
ಬೆಂಗಳೂರು(ಸೆ.07): ಐದುವರೆ ತಿಂಗಳ ಬಳಿಕ ಕೊನೆಗೂ ಮೆಟ್ರೋ ಸಂಚಾರ ಇಂದಿನಿಂದ ಆರಂಭಗೊಂಡಿದೆ. ನೇರಳ ಮಾರ್ಗದಲ್ಲಿ ಆರಂಭಗೊಂಡ ಸಂಚಾರದಲ್ಲಿ ಪ್ರಯಾಣಿಕರ ಕೊರತೆ ಎದ್ದು ಕಾಣುತ್ತಿತ್ತು. ಕೊರೋನಾ ಮುಂಜಾಗ್ರತಾ ಕ್ರಮಗಳ ಹಿನ್ನೆಲೆಯಲ್ಲಿ ಮೆಟ್ರೋ ಸಂಚಾರಕ್ಕೆ ಸಾಕಷ್ಟು ಮಾರ್ಗಸೂಚಿಗಳನ್ನು ಹೊರಡಿಸಿತ್ತು. ಡಿಜಿಟಲ್ ಪೇಮೆಂಟ್ನಲ್ಲಿ ಜನರು ಬರಲು ಹರಸಾಹಸ ಪಡುತ್ತಿದ್ದರು. ಈ ನಡುವೆ ಮೆಟ್ರೋ ಆರಂಭಕ್ಕೂ ಮುನ್ನವೇ ನಿಲ್ದಾಣದಲ್ಲಿ ವಿಘ್ನವೊಂದು ಜರುಗಿತು. ಇಂದಿನಿಂದ ಸಿಲಿಕಾನ್ ಸಿಟಿಯಲ್ಲಿ ಮೆಟ್ರೋ ಸಂಚಾರ ಆರಂಭವಾಗಿದ್ದು, ಬೆಂಗಳೂರು ಯಥಾಸ್ಥಿತಿಗೆ ಮರಳುತ್ತಿದೆ. ಕೊರೋನಾ ಲಾಕ್ಡೌನ್ ಬಳಿಕ ಮೊದಲ ಮೆಟ್ರೋ ಸಂಚಾರ ಇದಾಗಿದ್ದು, ಇವತ್ತು ಕೇವಲ ನೇರಳೆ ಮಾರ್ಗ ಮಾತ್ರ ಶುರುವಾಗಿದೆ.
ಕೊರೋನಾ ಹಿನ್ನಲೆಯಲ್ಲಿ ಸರ್ಕಾರದ ಮಾರ್ಗಸೂಚಿಯಂತೆ ಮೆಟ್ರೋ ಸಂಚರಿಸಿದ್ದು ಪ್ರಯಾಣಿಕರು ಹಲವು ನಿಯಮಗಳ ಜೊತೆ-ಜೊತೆಗೆ ಪ್ರಯಾಣ ಮಾಡಿದ್ರು. ಬಯ್ಯಪ್ಪನಹಳ್ಳಿಯಿಂದ ಮೈಸೂರು ರಸ್ತೆಯವರೆಗೂ ಮೆಟ್ರೋ ಸಂಚರಿಸಿದೆ. ಬೆಳಗ್ಗೆ ಎಂಟರಿಂದ ಹನ್ನೊಂದು ಗಂಟೆಯವರೆಗೆ ಹಾಗೂ ಸಂಜೆ 4.30 ರಿಂದ 7.30 ರವರೆಗೆ ಮೆಟ್ರೋ ಸಂಚರಿಸಿದ್ದು, ಒಟ್ಟು 91 ಟ್ರಿಪ್ ಮುಗಿಸಿದೆ. ಕೊರೋನಾ ಮುಂಚೆ ಹೋಲಿಸಿದಲ್ಲಿ ಪ್ರಯಾಣಿಕರ ಸಂಖ್ಯೆ ಬಹಳ ಕಡಿಮೆಯಿದ್ದು, ಸ್ಮಾರ್ಟ್ ಕಾರ್ಡ್, ಆನ್ಲೈನ್ನಲ್ಲಿ ಟಿಕೆಟ್ ಖರೀದಿಸಬೇಕಾಗಿದೆ.
ಇನ್ನು, ಟೋಕನ್, ಡೈರೆಕ್ಟ್ ಕ್ಯಾಶ್ ಪ್ರಯಾಣಕ್ಕೆ ಅವಕಾಶವಿದ್ದಿದ್ದಿಲ್ಲ. ಇದರಿಂದಾಗಿ ಮೆಟ್ರೋನಲ್ಲಿ ಹೆಚ್ಚಿನ ಪ್ರಯಾಣಿಕರಿಲ್ಲದೆ ಬಿಕೋ ಎನ್ನುತ್ತಿತ್ತು. ಸರ್ಕಾರದ ಗೈಡ್ಲೈನ್ ಪ್ರಕಾರ ಹಣರಹಿತ ವ್ಯವಸ್ಥೆ ಮಾಡಲಾಗಿದ್ದು, ಪ್ರಯಾಣಿಕರು ಸ್ಮಾರ್ಟ್ ಕಾರ್ಡ್ ಬಳಸಿಯೇ ಸಂಚರಿಸಿದ್ದಾರೆ. ಈ ನಡುವೆ ಬೆಳಗ್ಗೆ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ಹೊರ ಆವರಣದಲ್ಲಿ ಓರ್ವ ವ್ಯಕ್ತಿ ಹೃದಯಾಘಾತದಿಂದ ಅಲ್ಲಿಯೇ ಕುಸಿದುಬಿದ್ದು ಸಾವನ್ನಪ್ಪಿದ. ಈ ವಿಷಯ ತಿಳಿದು ಮೆಟ್ರೊ ಸಿಬ್ಬಂದಿ, ಪೊಲೀಸರು ಬಂದರಾದ್ರೂ ಮೃತದೇಹವನ್ನು ಸ್ಥಳಾಂತರಿಸಲು ಹಲವು ಗಂಟೆಗಳೇ ಬೇಕಾಯಿತು.
