ಕರ್ನಾಟಕ

ಮುಂದಿನ ವರ್ಷ ಕೊರೋನಾಗೆ ಲಸಿಕೆ ಸಿಗಲಿದೆ: ದಸರಾ ಉದ್ಘಾಟಕ ಡಾ.ಮಂಜುನಾಥ್

Pinterest LinkedIn Tumblr


ಮೈಸೂರು: ದಸರಾಗೆ ವಿದ್ಯುಕ್ತ ಚಾಲನೆ ನೀಡಿದ ಡಾ.ಸಿ.ಎನ್.ಮಂಜುನಾಥ್ ಉದ್ಘಾಟಕ ಭಾಷಣ ಮಾಡಿದರು. ನಾನು ಚಾಮುಂಡಿಯಲ್ಲಿ ಮೂರು ವಿಚಾರ ಬೇಡಿಕೊಂಡೆ. ಕೊರೋನಾಗೆ ಶಿಘ್ರದಲ್ಲೆ ಲಸಿಕೆ ಸಿಗಬೇಕು. ಜಗತ್ತಿನಲ್ಲೇ ಕೊರೋನಾ ನಿವಾರಣೆಯಾಗಬೇಕು. ಜಲಪ್ರವಾಹ ನಿಲ್ಲಬೇಕು ಎಂದು ಪ್ರಾರ್ಥಿಸಿದ್ದೇನೆ ಎಂದು ಹೇಳಿದರು.

ಮುಂದುವರೆದ ಅವರು, ಕೊರೋನಾ ವಾರಿಯರ್ಸ್‌ಗಳನ್ನ ಹುತಾತ್ಮರನ್ನಾಗಿ ನೋಡಬೇಕು. ದೇಶದಲ್ಲಿ ಕೊರೋನಾದಿಂದ 500 ಮಂದಿ ವೈದ್ಯರು ಸಾವನ್ನಪ್ಪಿದ್ದಾರೆ. 700 ಮಂದಿ ನರ್ಸ್‌ ಹಾಗೂ ಟೆಕ್ನಿಷಿಯನ್ ಸಾವನ್ನಪ್ಪಿದ್ದಾರೆ. ಇವರೆಲ್ಲರಿಗೆ ಸರ್ಕಾರ ನೀಡಬೇಕಾದ ಸೌಲಭ್ಯ‌ ನೀಡಬೇಕು. ಕೊರೋನಾ ವಾರಿಯರ್ಸ್‌ಗೆ ಸರ್ಕಾರದಿಂದ ಪ್ರಶಂಸೆ ಪತ್ರ ನೀಡಬೇಕು. ಕೊರೋನಾ ಆತಂಕದ ರೋಗ ಅಷ್ಟೆ. ಅದು ಕಳಂಕದ ರೋಗ ಅಲ್ಲ. ಕೊರೋನಾ ಬಗ್ಗೆ ಭಯ ಬೇಡ. ಈ ಕಾಯಿಲೆಯಿಂದ ವೈದ್ಯರೇ ರೋಗಿಗಳಾಗುತ್ತಿದ್ದಾರೆ. ಇದನ್ನ‌ ತಡೆಗಟ್ಟಲು ಸರ್ಕಾರ ಕ್ರಮ ಕೈಗೊಳ್ಳಬೇಕು. ವೈದ್ಯರ ಮೇಲೆ ಹಲ್ಲೆ ನಿಲ್ಲಬೇಕು.

ವೈದ್ಯರ ಮೇಲೆ‌ ಹಲ್ಲೆ ಮಾಡಿದರೆ ವೈದ್ಯ ವೃತ್ತಿ ಬೇರೆ ದಾರಿ ಹಿಡಿಯುತ್ತದೆ. ಜನರು ಅರ್ಥ ಮಾಡಿಕೊಳ್ಳಬೇಕು.‌ ವೈದ್ಯರು ಮನುಷ್ಯರೇ. ಗ್ರಾಮೀಣ ಆಸ್ಪತ್ರೆಗಳನ್ನು ಜಿಲ್ಲಾ ಕೇಂದ್ರಗಳಿಂದ ನಿರ್ವಹಣೆ ಮಾಡಬೇಕು ಎಂದ ಅವರು, ವೈದ್ಯರ ಬಗ್ಗೆ ಗೌರವ ನೀಡಿ ದಸರಾ ಉದ್ಘಾಟನೆ ಮಾಡಿಸಿದ್ದಕ್ಕೆ ಮತ್ತೊಮ್ಮೆ ಧನ್ಯವಾದ ಹೇಳಿದರು.

