ಗಲ್ಫ್

ಕೊರೋನಾ ಪ್ರಯಾಣಿಕರನ್ನು ಕರೆದೊಯ್ದ ಹಿನ್ನೆಲೆ; ಏರ್ ಇಂಡಿಯಾ ಎಕ್ಸ್ ಪ್ರೆಸ್ ಮೇಲೆ ವಿಧಿಸಿದ್ದ ಹಾರಾಟ ನಿರ್ಬಂಧವನ್ನು ಹಿಂಪಡೆದ ದುಬೈ

Pinterest LinkedIn Tumblr

ಹೊಸದಿಲ್ಲಿ: ಕೊರೋನಾ ಪ್ರಯಾಣಿಕರನ್ನು ಕರೆದೊಯ್ದ ಹಿನ್ನೆಲೆಯಲ್ಲಿ ದುಬೈಗೆ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಸಂಚಾರವನ್ನು ನಿರ್ಬಂಧಗೊಳಿಸಿದ್ದ ಬೆನ್ನಲ್ಲೇ ಇದೀಗ ಹಾರಾಟ ನಿರ್ಬಂಧವನ್ನು ದುಬೈ ಹಿಂಪಡೆದುಕೊಂಡಿದೆ.

ಕೊರೋನ ಪಾಸಿಟಿವ್ ಆದ ಇಬ್ಬರು ವ್ಯಕ್ತಿಗಳನ್ನು ವಿಮಾದಲ್ಲಿ ದುಬೈಗೆ ಕರೆದುಕೊಂಡು ಬಂದ ಬೆಳವಣಿಗೆಯ ನಂತರ ದುಬೈ ಈ ವಿಮಾನ ಯಾನ ಸಂಸ್ಥೆಯ ವಿಮಾನಗಳ ಹಾರಾಟಕ್ಕೆ ಅಕ್ಟೋಬರ್ 2ರವರೆಗೆ ನಿರ್ಬಂಧ ವಿಧಿಸಿತ್ತು.

ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನಗಳು ಶನಿವಾರದಿಂದ ಮೂಲ ವೇಳಾಪಟ್ಟಿಯಂತೆ ಕಾರ್ಯನಿರ್ವಹಿಸಲಿವೆ ಎಂದು ದುಬೈ ವಿಮಾನಯಾನ ಸಂಸ್ಥೆ ಶುಕ್ರವಾರ ಸಂಜೆ ಸ್ಪಷ್ಟಪಡಿಸಿದೆ.

ಇದಕ್ಕು ಮುನ್ನ, ಕೊರೊನಾ ವೈರಸ್‌ ಪಾಸಿಟಿವ್ ಸರ್ಟಿಫಿಕೇಟ್ ಹೊಂದಿರುವ ಪ್ರಯಾಣಿಕರನ್ನು ಕರೆತಂದಿರುವ ಆರೋಪದ ಹಿನ್ನೆಲೆಯಲ್ಲಿ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನಗಳನ್ನು ಅಕ್ಟೋಬರ್‌ 2ರವರೆಗೆ ನಿಷೇಧಿಸಿ ದುಬೈ ನಾಗರಿಕ ವಾಯುಯಾನ ಪ್ರಾಧಿಕಾರ(ಡಿಸಿಎಎ) ಆದೇಶ ಹೊರಡಿಸಿತ್ತು.

ಬಳಿಕ ಎಚ್ಚೆತ್ತುಕೊಂಡ ಏರ್ ಇಂಡಿಯಾ ಎಕ್ಸ್ ಪ್ರೆಸ್ ಸಂಸ್ಥೆ, ವಿಮಾನಗಳಲ್ಲಿ ಕೋವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ತನ್ನ “ಭಾರತದಲ್ಲಿನ ನಿರ್ವಹಣಾ ಸಂಸ್ಥೆಗಳಿಗೆ” ಮತ್ತೆ ಸೂಚಿಸಿರುವುದಾಗಿ ತಿಳಿಸಿದೆ. ಅಲ್ಲದೆ ಭವಿಷ್ಯದಲ್ಲಿ ಅಂತಹ ಯಾವುದೇ ತಪ್ಪು ಮರುಕಳುಹಿಸದಂತೆ ಎಚ್ಚರಿಕೆ ವಹಿಸಲು ಮೂರು ಹಂತದ ಪರಿಶೀಲನಾ ಕಾರ್ಯವಿಧಾನ” ವನ್ನು ಜಾರಿಗೆ ತರಲು ತನ್ನ ನಿರ್ವಹಣಾ ಏಜೆಂಟರಿಗೆ ಸೂಚಿಸಿರುವುದಾಗಿ ಹೇಳಿದೆ.

ಯುನೈಟೆಡ್ ಅರಬ್ ಎಮಿರೇಟ್ಸ್ ಸರ್ಕಾರದ ನಿಯಮ ಪ್ರಕಾರ, ಭಾರತದಿಂದ ದುಬೈಗೆ ಪ್ರಯಾಣಿಸುವ ಪ್ರತಿಯೊಬ್ಬ ಪ್ರಯಾಣಿಕರು ಮೂಲ ಕೊರೋನಾ ನೆಗೆಟಿವ್ ಪ್ರಮಾಣಪತ್ರವನ್ನು ಪ್ರಯಾಣಕ್ಕೆ 96 ಗಂಟೆ ಮೊದಲು ಸಲ್ಲಿಸಬೇಕು. ಆದರೆ ಕಳೆದ ಸೆಪ್ಟೆಂಬರ್ 2ರಂದು ಕೊರೋನಾ ಪಾಸಿಟಿವ್ ಸರ್ಟಿಫಿಕೇಟ್ ಪಡೆದಿದ್ದ ಪ್ರಯಾಣಿಕ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನದಲ್ಲಿ ಜೈಪುರ-ದುಬೈ ವಿಮಾನದಲ್ಲಿ ಸೆಪ್ಟೆಂಬರ್ 4ರಂದು ಸಂಚಾರ ನಡೆಸಿದ್ದರು. ಅದಕ್ಕೂ ಮೊದಲು ಕೊರೋನಾ ಪಾಸಿಟಿವ್ ಹೊಂದಿದ್ದ ಮತ್ತೊಬ್ಬ ಪ್ರಯಾಣಿಕ ಕೂಡ ದುಬೈಗೆ ಹೋಗಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಲಾಕ್​ಡೌನ್ ಬಳಿಕ ವಂದೇ ಭಾರತ್ ಮಿಷನ್​ನಡಿ ಭಾರತದಿಂದ ಅತಿಹೆಚ್ಚು ವಿಮಾನಗಳು ದುಬೈಗೆ ಸಂಚರಿಸುತ್ತಿದ್ದವು. ವಿದೇಶದಿಂದ ಭಾರತಕ್ಕೆ ಮರಳಿದ ಪ್ರಯಾಣಿಕರ ಪ್ರಮಾಣವನ್ನು ಗಮನಿಸಿದರೆ ಬೇರೆಲ್ಲ ದೇಶಗಳಿಗಿಂತ ದುಬೈನಿಂದ ಆಗಮಿಸಿದ ಪ್ರಯಾಣಿಕರೇ ಹೆಚ್ಚಿದ್ದಾರೆ.

Comments are closed.