ಅಲ್ಲಿಯವರೆಗೆ ಮೃತದೇಹ ಅನಾಥವಾಗಿ ಮೆಟ್ರೋ ಆವರಣದಲ್ಲಿ ಬಿದ್ದಿತ್ತು. ಇಂದಿನಿಂದ ಆರಂಭವಾಗಿರುವ ಮೆಟ್ರೋ ಸಂಚಾರಕ್ಕೆ ಹಲವು ನಿಯಮಗಳಿದ್ದು, ಪ್ರಯಾಣಿಕರು ನಿಯಮಗಳ ಪ್ರಕಾರವೇ ಪ್ರಯಾಣ ಆರಂಭಿಸಿದ್ದಾರೆ. ಪ್ರಯಾಣಕ್ಕೆ ಸ್ಮಾರ್ಟ್ ಕಾರ್ಡ್ ಕಡ್ಡಾಯ. ಮಾಸ್ಕ್, ಸ್ಯಾನಿಟೈಸರ್, ಸಾಮಾಜಿಕ ಅಂತರ ಕಾಪಾಡಬೇಕು. ಆರು ಬೋಗಿಗಳ ಒಂದು ರೈಲಿನಲ್ಲಿ ಗರಿಷ್ಠ 400 ಪ್ರಯಾಣಿಕರಿಗೆ ಮಾತ್ರ ಅವಕಾಶ ನೀಡಲಾಗಿತ್ತು.
ಏಕಕಾಲದಲ್ಲಿ 50ಕ್ಕಿಂತ ಹೆಚ್ಚಿನ ಪ್ರಯಾಣಿಕರಿಗೆ ಫ್ಲಾಟ್ ಫಾರಂಗೆ ಎಂಟ್ರಿ ಇಲ್ಲ. ಎಸ್ಕಲೇಟರ್ ಬಳಸುವಾಗ ಮುಂದಿನ ಮೆಟ್ಟಿಲು ಅಂತರ ಬಿಟ್ಟು ನಿಲ್ಲುವುದು ಹಾಗೂ ಲಿಫ್ಟ್ನಲ್ಲಿ 4 ಜನರಿಗೆ ಅವಕಾಶ ಹೀಗೆ ಸಾಕಷ್ಟು ನಿಯಮಗಳ ಪಾಲನೆ ಮಾಡುತ್ತಿದ್ದ ದೃಶ್ಯ ಕಂಡುಬಂದಿತು. ಇಂದು ಬೆಳಗ್ಗಿನ ಅವಧಿಯಲ್ಲಿ 1975 ಪ್ರಯಾಣಿಕರು ಸಂಚರಿಸಿದ್ದು, ಮೊದಲ ದಿನದಲ್ಲಿ 6 ಸಾವಿರಕ್ಕೂ ಅಧಿಕ ಮಂದಿ ಮೆಟ್ರೋದಲ್ಲಿ ಪ್ರಯಾಣ ಮಾಡಿದ್ದಾರೆ.
ಮೊದಲ ದಿನವಾದ ಇಂದು ಪ್ರಯಾಣಿಕರ ಸಂಖ್ಯೆ ತೀರ ವಿರಳವಾಗಿತ್ತು. ಇಂಟರ್ಚೇಂಚ್ ನಿಲ್ದಾಣ ಮೆಜೆಸ್ಟಿಕ್ ಸೇರಿದಂತೆ ಎಲ್ಲಾ ನಿಲ್ದಾಣಗಳು ಕೂಡ ಖಾಲಿ ಖಾಲಿಯಾಗಿದ್ದ ದೃಶ್ಯ ಕಂಡುಬಂದಿತು. ಕೊರೋನಾ ಮುಂಜಾಗ್ರತಾ ಕ್ರಮಗಳ ಹಿನ್ನೆಲೆ ಮೆಟ್ರೋ ಪ್ರಯಾಣ ಚೆನ್ನಾಗಿತ್ತು ಎನ್ನುತ್ತಾರೆ ಪ್ರಯಾಣಿಕರು.
ಮೊದಲ ನಾಲ್ಕು ದಿನ ನೇರಳ ಮಾರ್ಗ, ಬುಧವಾರದಿಂದ ಹಸಿರು ಮಾರ್ಗದಲ್ಲಿ ಮೆಟ್ರೋ ಓಡಲಿದ್ದು, ಸೆಪ್ಟೆಂಬರ್ 11 ನೇ ತಾರಿಕಿನಿಂದ ಎರಡೂ ಮಾರ್ಗದಲ್ಲೂ ಬೆಳಗ್ಗೆ 7 ರಿಂದ ರಾತ್ರಿ 9 ರವರೆಗೂ ಸಂಚಾರ ಆರಂಭವಾಗಲಿದೆ. ಒಟ್ನಲ್ಲಿ ಮೊದಲ ದಿನದ ಮೆಟ್ರೋ ಸಂಚಾರ ಯಶಸ್ವಿಯಾಗಿದೆ, ಆದರೆ ಕಟ್ಟುನಿಟ್ಟಿನ ಕ್ರಮಗಳ ಹಿನ್ನೆಲೆ ಪ್ರಯಾಣಿಕರಿಲ್ಲದೆ ಖಾಲಿಯಾಗಿ ಮೆಟ್ರೋ ಸಂಚಾರ ಆರಂಭಿಸಿದೆ.
Comments are closed.