ಈ‌ ವರ್ಷ ಕೊರೋನಾಗೆ ಲಸಿಕೆ‌ ಬರುವ ಸಾಧ್ಯತೆ ಇಲ್ಲ. ಮುಂದಿನ ವರ್ಷ ಲಸಿಕೆ ಸಿಗಲಿದೆ. ಅಲ್ಲಿಯವರಗೆ ನಾವು ನಿಯಮ ಪಾಲಿಸಿಕೊಂಡೇ ಕೊರೋನಾ ವಿರುದ್ದ ಹೋರಾಡಬೇಕು. ಮಾತನಾಡುವಾಗ ಮಾಸ್ಕ್ ತೆಗೆಯಬೇಡಿ. ಪರಿಸರದ ವಿರುದ್ಧ ಹೋದರೆ ಏನಾಗುತ್ತೆ ಅನ್ನೋದಕ್ಕೆ ಕೊರೋನಾ ಸಾಕ್ಷಿ. ಮಾಡಬಾರದ್ದನ್ನ ಮಾಡಿದರೆ ಆಗಬಾರದು ಆಗುತ್ತೆ ಅನ್ನೋದಕ್ಕೆ ಈ ಬೆಳವಣಿಗೆಯಿಂದ ತಿಳಿಯಬೇಕು. ಕೊರೋನಾ ನಿಯಂತ್ರಣಕ್ಕೆ ತಮ್ಮ ಆರೋಗ್ಯವನ್ನೂ ಲೆಕ್ಕಿಸದೆ ಸಿಎಂ ಸ್ಪಂದಿಸಿದ್ದಾರೆ. ರಾಜ್ಯ ಸರ್ಕಾರದ ಮುತುವರ್ಜಿಯಿಂದ ಎಲ್ಲಾ ಸೌಲಭ್ಯಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿದೆ. ಸರ್ಕಾರದ ಜೊತೆ ಸಾರ್ವಜನಿಕರು ಕೈಜೋಡಿಸಿದ್ರೆ ಆದಷ್ಟು ಬೇಗ ಕೊರೋನಾ ನಿಯಂತ್ರಣ ಮಾಡಬಹುದು ಎಂದರು.

