ಮೈಸೂರು: ಬೆಳಕಿನ ಹಬ್ಬ ದೀಪಾವಳಿಯಂದೇ ಪತಿಮಹಾಶಯನೊಬ್ಬ ಪತ್ನಿಯನ್ನು ಕೊಂದು ಸೀಮೆ ಎಣ್ಣೆ ಸುರಿದು ಬೆಂಕಿ ಹಚ್ಚಿರುವ ಅಮಾನುಷ ಘಟನೆ ಮೈಸೂರು ಜಿಲ್ಲೆಯ ಟಿ.ನರಸೀಪುರ ತಾಲೂಕಿನ ದೊಡ್ಡಮುಲಗೂಡು ಗ್ರಾಮದಲ್ಲಿ ನಡೆದಿದೆ.
ರಮೇಶ್ (30) ಪತ್ನಿಯನ್ನು ಕೊಲೆಗೈದಿರುವ ಆರೋಪಿ. ಈತ ಪತ್ನಿ ಶಾಂತಮ್ಮ(22)ಳನ್ನು ಕೊಲೆ ಮಾಡಿದ್ದಾನೆ. ಪತ್ನಿಯನ್ನು ಕೊಲೆ ಮಾಡಿ ಸೀಮೆಎಣ್ಣೆ ಸುರಿದು ಮೃತದೇಹವನ್ನು ಸುಟ್ಟುಹಾಕಿದ್ದಾನೆ.
ಪಂಚಾಯತ್ ಚುನಾವಣೆಗೆ ಹಣ ಕೊಡಲಿಲ್ಲ ಎಂಬ ಕಾರಣಕ್ಕೆ ರಮೇಶ್ ಪತ್ನಿಯನ್ನು ಕೊಲೆ ಮಾಡಿದ್ದಾಗಿ ತಿಳಿದುಬಂದಿದೆ.
ಆರೋಪಿ ರಮೇಶ್ ಕೃತ್ಯದ ನಂತರ ತಲೆ ಮರೆಸಿಕೊಂಡಿದ್ದು ಆತನ ಪತ್ತೆಗೆ ಪೋಲೀಸರು ಶೋಧಕಾರ್ಯ ನಡೆಸಿದ್ದಾರೆ.
ಘಟನೆ ಸಂಬಂಧ ಬನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.