ಕರ್ನಾಟಕ

ಖಾಸಗಿ ಶಾಲೆಗಳಿಗೆ ಶುಲ್ಕ ಸಂಗ್ರಹಕ್ಕೆ ಅನುಮತಿ: ಸಚಿವ ಸುರೇಶ್‌ ಕುಮಾರ್‌

Pinterest LinkedIn Tumblr


ಬೆಂಗಳೂರು: ಎಲ್ಲ ವರ್ಗಗಳ ಸಮಾನ ಸಮಸ್ಯಗಳಿಗೆ ಒಳಗಾದ ಕಾರಣ ಖಾಸಗಿ ಶಾಲೆಗಳು ಪಾಲಕರಿಂದ ಶುಲ್ಕ ಸಂಗ್ರಹಕ್ಕೆ ಒತ್ತಾಯ ಮಾಡಬಾರದೆಂದು ನಾವು ಆದೇಶಿಸಿದ್ದೆವು. ಬಜೆಟ್‌ ಶಾಲೆಗಳು ತೊಂದರೆಗೀಡಾದ್ದನ್ನು ಗಮನದಲ್ಲಿಟ್ಟುಕೊಂಡು ಹಾಗೂ ಖಾಸಗಿ ಶಾಲೆಗಳ ಶಿಕ್ಷಕರ ವೇತನಕ್ಕೆ ಸಮಸ್ಯೆಯಾಗಿರುವ ಅಂಶ ಪರಿಗಣಿಸಿ ಕಳೆದ ಹದಿನೈದು ದಿನಗಳ ಹಿಂದೆ ಶುಲ್ಕ ವಸೂಲಾತಿಗೆ ಅನುಮತಿ ನೀಡಲಾಗಿದೆ ಎಂದು ಸಚಿವ ಎಸ್. ಸುರೇಶ್‌ ಕುಮಾರ್‌ ತಿಳಿಸಿದ್ದಾರೆ.

ಶಾಲಾ ಕಾಲೇಜುಗಳು ದಿಢೀರನೇ ಮುಚ್ಚಬೇಕಾದ ಸಂದರ್ಭ ಒದಗಿಬಂದ ಕಾರಣ ಶುಲ್ಕ ವಸೂಲಾತಿಯನ್ನು ನೆಪವಾಗಿಟ್ಟುಕೊಂಡು ಖಾಸಗಿ ಶಾಲೆಗಳು ಆನ್ ಲೈನ್ ಮೂಲಕ ಅವೈಜ್ಞಾನಿಕ ಬೋಧನೆಯನ್ನು ಪ್ರಾರಂಭಿಸಿದವು. ಹೆಚ್ಚುವರಿ ಶುಲ್ಕವನ್ನು ಪೋಷಕರಿಂದ ವಸೂಲಿ ಮಾಡಲು ಪ್ರಾರಂಭಿಸಿದ ಕಾರಣ ನಿಮ್ಹಾನ್ಸ್ ಸಂಸ್ಥೆಯ ಮಕ್ಕಳ ಮಾನಸಿಕ ತಜ್ಞರನ್ನು ಸಂಪರ್ಕಿಸಿ ಎಲ್ ಕೆ ಜಿ ಯಿಂದ ಐದನೇ ತರಗತಿವರೆಗೆ ಆನ್ ಲೈನ್ ಬೋಧನೆ ಮಾಡುವುದನ್ನು ನಿಷೇಧಿಸಿದೆವು. ನಮ್ಮ ಸರ್ಕಾರದ ನಿರ್ಣಯಕ್ಕೆ ರಾಜ್ಯ ಘನ ಉಚ್ಛ ನ್ಯಾಯಾಲಯವು ತಡೆಯಾಜ್ಞೆ ನೀಡಿತು. ಅದೇ ಸಂದರ್ಭದಲ್ಲಿ ಇಡೀ ರಾಷ್ಟ್ರದಲ್ಲಿ ಮೊದಲ ಪ್ರಯತ್ನವಾಗಿ ಕೋವಿಡ್ ಸಂದರ್ಭದಲ್ಲಿ ಶಿಕ್ಷಣವನ್ನು ಮುಂದುವರೆಸಲು ಮಾರ್ಗಸೂಚಿಗಳ ಬಗ್ಗೆ ಹಿರಿಯ ಶಿಕ್ಷಣ ತಜ್ಞರನ್ನೊಳಗೊಂಡ ಸಮಿತಿ ರಚಿಸಿ ವರದಿಯನ್ನು ಪಡೆಯಲಾಯಿತು ಎಂದು ಅವರು ವಿವರಿಸಿದರು.

ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅಳವಡಿಸಿಕೊಳ್ಳುವ ಸಂಬಂಧ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಇಲಾಖೆ ಗಟ್ಟಿಯಾದ ಕ್ರಿಯಾ ಯೋಜನೆಯನ್ನು ರೂಪಿಸುತ್ತಿದ್ದು, ಉನ್ನತ ಶಿಕ್ಷಣ ಇಲಾಖೆಯೊಂದಿಗೆ ಜೊತೆಗೂಡಿ ಇಷ್ಟರಲ್ಲಿಯೇ ವರದಿಯನ್ನು ಲೋಕಾರ್ಪಣೆಗೊಳಿಸಲಿದೆ. ಈ ನೀತಿಯನ್ನು ಅನುಷ್ಠಾನಗೊಳಿಸಲಿರುವ ಮೊದಲ ರಾಜ್ಯಗಳಲ್ಲಿ ಕರ್ನಾಟಕ ಒಂದಾಗಿದೆ. ಮಧ್ಯಾಹ್ನದ ಬಿಸಿಯೂಟ ನೌಕರರದ್ದೂ ಸಹ ಸಮಸ್ಯೆಗಳಿವೆ. 15 ದಿನಗಳ ಹಿಂದೆ, ಕಳೆದ 3-4 ತಿಂಗಳ (ಜೂನ್-ಆಗಸ್ಟ್) ರೂ.93.46 ಕೋಟಿ ಸಂಭಾವನೆಯನ್ನು ಸರ್ಕಾರ ಬಿಡುಗಡೆ ಮಾಡಿದೆ. ಉಳಿದ ಸಮಸ್ಯೆಗಳಾದ ಕನಿಷ್ಠ ವೇತನ, ಸೇರಿದಂತೆ ಹಲವನ್ನು ಬಗೆ ಹರಿಸುವ ಪ್ರಕ್ರಿಯೆ ಚಾಲ್ತಿಯಲ್ಲಿದೆ ಎಂದು ಸುರೇಶ್‌ ಕುಮಾರ್‌ ತಿಳಿಸಿದರು.ಅರ್ಥಿಕ ಮಿತವ್ಯಯದ ಹಿನ್ನೆಲೆಯಲ್ಲಿ ಅನುದಾನಿತ ಶಾಲಾ ಕಾಲೇಜುಗಳಲ್ಲಿ ನಿವೃತ್ತಿ, ನಿಧನ ಕಾರಣ ಖಾಲಿ ಯಾದ ಹುದ್ದೆಗಳನ್ನು ತುಂಬಲು ಆರ್ಥಿಕ ಇಲಾಖೆ ನಿರ್ಬಂಧ ಹೇರಿದೆ. ಇಷ್ಟರಲ್ಲಿಯೇ ಈ ಮಿತವ್ಯಯವನ್ನು ಸಡಿಲಿಸಲು ಆರ್ಥಿಕ ಇಲಾಖೆಯ ಅಧಿಕಾರಿಗಳೊಂದಿಗೆ ಚರ್ಚಿಸಿ ನೇಮಕಾತಿಯನ್ನು ಮುಂದುವರೆಸಲು ಕ್ರಮ ವಹಿಸಲಾಗುವುದು ಎಂದು ಸಚಿವರು ವಿವರಿಸಿದರು. ಶಿಕ್ಷಕರ ಮತ್ತು ಉಪನ್ಯಾಸಕರ ವೇತನ ಬಡ್ತಿ ವಿಚಾರವಾಗಿ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವರು ವಿವರಿಸಿದರು.

Comments are closed.