ಕರ್ನಾಟಕ

ಸಿಗಂದೂರು ಕ್ಷೇತ್ರ: ನ್ಯಾಯಾಲಯದ ಮಧ್ಯಸ್ತಿಕೆಯಲ್ಲಿ ಆಡಳಿತ ಮಂಡಳಿ & ಅರ್ಚಕರು ರಾಜಿ

Pinterest LinkedIn Tumblr

ಶಿವಮೊಗ್ಗ: ಕೆಲ ದಿನಗಳ ಹಿಂದೆ ಪ್ರಸಿದ್ಧ ಸಿಗಂದೂರು ಚೌಡೇಶ್ವರಿ ಕ್ಷೇತ್ರದಲ್ಲಿ ಅರ್ಚಕರು ಹಾಗೂ ಧರ್ಮದರ್ಶಿಗಳ ನಡುವೆ ಉಂಟಾಗಿದ್ದ ವಿವಾದ ಸ್ಥಳೀಯ ಸಿವಿಲ್ ನ್ಯಾಯಾಲಯದ ಮಧ್ಯಸ್ಥಿಕೆಯಲ್ಲಿ ಇತ್ಯರ್ಥಗೊಂಡು ಸುಖಾಂತ್ಯಗೊಂಡಿದೆ. ದೇಗುಲದ ಭಕ್ತರಾದ ಸಂದೀಪ್ ಹಾಗೂ ನವೀನ್ ಜೈನ್ ಎಂಬುವವರು ದೇವಸ್ಥಾನದ ಪೂಜಾ ವಿಧಿವಿಧಾನಗಳಿಗೆ ಆಡಳಿತ ಮಂಡಳಿಯಿಂದ ಯಾವುದೇ ಅಡ್ಡಿಯಾಗದಂತೆ ನಿರ್ಬಂಧಕಾಜ್ಞೆ ನೀಡಬೇಕೆಂದು ಇಲ್ಲಿನ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದರು.

ಬುಧವಾರ ವಿಚಾರಣೆ ಸಂದರ್ಭ ದಾವೆ ಹೂಡಿದ್ದ ಪಕ್ಷಗಾರರು, ಧರ್ಮದರ್ಶಿ ರಾಮಪ್ಪ, ರವಿಕುಮಾರ್ ಹಾಗೂ ಶೇಷಗಿರಿಭಟ್ ಅವರನ್ನು ನ್ಯಾಯಾಲಯಕ್ಕೆ ಕರೆಸಿಕೊಂಡ ನ್ಯಾಯಾಧೀಶರಾದ ಫೆಲಿಕ್ಸ್ ಆಲ್ಫಾನ್ಸೊ ಅಂತೋನಿ ಅವರು ಮಧ್ಯಸ್ಥಗಾರಿಕೆ ಮೂಲಕ ವಿವಾದ ಬಗೆಹರಿಸಿಕೊಳ್ಳುವಂತೆ ಸೂಚನೆ ನೀಡಿದರು. ಉಭಯ ಪಕ್ಷಗಾರರ ವಕೀಲರು ಹಾಗೂ ನ್ಯಾಯಾಲಯ ನೇಮಿಸಿದ್ದ ಮಧ್ಯಸ್ಥಿಕೆಗಾರರ ಉಪಸ್ಥಿತಿಯಲ್ಲಿ ನಡೆದ ಮಾತುಕತೆಯಲ್ಲಿ ವಿವಾದವನ್ನು ರಾಜೀಮೂಲಕ ಇತ್ಯರ್ಥಪಡಿಸಿಕೊಳ್ಳಲು ತೀರ್ಮಾನಿಸಲಾಯಿತು.

ಕೊರೋನಾ ಹಿನ್ನೆಲೆ ದೇವಸ್ಥಾನದ ಗರ್ಭಗುಡಿಯ ಮುಂಭಾಗದಲ್ಲಿ ಏಕಕಾಲಕ್ಕೆ 40 ಜನರನ್ನು ಮಾತ್ರ ಸೇರಿಸಬೇಕು. ಭಕ್ತರು ಮಾಸ್ಕ್ ಧರಿಸಿ ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು ಎಂಬ ಅಂಶಕ್ಕೆ ಧರ್ಮದರ್ಶಿ ರಾಮಪ್ಪ, ರವಿಕುಮಾರ್ ಹಾಗೂ ಶೇಷಗಿರಿಭಟ್ ಸಮ್ಮತಿ ಸೂಚಿಸಿದ್ದಾರೆ. ಪೂಜೆಯ ನಂತರ ಮಂಗಳಾರತಿ ತಟ್ಟೆಯನ್ನು ಅರ್ಚಕರು ಭಕ್ತರ ಬಳಿ ಕೊಂಡೊಯ್ಯುವಂತಿಲ್ಲ. ನಿರ್ದಿಷ್ಟ ಜಾಗದಲ್ಲಿ ಇಟ್ಟು ಭಕ್ತರಿಗೆ ನಮಸ್ಕರಿಸಲು ಅವಕಾಶ ನೀಡಬೇಕು. ದಸರಾ ಅಂಗವಾಗಿ ಶೇಷಗಿರಿ ಭಟ್ ಕುಟುಂಬ ಚಂಡಿಕಾಹೋಮವನ್ನು ಧರ್ಮದರ್ಶಿ ರಾಮಪ್ಪ ,ರವಿಕುಮಾರ್ ಕುಟುಂಬದವರ ಉಪಸ್ಥಿತಿಯಲ್ಲಿ ನೆರವೇರಿಸಬೇಕು ಎಂಬ ಅಂಶಕ್ಕೆ ಉಭಯ ಪಕ್ಷಗಾರರು ಒಪ್ಪಿಗೆ ಸೂಚಿಸಿದ್ದಾರೆ.

ಈ ಮಾತುಕತೆ ಬಳಿಕ ಉಭಯ ಪಕ್ಷಗಾರರ ಒಪ್ಪಿಗೆಯ ಮೇರೆಗೆ ದಾವೆಯನ್ನು ಹಿಂಪಡೆಯಲಾಯಿತು. ದಾವೆದಾರರ ಪರವಾಗಿ ವಕೀಲರಾದ ರವೀಶ್ ಕುಮಾರ್, ಪ್ರತಿವಾದಿಗಳಾದ ರಾಮಪ್ಪ ಮತ್ತು ರವಿಕುಮಾರ್ ಪರವಾಗಿ ಎನ್.ವೆಂಕಟರಾಮ್, ಎಚ್.ಎನ್.ದಿವಾಕರ್, ಬಿ.ನಾಗರಾಜ, ಎಂ.ರಾಘವೇಂದ್ರ, ಕೆ.ಬಿ.ಮಹಾಬಲೇಶ್, ಶೇಷಗಿರಿ ಭಟ್ ಪರವಾಗಿ ಟಿ.ಎಸ್.ರಮಣ ಮಧ್ಯಸ್ಥಿಕೆಗಾರರಾಗಿ ವಕೀಲರಾದ ಮರಿದಾಸ್ ಇದ್ದರು.

Comments are closed.