ಕರ್ನಾಟಕ

ಎಸ್‍ಪಿಬಿಗೆ ಮೊದಲ ಗುರು ಯಾರು ಗೊತ್ತಾ?

Pinterest LinkedIn Tumblr


ಬೆಂಗಳೂರು: ನಟನಾಗಿ ಮೊದಲಿಗೆ ಕಾಣಿಸಿಕೊಂಡರೂ, ನಂತರ ಅವರು ಗಾಯಕರಾಗಿ ಅಜರಾಮರವಾದ ಎಷ್ಟೋ ಹಾಡುಗಳನ್ನು ಹಾಡಿದವರು ಎಸ್.ಪಿ.ಬಾಲಸುಬ್ರಹ್ಮಣ್ಯಂ.
ಸುಮಾರು 16 ಭಾಷೆಗಳಲ್ಲಿ ಎಸ್‍ಪಿಬಿ ಹಾಡು ಹಾಡಿದ ಇವರಿಗೆ ತಮ್ಮ ತಂದೆಯೇ ಮೊದಲ ಗುರುವಾಗಿದ್ದಾರೆ. ಅದೂ ಸಹ ಹರಿಕಥೆಗಳ ಮೂಲಕ ಎನ್ನುವುದು ವಿಶೇಷ.

ಎಸ್.ಪಿ.ಬಾಲಸುಬ್ರಹ್ಮಣ್ಯಂ ತಂದೆ ಸಾಂಬಮೂರ್ತಿ ಹರಿಕಥೆ ಹೇಳುತ್ತಿದ್ದರು. ಭಕ್ತಿ ರಸ ನಾಟಕಗಳನ್ನು ಪ್ರದರ್ಶಿಸುತ್ತಿದ್ದರು. ಹೀಗಾಗಿ ಬಾಲಸುಬ್ರಹ್ಮಣ್ಯಂ ಅವರಿಗೆ ಚಿಕ್ಕವಯಸ್ಸಿನಲ್ಲೇ ಸಂಗೀತದ ಮೇಲೆ ಆಸಕ್ತಿ ಬೆಳೆಯಿತು. ಐದನೇ ವಯಸ್ಸಿನಲ್ಲಿಯೇ ಭಕ್ತರಾಮದಾಸು ನಾಟಕದಲ್ಲಿ ತಂದೆ ಜೊತೆ ಬಾಲು ನಟಿಸಿದ್ದರು.

ಶ್ರೀಕಾಳಹಸ್ತಿಯ ಬೋರ್ಡ್ ಶಾಲೆಯ ಜಿ.ವಿ.ಸುಬ್ರಹ್ಮಣ್ಯಂ ಎಂಬ ಶಿಕ್ಷಕರು, ಬಾಲು ಅವರಿಂದ ಹಾಡೊಂದನ್ನು ಹಾಡಿಸಿ ರೆಕಾರ್ಡ್ ಮಾಡಿದ್ದರು. ಇದು ಬಾಲುಗಾರು ಅವರಿಗೆ ಮರೆಯಲಾಗದ ಅನುಭೂತಿ. ಮತ್ತೊಬ್ಬ ಶಿಕ್ಷಕರಾದ ರಾಧಾಪತಿ ಪ್ರೋತ್ಸಾಹದಿಂದ ಹಲವು ನಾಟಕಗಳಲ್ಲಿ ನಟಿಸಿದ್ದರು.

ಎಸ್‍ಪಿ ಬಾಲಸುಬ್ರಹ್ಮಣ್ಯಂ ಪಿಯುಸಿ ಬಳಿಕ ಒಂದು ಆರ್ಕೆಸ್ಟ್ರಾ ಶುರು ಮಾಡಿದ್ದರು. ಗೆಳೆಯರೊಂದಿಗೆ ಆರ್ಕೆಸ್ಟ್ರಾ ಮೂಲಕ ಸ್ಟೇಜ್ ಶೋ ನೀಡುತ್ತಿದ್ದರು. ಅನಂತಪುರದಲ್ಲಿ ಎಂಜಿನಿಯರಿಂಗ್ ಕಾಲೇಜು ಸೇರಿ ನಂತರ ಅದು ಹಿಡಿಸದೇ ಮದ್ರಾಸ್‍ಗೆ ತೆರಳಿ ಎಂಜಿಯರಿಂಗ್‍ಗೆ ಪರ್ಯಾಯ ಎನಿಸಿದ್ದ ಎಎಂಐಇಗೆ ಸೇರಿದ್ದರು. ಅಲ್ಲಿ ಓದಿನ ಜೊತೆಗೆ ಸಿನಿಮಾದಲ್ಲಿ ಹಾಡಲು ಪ್ರಯತ್ನ ನಡೆಸಿದ್ದರು.

1964ರಲ್ಲಿ ಮದ್ರಾಸ್ ಸೋಷಿಯಲ್ ಅಂಡ್ ಕಲ್ಚರಲ್ ಕ್ಲಬ್ ನಿರ್ವಹಿಸಿದ ಲಲಿತಾ ಸಂಗೀತಾ ಸ್ಪರ್ಧೆಯಲ್ಲಿ ಪಾಲ್ಗೊಂಡ ಎಸ್‍ಪಿಬಿಗೆ ಮೊದಲ ಬಹುಮಾನ ಬಂತು. ಪೆಂಡ್ಯಾಲ, ಘಂಟಸಾಲ ಅವರು ಜಡ್ಜ್‍ಗಳಾಗಿದ್ದರು. ಖ್ಯಾತ ಸಂಗೀತ ನಿರ್ದೇಶಕ ಕೋದಂಡಪಾಣಿ, ಎಸ್‍ಪಿಬಿ ಗಾಯನ ಕಂಡು ಮಂತ್ರಮುಗ್ಧರಾಗಿದ್ದರು. ಮುಂದೆ ಎಸ್‍ಪಿಬಿಗೆ ಸಿನಿಮಾದಲ್ಲಿ ಹಾಡಲು ಅವಕಾಶ ನೀಡೋದಾಗಿ ಕೋದಂಡಪಾಣಿ ಮಾತು ನೀಡಿದ್ದರು.

Comments are closed.