
ಕೊಡಗು(ಸೆ.06): ಕೊರೋನಾ ಮಹಾಮಾರಿಯನ್ನು ನಿಯಂತ್ರಿಸುವುದಕ್ಕಾಗಿ ದೇಶವನ್ನು ಸರ್ಕಾರ ಲಾಕ್ಡೌನ್ ಮಾಡಿತ್ತು. ಎಲ್ಲಾ ಪ್ರವಾಸಿ ತಾಣಗಳಿಗೆ ಪ್ರವಾಸಿಗರ ಎಂಟ್ರಿಯನ್ನು ನಿರ್ಬಂಧಿಸಿದ್ದರಿಂದ ಪ್ರವಾಸಿ ಸ್ಥಳಗಳು ಸ್ಥಬ್ಧವಾಗಿದ್ದವು. ಐದು ತಿಂಗಳ ಬಳಿಕ ಮತ್ತೆ ಓಪನ್ ಆಗಿದ್ದು, ಪ್ರವಾಸಿಗರಿಗೆ ಮುಕ್ತವಾಗಿವೆ. ಹೀಗಾಗಿ ಕೊಡಗಿನ ಪ್ರವಾಸಿ ತಾಣಗಳತ್ತ ಜನರು ಮುಖ ಮಾಡಿದ್ದಾರೆ. ಕರ್ನಾಟಕದ ಕಾಶ್ಮೀರ, ಭಾರತದ ಸ್ಕಾಟ್‍ಲ್ಯಾಂಡ್ ಎಂದೆಲ್ಲಾ ಕರೆಸಿಕೊಳ್ಳುವ ಕೊಡಗು ಪ್ರಾಕೃತಿಕ ಸೌಂದರ್ಯದಿಂದಲೇ ಪ್ರವಾಸಿಗರನ್ನು ತನ್ನತ್ತ ಸೆಳೆಯುತ್ತದೆ. ಮಾರ್ಚ್ ತಿಂಗಳಲ್ಲಿ ದೇಶಕ್ಕೆ ಎಂಟ್ರಿಕೊಟ್ಟಿದ್ದ ಕೊರೋನಾ ವೈರಸ್ನಿಂದಾಗಿ ದೇಶವೇ ಲಾಕ್ಡೌನ್ ಆಗಿದ್ದು ಗೊತ್ತೇ ಇದೆ. ಜೊತೆಗೆ ಪ್ರವಾಸಿಗರಿಂದಲೇ ಸದಾ ಬ್ಯುಸಿಯಾಗಿರುತ್ತಿದ್ದ ಜಿಲ್ಲೆಯ ಪ್ರವಾಸಿ ತಾಣಗಳು ಬಂದ್ ಆದವು. ಹಂತ ಹಂತವಾಗಿ ಲಾಕ್ ಡೌನ್ ತೆರವು ಮಾಡಿದಂತೆ ಜಿಲ್ಲೆಯ ಪ್ರವಾಸಿ ತಾಣಗಳು ಓಪನ್ ಆಗಿವೆ.
ಇಲ್ಲಿರುವ ಅಬ್ಬಿ ಜಲಪಾತ, ನಿಸರ್ಗಧಾಮ, ರಾಜಾಸೀಟ್ ಸೇರಿದಂತೆ ಹತ್ತಾರು ಪ್ರವಾಸಿತಾಣಗಳು ನೋಡುಗರ ಕಣ್ಮನ ಸೆಳೆಯುತ್ತಿವೆ. ಕೊಡಗಿನಲ್ಲಿ ಇನ್ನೂ ಸಾಧಾರಣ ಮಳೆಯಾಗುತ್ತಿರುವುದರಿಂದ ಅಬ್ಬಿ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದ್ದು, ಪ್ರವಾಸಿಗರನ್ನು ಕೈಬೀಸಿ ಕರೆಯುತ್ತಿದೆ. ಸೋಮವಾರಪೇಟೆ ತಾಲ್ಲೂಕಿನ ಚಿಕ್ಲಿಹೊಳೆ ಜಲಾಶಯ ಕೂಡ ತುಂಬಿ ಹರಿಯುತ್ತಿದ್ದು, ಪ್ರವಾಸಿಗರ ಮನಸೂರೆಗೊಳಿಸುತ್ತಿದೆ. ಮೋಡ ಕವಿದ ವಾತಾವರಣದಿಂದ ಬೆಟ್ಟಗುಡಗಳ ಮೇಲೆ ಮಂಜುಕವಿದು ಪ್ರವಾಸಿತಾಣಗಳು ಜನರನ್ನು ಸೂಜಿಗಲ್ಲಿನಂತೆ ಸೆಳೆಯುತ್ತಿವೆ. ಐದು ತಿಂಗಳಿನಿಂದ ಮನೆಯಲ್ಲೇ ಇದ್ದ ಜನರು ಕೊಡಗಿತ್ತ ಮುಖ ಮಾಡಿದ್ದು, ಎಂಜಾಯ್ ಮಾಡುತ್ತಿದ್ದೇವೆ ಎನ್ನುತ್ತಾರೆ ಪ್ರವಾಸಿ ಪಲ್ಲವಿ.
