ಬೆಂಗಳೂರು: ಕಳೆದ ಕೆಲ ದಿನಗಳಿಂದ ಮಳೆಯ ಅಬ್ಬರ ಮುಂದುವರೆದಿದ್ದು, ರಾಜ್ಯದ ಹಲವೆಡೆ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
ರಾಜ್ಯದ ಕರಾವಳಿ, ಮಲೆನಾಡು ಹಾಗೂ ಕೊಡಗು ಭಾಗದಲ್ಲಿ ಭಾನುವಾರ ಧಾರಾಕಾರ ಮಳೆ ಆಗಿದೆ. ಭಾರಿಮಳೆಗೆ ಉಡುಪಿ ನಗರ, ಜಿಲ್ಲೆಯ ಕೆಲ ಪ್ರದೇಶಗಳು ನಲುಗಿ ಹೋಗಿವೆ. ಹಲವೆಡೆ ಭೂಕುಸಿತದಿಂದ ರಸ್ತೆ ಸಂಚಾರ ಸ್ಥಗಿತಗೊಂಡಿದೆ. ಉಡುಪಿ ನಗರ ದ್ವೀಪದಂತಾಗಿದ್ದು,ಹಲವು ಬಡಾವಣೆಗಳು ಭಾಗಶಃ ಮುಳುಗಡೆಯಾಗಿವೆ. ಬ್ರಹ್ಮಾವರ, ಕಾಪುತಾಲ್ಲೂಕುಗಳಲ್ಲೂ ಧಾರಾಕಾರ ಮಳೆಯಾಗಿದೆ. ದಕ್ಷಿಣ ಕನ್ನಡ, ಚಿಕ್ಕಮಗಳೂರು ಜಿಲ್ಲೆಯಲ್ಲೂ ಭಾರಿ ಮಳೆ ಸುರಿದಿದೆ. ಕೊಡಗು ಜಿಲ್ಲೆಯ ಭಾಗಮಂಡಲಮತ್ತೆ ಜಲಾವೃತಗೊಂಡಿದೆ. ಶಿವಮೊಗ್ಗ ಜಿಲ್ಲೆಯಲ್ಲಿ ಜೋರು ಮಳೆ ಆಗುತ್ತಿದೆ. ಉತ್ತರ ಕರ್ನಾಟಕ ಭಾಗದಲ್ಲೂ ಉತ್ತಮ ಮಳೆ ಆಗಿದೆ.
ಮಳೆ ಮತ್ತು ಪ್ರವಾಹದಿಂದಾಗಿ ರಾಜ್ಯಕ್ಕೆ ಆಗಸ್ಟ್ ನಲ್ಲಿ 8 ಸಾವಿರ ಕೋಟಿ ರೂ ನಷ್ಟವಾಗಿದೆ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷ 35 ಸಾವಿರ ಕೋಟಿ ರೂ ನಷ್ಟವಾಗಿತ್ತು.
ಕೊಡಗು ಜಿಲ್ಲೆ ಯಲ್ಲೂ ಮಳೆಯ ಅಬ್ಬರ ಮುಂದು ವರಿದಿದೆ. ಭಾಗಮಂಡಲ ಮತ್ತೆ ಜಲಾವೃತಗೊಂಡಿದೆ. ಕೇರಳದಲ್ಲಿ ಭಾರಿ ಮಳೆ ಯಾಗುತ್ತಿರುವುದರಿಂದ ಮೈಸೂರು ಜಿಲ್ಲೆಯಲ್ಲಿ ಕಬಿನಿ ಜಲಾಶಯದ ಒಳ ಹರಿವಿನಲ್ಲಿ ಏರಿಕೆಯಾಗಿದ್ದು, ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ. ಕೆಆರ್‌ಎಸ್ ಜಲಾಶಯಕ್ಕೆ ಹರಿದು ಬರುತ್ತಿರುವ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ. ಭದ್ರಾ ಜಲಾಶಯದಿಂದ 60 ಸಾವಿರ ಕ್ಯುಸೆಕ್ ನೀರು ಬಿಡು ಗಡೆ: ಶಿವಮೊಗ್ಗ ಜಿಲ್ಲೆಯಲ್ಲಿ ಆಗಾಗ್ಗೆ ಜೋರು ಮಳೆಯಾಗುತ್ತಿದ್ದು, ಭದ್ರಾ ಜಲಾಶಯದಿಂದ ನೀರಿನ ಹೊರಹರಿವು ಹೆಚ್ಚಿದೆ.
ಶಿವಮೊಗ್ಗದ ಹಲವೆಡೆ ಸಾಧಾರಣ ಮಳೆಯಾಗಿದೆ. ಹೊಸನಗರ ತಾಲ್ಲೂಕಿನ ನಗರ ಹೋಬಳಿಯಲ್ಲಿ ಭಾರಿ ಮಳೆ ಸುರಿಯುತ್ತಿದೆ. ತಾಲ್ಲೂಕಿನ ಕೆಲವೆಡೆ ಧರೆ ಕುಸಿತದ ಭೀತಿ ಎದುರಾಗಿದೆ. ಉತ್ತರ ಕನ್ನಡ, ಬೆಳಗಾವಿ, ಕಲಬುರ್ಗಿ, ಬೀದರ್, ರಾಯಚೂರು ಮತ್ತು ಕೊಪ್ಪಳ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ.
ಇನ್ನು ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ರಾಜ್ಯದ ಶಿವಮೊಗ್ಗ, ಕೊಡಗು, ಹಾಸನ, ಚಿಕ್ಕಮಗಳೂರು, ಉತ್ತರ ಕನ್ನಡ, ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಧಾರಾಕಾರ ಮಳೆಯಾಗುವ ಮುನ್ಸೂಚನೆ ಇದೆ. ಈ ಜಿಲ್ಲೆಗಳಲ್ಲಿ ಸೆ.21 ರವರೆಗೆ ‘ರೆಡ್ ಅಲರ್ಟ್’ ಮುಂದುವರಿಸಲಾಗಿದೆ. ಕರಾವಳಿ, ದಕ್ಷಿಣ ಒಳನಾಡಿನ ಜಿಲ್ಲೆಗಳಲ್ಲಿ ಸೆ.23 ರವರೆಗೆ ಗುಡುಗು, ಸಿಡಿಲು ಸಹಿತ ಭಾರಿ ಮಳೆಯಾಗುವ ಮುನ್ಸೂಚನೆ ಇದೆ. ಕೇರಳದ ಕಾಸರಗೋಡು, ಕಣ್ಣೂರು, ಮಲಪ್ಪುರಂ ಹಾಗೂ ಇಡುಕ್ಕಿ ಜಿಲ್ಲೆಗಳಲ್ಲಿ ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
Comments are closed.