ಬೆಂಗಳೂರು: ರಾಜರಾಜೇಶ್ವರಿ ನಗರ ವಿಧಾನಸಭೆ ಉಪ ಚುನಾವಣೆಯ ರಣ ಕಣ ದಿನೇದಿನೇ ಕುತೂಹಲ ಕೆರಳಿಸಿದೆ. ಬಿಜೆಪಿ ಅಭ್ಯರ್ಥಿ ಮುನಿರತ್ನ ಮತ್ತು ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಹಣಾಹಣಿ ಏರ್ಪಟ್ಟಿದ್ದು, ಪ್ರಚಾರ ಕಣಕ್ಕೆ ಈಗ ತಾರಾಮೆರಗು ಬಂದಿದೆ.
ಇತ್ತೀಚಿಗಷ್ಟೆ ಮುನಿರತ್ನ ಪರ ನಟಿ ಶ್ರುತಿ, ಬಹುಭಾಷಾ ನಟಿ, ಬಿಜೆಪಿ ನಾಯಕಿ ಖುಷ್ಬೂ ಪ್ರಚಾರ ಮಾಡಿದ್ದರು. ಇದೀಗ, ಆರ್.ಆರ್ ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಪರ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತಯಾಚನೆ ಮಾಡಲಿದ್ದಾರೆ. ಶುಕ್ರವಾರ ಬೆಳಗ್ಗೆ ರಾಜರಾಜೇಶ್ವರಿ ನಗರದಲ್ಲಿ ದರ್ಶನ್ ಅಬ್ಬರದ ಪ್ರಚಾರ ಮಾಡಲಿದ್ದು ಇದಕ್ಕೆ ಸಕಲ ತಯಾರಿಯೂ ನಡೆದಿದೆ.
ಶುಕ್ರವಾರ ಬೆಳಗ್ಗೆಯಿಂದ ರಾತ್ರಿವರೆಗೂ ಆರ್.ಆರ್ ನಗರದ ಬಹುತೇಕ ಎಲ್ಲಾ ವಾರ್ಡ್ ಗಳಲ್ಲೂ ದರ್ಶನ್ ಪ್ರಚಾರ ಮಾಡಲಿದ್ದಾರೆ. ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಸೇರುವ ಅಂದಾಜಿನ ಹಿನ್ನೆಲೆ ಬೌನ್ಸರ್ ವ್ಯವಸ್ಥೆ ಮಾಡಲಾಗಿದೆ. ತೆರೆದ ವಾಹನದಲ್ಲಿ ದರ್ಶನ್ ಅಲ್ಲಲ್ಲಿ ಭಾಷಣ ಮಾಡಲಿದ್ದಾರೆ ಎನ್ನಲಾಗುತ್ತಿದೆ.