಉಚ್ಚಾಟನೆಯ ಮೂಲಕವೇ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿತು.

Comments are closed.