ಕರ್ನಾಟಕ

ಹಳೇ ಪಾಸ್​ ಗೆ ಕೆಎಸ್​ಆರ್​ಟಿಸಿ ಬಸ್​ನಲ್ಲಿ ಉಚಿತ ಪ್ರಯಾಣ

Pinterest LinkedIn Tumblr


ಬೆಂಗಳೂರು: ಕರೊನಾ ಸಂಕಷ್ಟದ ಸಮಯದಲ್ಲೂ ಕೆಲ ಪರೀಕ್ಷೆಗಳು ನಡೆಯುತ್ತಿವೆ. ಕಳೆದ ಶೈಕ್ಷಣಿಕ ವರ್ಷ ಮುಗಿದಿದ್ದು, ವಿದ್ಯಾರ್ಥಿಗಳ ಬಸ್​ಪಾಸ್​ ಅವಧಿ ಮುಗಿದಿದೆ. ಇದೀಗ ಪರೀಕ್ಷೆ ಆರಂಭವಾದರೆ ಮತ್ತೆ ಬಸ್​ಪಾಸ್​ ಮಾಡಿಸಿಕೊಳ್ಳಬೇಕೆ? ಅಥವಾ ಹಣ ಕೊಟ್ಟು ನಿತ್ಯ ಟಿಕೆಟ್​ ಪಡೆದು ಕಾಲೇಜಿಗೆ ಹೋಗಬೇಕೇ? ಎಂಬ ಗೊಂದಲ ಬಹುತೇಕ ವಿದ್ಯಾರ್ಥಿಗಳಲ್ಲಿತ್ತು. ಇದೀಗ ಈ ಗೊಂದಲಕ್ಕೆ ಕೆಎಸ್​ಆರ್​ಟಿಸಿ ತೆರೆ ಎಳೆದಿದೆ.

ವೃತ್ತಿಪರ, ಪದವಿ, ಸ್ನಾತಕೋತ್ತರ ಪರೀಕ್ಷೆ ಬರೆಯುವವರಿಗೆ ಕಳೆದ ಶೈಕ್ಷಣಿಕ ಸಾಲಿನ ಬಸ್​ ಪಾಸ್​ ತೋರಿಸಿ ಉಚಿತ ಪ್ರಯಾಣಕ್ಕೆ ಕೆಎಸ್​ಆರ್​ಟಿಸಿ ಅವಕಾಶ ಕಲ್ಪಿಸಿದೆ.

ರಾಜ್ಯಸಭಾ ಸದಸ್ಯ ಜಿ.ಸಿ.ಚಂದ್ರಶೇಖರ್​, ಈ ಸಂಬಂಧ ಸಾರಿಗೆ ಸಚಿವರಿಗೆ ಪತ್ರ ಬರೆದು, ಸೆಪ್ಟೆಂಬರ್​ನಲ್ಲಿ ರಾಜ್ಯದ ಕಾನೂನು ವಿಶ್ವವಿದ್ಯಾಲಯ, ತಾಂತ್ರಿಕ ವಿಶ್ವವಿದ್ಯಾಲಯ, ವೃತ್ತಿಪರ ಹಾಗೂ ಸ್ನಾತಕೋತ್ತರ ಪರೀಕ್ಷೆಗಳು ನಡೆಯಲಿವೆ. ಕರೊನಾ ಸೋಂಕಿನ ಹಿನ್ನೆಲೆಯಲ್ಲಿ ಪ್ರಸಕ್ತ ಶೈಕ್ಷಣಿಕ ಸಾಲಿನ ವಿದ್ಯಾರ್ಥಿಗಳಿಗೆ ಸಾರಿಗೆ ನಿಗಮಗಳಿಂದ ಬಸ್​ ಪಾಸ್​ ವಿತರಿಸಿಲ್ಲ. ಹೀಗಾಗಿ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲು ಅನುಕೂಲವಾಗುವಂತೆ ಸೆಪ್ಟೆಂಬರ್​ ತಿಂಗಳಲ್ಲಿ ರಾಜ್ಯದ ಎಲ್ಲ ಜಿಲ್ಲಾ ಹಾಗೂ ನಗರ ಸಾರಿಗೆಗಳಲ್ಲಿ ಉಚಿತ ಪ್ರಯಾಣಕ್ಕೆ ಅವಕಾಶ ನೀಡುವಂತೆ ಮನವಿ ಮಾಡಿದ್ದರು.

ಈ ಮನವಿಯನ್ನಾಧರಿಸಿ ಉಪಮುಖ್ಯಮಂತ್ರಿಯೂ ಆದ ಸಾರಿಗೆ ಸಚಿವ ಲಕ್ಷ್ಮಣ್​ ಸವದಿ ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳು ಕಳೆದ ವರ್ಷದ ಬಸ್​ ಪಾಸ್​ ತೋರಿಸಿ, ಉಚಿತವಾಗಿ ಪ್ರಯಾಣಿಸಲು ಅವಕಾಶ ನೀಡುವಂತೆ ಅಧಿಕಾರಿಗಳಿಗೆ ಸೂಚಿಸಿದ್ದರು. ಇದೀಗ ಕೆಎಸ್​ಆರ್​ಟಿಸಿ, ಕಳೆದ ವರ್ಷದ ಬಸ್​ಪಾಸ್​ ಮೂಲಕ ಉಚಿತ ಪ್ರಯಾಣಿಸಬಹುದು ಎಂದು ಆದೇಶ ಹೊರಡಿಸಿದೆ.

ಕರೊನಾ ಸೋಂಕಿನ ಛಾಯೆ ರಾಜ್ಯ ಸಾರಿಗೆ ಸಂಸ್ಥೆಗೂ ಆರ್ಥಿಕ ಸಂಕಷ್ಟ ತಂದೊಡ್ಡಿದೆ. ಹೀಗಾಗಿ ನಾಲ್ಕು ನಿಗಮಗಳೂ ನಷ್ಟದಲ್ಲಿದೆ. ಅಲ್ಲದೆ ಈ ಬಾರಿ ವಿದ್ಯಾರ್ಥಿಗಳಿಗೆ ಉಚಿತ ಅಥವಾ ರಿಯಾಯಿತಿ ಬಸ್​ಪಾಸ್​ಗಳನ್ನು ವಿತರಿಸಿದಲ್ಲಿ ಅದರ ಮೊತ್ತವನ್ನು ವಿದ್ಯಾರ್ಥಿ ಅಥವಾ ಸಂಸ್ಥೆಯಿಂದಲೇ ಭರಿಸತಕ್ಕದ್ದು ಎಂದು ಸರ್ಕಾರ ಆದೇಶಿಸಿದೆ. ಇಂತಹ ಸಂದರ್ಭದಲ್ಲಿ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೆ ಉಚಿತ ಪ್ರಯಾಣಕ್ಕೆ ಅಸ್ತು ಎಂದ ಕೆಎಸ್​ಆರ್​ಟಿಸಿ ನಿರ್ಧಾರವನ್ನು ಪರೀಕ್ಷಾರ್ಥಿಗಳು ಸ್ವಾಗತಿಸಿದ್ದಾರೆ.

Comments are closed.