
ಬೆಂಗಳೂರು: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು ತಮ್ಮ ಮನದಿಂಗಿತವನ್ನು ಈಡೇರಿಸುವಂತೆ ನೇರವಾಗಿ ದೇವರಿಗೇ ಪತ್ರ ಬರೆದಿದ್ದಾರೆ! ಸಿಎಂ ಯಡಿಯೂರಪ್ಪನವರ ಸಂಪುಟದಲ್ಲಿ ಆರೋಗ್ಯ ಸಚಿವರಾಗಿರುವ ಶ್ರೀರಾಮುಲು ನನ್ನನ್ನು ಉಪ ಮುಖ್ಯಮಂತ್ರಿಯನ್ನಾಗಿ ಮಾಡಿಸು ತಾಯೇ ಎಂದು ದುರ್ಗಾ ಮಾತೆಗೆ ಪತ್ರ ಬರೆದಿದ್ದಾರೆ. ಆ ಪತ್ರ ಈಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಗುರುವಾರ ಕಲಬುರ್ಗಿಯ ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಸಚಿವ ಶ್ರೀರಾಮುಲು ಅದಕ್ಕೂ ಮೊದಲು ಯಾದಗಿರಿ ಜಿಲ್ಲೆಯ ಶಹಾಪುರದ ಪ್ರಸಿದ್ಧ ಗೋನಾಲ್ ದುರ್ಗಮ್ಮ ದೇವಿ ದೇವಸ್ಥಾನಕ್ಕೆ ತೆರಳಿದ್ದರು. ಈ ದೇವಸ್ಥಾನದಲ್ಲಿ ಏನೇ ಬೇಡಿಕೊಂಡು ಪತ್ರದಲ್ಲಿ ಬರೆದು, ದೇವಿಗೆ ನೀಡಿದರೂ ಆಕೆ ಅದನ್ನು ಈಡೇರಿಸುತ್ತಾಳೆ ಎಂಬ ನಂಬಿಕೆಯಿದೆ. ಹೀಗಾಗಿ, ಸಚಿವ ಶ್ರೀರಾಮುಲು ಕೂಡ ಪತ್ರ ಬರೆದಿದ್ದು, ತಮ್ಮನ್ನು ಕರ್ನಾಟಕದ ಉಪ ಮುಖ್ಯಮಂತ್ರಿಯನ್ನಾಗಿ ಮಾಡುವಂತೆ ದೇವಿಯ ಬಳಿ ಬೇಡಿಕೆ ಇಟ್ಟಿದ್ದಾರೆ.
ಕರ್ನಾಟಕ ಸರ್ಕಾರದ ನಾನಾ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಸಚಿವ ಶ್ರೀರಾಮುಲು ಕಲ್ಯಾಣ ಕರ್ನಾಟಕ ಉತ್ಸವದಲ್ಲೂ ಪಾಲ್ಗೊಳ್ಳಲು ತೆರಳಿದ್ದರು. ಹೈದರಾಬಾದ್-ಕರ್ನಾಟಕ ಮುಕ್ತಿ ದಿನದ ಅಂಗವಾಗಿ ಈ ಉತ್ಸವವನ್ನು ಆಚರಿಸಲಾಗುತ್ತದೆ. ಕಳೆದ ವರ್ಷದಿಂದ ಇದನ್ನು ಕಲ್ಯಾಣ ಕರ್ನಾಟಕ ಉತ್ಸವವನ್ನಾಗಿ ಆಚರಿಸಲಾಗುತ್ತಿದೆ. ಈ ವೇಳೆ ಯಾದಗಿರಿಯ ಗೋನಾಲ್ ಗ್ರಾಮದಲ್ಲಿರುವ ದುರ್ಗಾ ದೇವಿ ದೇವಸ್ಥಾನದಲ್ಲಿ ಪೂಜೆ ನಡೆಸಿದ ಸಚಿವ ಶ್ರೀರಾಮುಲು ದೇವಿಯ ಪಾದದ ಬಳಿ ಪತ್ರವನ್ನು ಇಟ್ಟು, ತಮ್ಮನ್ನು ಉಪಮುಖ್ಯಮಂತ್ರಿಯನ್ನಾಗಿ ಮಾಡುವಂತೆ ಕೋರಿ, ಆಶೀರ್ವಾದ ಪಡೆದಿದ್ದಾರೆ.
ಮೂರೇ ಸಾಲಿನಲ್ಲಿ ಇಂಗ್ಲಿಷ್ನಲ್ಲಿ ಬರೆಯಲಾಗಿರುವ ಪತ್ರದಲ್ಲಿ ಸಚಿವ ಶ್ರೀರಾಮುಲು ತಮ್ಮ ಸಹಿಯನ್ನು ಹಾಕಿದ್ದಾರೆ. ಅದರ ಮೇಲ್ಭಾಗದಲ್ಲಿ ತಾವು ರಾಜ್ಯದ ಉಪ ಮುಖ್ಯಮಂತ್ರಿಯಾಗಲು ಬಯಸಿದ್ದೇನೆ. ಆದಷ್ಟು ಬೇಗ ಆ ಆಸೆಯನ್ನು ಈಡೇರಿಸಬೇಕೆಂದು ಬೇಡಿದ್ದಾರೆ.
Comments are closed.