ವೈದ್ಯರು ಮನೆಯಲ್ಲಿ ಪೂಜೆ ಮಾಡ್ತಾರೋ ಇಲ್ವೋ ಗೊತ್ತಿಲ್ಲ. ಗಂಭೀರ ರೋಗಿಗಳ ಪರವಾಗಿ ಎಷ್ಟೋ ವೈದ್ಯರು ಹರಕೆ‌ ಕಟ್ಟಿಕೊಂಡಿದ್ದಾರೆ. ರೋಗಿಯ ಆರೋಗ್ಯವೇ ನನ್ನ ಭಾಗ್ಯ ಅಂತಾರೆ ವೈದ್ಯರು. ಕೊರೋನಾ ಕಳಂಕವಲ್ಲ, ಆತಂಕ. ಕೊರೋನಾ ಸೋಂಕಿತರನ್ನು ಬೇರೆಯದ್ದೇ ರೀತಿಯಲ್ಲಿ ನೋಡಲಾಗುತ್ತಿದೆ. ಕಾಲ ಬದಲಾಗಿಲ್ಲ. ಜನ ಬದಲಾಗಿದ್ದಾರೆ. ಜೀವನ ಶೈಲಿ ಬದಲಾಗಿದೆ. ನಾವು ಚಂದ್ರ, ಮಂಗಳಯಾನದ ಬಗ್ಗೆ ಮಾತನಾಡುತ್ತಿದ್ದೇವೆ. ಪಕ್ಕದ ಮನೆಯಲ್ಲಿ ಯಾರಿದ್ದಾರೆ ಅಂತ ಗೊತ್ತಿರೋದಿಲ್ಲ. ಫೇಸ್‌ಬುಕ್‌ನಲ್ಲೇ ಗೆಳೆಯರೊಂದಿಗೆ ಹೆಚ್ಚು ಸಂಪರ್ಕದಲ್ಲಿ ಇರುತ್ತೇವೆ. ಆದರೆ ನಿಜವಾದ ಸ್ನೇಹಿತರನ್ನು ಕಳೆದುಕೊಳ್ಳುತ್ತಿದ್ದೇವೆ. ಸಾಮಾಜಿಕ ಜಾಲತಾಣ ಸಮಾಜದ ಆರೋಗ್ಯ ಹಾಳು ಮಾಡುತ್ತಿವೆ. ಮಾನವನ‌ ಶರೀರ ಐಸ್ ಕ್ರೀಂ ಇದ್ದಂತೆ. ಒಳ್ಳೆಯದ್ದು ಮಾಡಿದ್ರು ಕರಗುತ್ತೆ ಕೆಟ್ಟದ್ದು ಮಾಡಿದ್ರು ಕರಗುತ್ತೆ. ಆದರೆ ನಮ್ಮ ದೇಹ ಒಳ್ಳೆಯ ಕೆಲಸಗಳಿಗೆ ಕರಗಲಿ. ನಮ್ಮಿಂದ ಇನ್ನೊಬ್ಬರಿಗೆ ಸಹಾಯವಾಗಲಿ ಎಂದು ಹೇಳಿದರು.

ತಂತ್ರಜ್ಞಾನ ಹೆಚ್ಚಾಗಿದೆ. ರೋಗಗಳು ಹೆಚ್ಚಾಗಿದೆ. ತಂತ್ರಜ್ಞಾನ ಸಾಮಾನ್ಯರಿಗೆ ತಲುಪದಿದ್ದರೆ ಪ್ರಯೋಜನವೇ ಆಗೋಲ್ಲ. ಮನುಷ್ಯ ಸಾಧನೆ ಮಾಡದೆ ಬದುಕಿದೆ ಸಾವಿಗೆ ಬೆಲೆ ಇರೋಲ್ಲ. ಮನುಷ್ಯತ್ವ ಇಲ್ಲದೆ ಬದುಕಿದರೆ ಜೀವನಕ್ಕೆ ಬೆಲೆ ಇರೋದಿಲ್ಲ. ಹೆಚ್ಚು ಹೆಚ್ಚು ಡಿಗ್ರಿ ಪಡೆಯುತ್ತಿದ್ದೇವೆ. ಆದ್ರೆ ಸಾಮಾನ್ಯ ಜ್ಞಾನ ಕಡಿಮೆ‌ ಆಗ್ತಿದೆ. ನಮ್ಮಲ್ಲಿ ಎಷ್ಟೇ ವಿದ್ಯೆ ಇದ್ದರೂ ಅದು ಬದುಕಿಗಿಂತ ಯಾವುದು ಮುಖ್ಯವಲ್ಲ. ಮನೆ ದೊಡ್ಡದಾಗುತ್ತಿವೆ, ಆದ್ರೆ ಮನೆಯೊಳಗಿರುವವರು ಸಣ್ಣವರಾಗುತ್ತಿದ್ದೇವೆ. ಇದೆಲ್ಲವನ್ನ ನಾವು ಬದಲಾಯಿಸಿಕೊಳ್ಳಬೇಕು. ನಾವು ಸಮಾಜದ ಆರೋಗ್ಯ ಕಾಪಾಡಲು ಪ್ರಯತ್ನಿಸಬೇಕು ಎಂದರು.

Comments are closed.