ಕರ್ನಾಟಕ

ಚಿತ್ರದುರ್ಗ; ಮಳೆಯಿಂದ ಕೊಳೆತು ಹೋಗುತ್ತಿರುವ ಈರುಳ್ಳಿ

Pinterest LinkedIn Tumblr


ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ ತಿಂಗಳಿಂದ ಎಡೆಬಿಡದೆ ಸುರಿದ ವರುಣನ ಅಬ್ಬರ ನೂರಾರು ಎಕರೆಗಳಲ್ಲಿ ರೈತರು ಬೆಳೆದ ಈರುಳ್ಳಿಯನ್ನು ಮಾರಾಟ ಮಾಡಲು ಆಗದೆ ತಿಪ್ಪೆಗೆ ಸುರಿಯುತ್ತಿದ್ದಾರೆ. ಲಕ್ಷಾಂತರ ರೂ. ಬಂಡವಾಳ ಹೂಡಿದ್ದ ರೈತ ಸಂಕಷ್ಠಕ್ಕೆ ಸಿಲುಕಿ ಪರಿಹಾರಕ್ಕಾಗಿ ಸರ್ಕಾರಕ್ಕೆ ಬೇಡುವಂತಾಗಿದೆ.

ಜಿಲ್ಲೆಯಲ್ಲಿ ಬಂಗಾರದ ಬೆಳೆಯೆಂದು ಈರುಳ್ಳಿ ಬೆಳೆದಿದ್ದ ರೈತರು ಟ್ರಾಕ್ಟರ್ ಮೂಲಕ ನಾಶ ಮಾಡಿ, ಕೊಳೆಯುತ್ತಿರುವ ಈರುಳ್ಳಿಯನ್ನ ಟ್ರಾಕ್ಟರ್​​ನಲ್ಲಿ ಹೇರಿಕೊಂಡು ಊರಾಚೆಯ ತಿಪ್ಪೆ, ಖಾಲಿ‌ ಜಮೀನಿಗೆ ಸುರಿಯುತ್ತಿದ್ದಾರೆ.

ಪ್ರತಿ ಬಾರಿ ಜಿಲ್ಲೆಯಲ್ಲಿ ಮಳೆಯ ಪ್ರಮಾಣ ತೀರ ಕಡಿಮೆ ಇರುತ್ತಿತ್ತು. ಜಿಲ್ಲೆಯಲ್ಲಿ ರಣ ಭೀಕರ ಬಿಸಿಲು, ಬರದ ಮಧ್ಯೆಯೂ ಅಲ್ಪ‌ ಮಳೆ ಸ್ವಲ್ಪ ಮಳೆ ಹಾಗೂ ಬೋರ್ವೆಲ್ ಆಶ್ರಯದಿಂದ ನೂರಾರು ಎಕರೆಯಲ್ಲಿ ರೈತರು ಈರುಳ್ಳಿ ಬೆಳೆಯನ್ನೇ ಬಂಗಾರ ಅಂತ ಬೆಳೆಯುತ್ತಿದ್ದರು. ಅಷ್ಟೇ ಅಲ್ಲದೆ, ಕೊಳವೆ ಬಾವಿಯಲ್ಲಿ ನೀರಿಲ್ಲ ಎಂದರೆ ಟ್ಯಾಂಕರ್ ಮೂಲಕ ನೀರು ಹಾಯಿಸಿ, ಕಷ್ಟಪಟ್ಟು ಈರುಳ್ಳಿ ಫಸಲು ತೆಗೆದು ಜೀವನ ಸಾಗಿಸುತ್ತಿದ್ದರು. ಆದರೆ, ಈ ವರ್ಷ ಸುರಿದ ಭಾರೀ ಮಳೆಯಿಂದಾಗಿ ಜಿಲ್ಲೆಯ ರೈತರ ಬದುಕಿನ ಚಿತ್ರಣವೇ ಬದಲಾಗಿ ಹೋಗಿದೆ. ಪ್ರತಿವರ್ಷ ಅನಾವೃಷ್ಠಿ ಎದುರಿಸುತ್ತಿದ್ದ ಜಿಲ್ಲೆಯ ಈರುಳ್ಳಿ ಬೆಳೆಗಾರರು, ಈ ಬಾರಿ ಅತಿವೃಷ್ಠಿಗೆ ಸಿಲುಕಿ ನಲುಗಿ ಹೋಗಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ, ಹಿರಿಯೂರು, ಮೊಳಕಾಲ್ಮೂರು, ಚಿತ್ರದುರ್ಗ ತಾಲ್ಲೂಕಿನಲ್ಲಿ ಬೆಳೆದ ಈರುಳ್ಳಿ ಬೆಳೆ ಮಳೆ ಹೆಚ್ಚಾಗಿ, ಕೊಳೆತು ಹೋಗಿದೆ. ಜಿಲ್ಲೆಯಲ್ಲಿ ಈರುಳ್ಳಿ ಬೆಳೆದ ರೈತರು ತೀವ್ರ ಸಂಕಷ್ಠಕ್ಕೆ ಸಿಲುಕಿದ್ದು, ಸೋನೆ ಮಳೆಯಲ್ಲಿ ರೈತರ ಬದುಕು ಕೊಚ್ಚಿ ಹೋಗಿದೆ. ಅಲ್ಲದೆ, ಆರಂಭದಲ್ಲಿ ಈರುಳ್ಳಿ ಬೀಜಕ್ಕೆ, ಪ್ರತಿ ಕೆಜಿಗೆ 2000 ಕ್ಕೂ ಅಧಿಕ ಹಣ ಹಾಕಿ ಬಿತ್ತನೆ ಮಾಡಿದ್ದರು. ಸತತ ಪರಿಶ್ರಮದಿಂದ ಲಕ್ಷಾಂತರ ಹಣ ಖರ್ಚು ಮಾಡಿ ಬೆಳೆದಿದ್ದ ಈರುಳ್ಳಿ ಬೆಳೆ ಕೈ ಸೇರುವ ಬದಲು ಕೊಳೆತು ತಿಪ್ಪೆ ಸೇರುತ್ತಿದೆ.

ಅತಿವೃಷ್ಠಿಯ ಪರಿಸ್ಥಿತಿ ಕುರಿತು ಆರೋಗ್ಯ ಮಂತ್ರಿ ಶ್ರೀರಾಮುಲು ಟ್ವೀಟ್ ಮಾಡಿದ್ದು, 7302 ಹೆಕ್ಟೇರ್​ನಷ್ಟು ಬೆಳೆ ಹಾನಿಯಾಗಿದ್ದು, 9 ಕೋಟಿ 87 ಲಕ್ಷಕ್ಕೂ ಅಧಿಕ ನಷ್ಠವಾಗಿದೆ. ಕೂಡಲೇ ಸರ್ಕಾರ ಚಿತ್ರದುರ್ಗ ಅತಿವೃಷ್ಠಿ ಹಾಗೂ ಪ್ರವಾಹ ಪೀಡಿತ ಜಿಲ್ಲೆಯ ಎಂದು ಘೋಷಿಸುವಂತೆ ಮುಖ್ಯಮಂತ್ರಿಗಳ ಬಳಿ ಮನವಿ ಮಾಡಿದ್ದಾರೆ.

Comments are closed.