ಕಳೆದ ಮೂರು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ನಿರಂತರವಾಗಿ ಪ್ರಾಕೃತಿಕ ವಿಕೋಪ ಸಂಭವಿಸುತ್ತಿದ್ದ ಪರಿಣಾಮ ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆ ಇಳಿಮುಖವಾಗಿತ್ತು. ಹೀಗಾಗಿ ಕಳೆದ ವರ್ಷ ವಾರಗಳ ಕಾಲ ಪ್ರವಾಸಿ ಉತ್ಸವ ಮಾಡಿ ಕೊಡಗಿನತ್ತ ಪ್ರವಾಸಿಗರನ್ನು ಸೆಳೆಯಲಾಗಿತ್ತು. ಈ ಬಾರಿ ಪ್ರಾಕೃತಿಕ ವಿಕೋಪದ ಜೊತೆಗೆ ಕೊರೊನಾ ಮಹಾಮಾರಿಯಿಂದಾಗಿ ದೇಶವೇ ಲಾಕ್ ಡೌನ್ ಆಗಿದ್ದರಿಂದ ಪ್ರವಾಸೋದ್ಯಮ ಸಂಪೂರ್ಣ ನಷ್ಟದಲ್ಲಿದೆ. ಹೀಗಾಗಿ ಪ್ರವಾಸಿಗರನ್ನು ಸೆಳೆಯಲು ಈ ಬಾರಿಯೂ ಪ್ರವಾಸಿ ಉತ್ಸವ ಆಚರಿಸಲು ಚಿಂತಿಸಲಾಗುತ್ತಿದೆ. ಅಕ್ಟೋಬರ್ ತಿಂಗಳ ಕೊನೆಯಷ್ಟರಲ್ಲಿ ಕೊರೋನಾ ಕಡಿಮೆಯಾಗುವ ಸಾಧ್ಯತೆ ಇದ್ದು, ಹಾಗಾದಲ್ಲಿ ಈ ವರ್ಷವೂ ಪ್ರವಾಸಿ ಉತ್ಸವ ಆಚರಿಸಿ ಪ್ರವಾಸಿಗರನ್ನು ಸೆಳೆಯಲಾಗುವುದು ಎನ್ನೋದು ಶಾಸಕ ಅಪ್ಪಚ್ಚು ರಂಜನ್ ಅವರ ಅಭಿಪ್ರಾಯ.
ಒಟ್ಟಿನಲ್ಲಿ ಕೊರೋನಾ ಮಹಾಮಾರಿಯಿಂದಾಗಿ ಸ್ಥಬ್ಧವಾಗಿದ್ದ ಕೊಡಗಿನ ಪ್ರವಾಸಿ ತಾಣಗಳು ಮತ್ತೆ ಓಪನ್ ಆಗಿವೆ. ಆದರೆ ನಿರೀಕ್ಷೆಯಷ್ಟು ಪ್ರವಾಸಿಗರು ಆಗಮಿಸಿ ಪ್ರವಾಸಿತಾಣಗಳಿಗೆ ಹಿಂದಿನ ಸಂಭ್ರಮ ಕಳೆಗಟ್ಟುತ್ತಾ ಕಾದು ನೋಡ್ಬೇಕಿದೆ.
Comments are closed.