ಹಾಸನ: ಜೋಡಿ ಕೊಲೆ ಆರೋಪಿಯನ್ನು ಬಂಧಿಸಲು ಹೋದ ವೇಳೆ ಪೊಲೀಸರು ಫೈರಿಂಗ್ ನಡೆಸಿದ ಘಟನೆ ಚನ್ನರಾಯಪಟ್ಟಣ ತಾಲೂಕು ಜೋಡಿಗಟ್ಟೆ ಬಳಿ ನಡೆದಿದೆ. ಮಂಗಳವಾರ ಮುಂಜಾನೆ ಕೋಳಿ ಫಾರಂ ನಲ್ಲಿ ಅಡಗಿ ಕುಳಿತಿದ್ದ ಪ್ರಸಾದ್ ಅಲಿಯಾಸ್ ಗುಂಡ ಎಂಬ ಆರೋಪಿಯನ್ನು ಬಂಧಿಸುವ ವೇಳೆ ಈ ಘಟನೆ ನಡೆದಿದೆ.
ಆಲಗೊಂಡನಹಳ್ಳಿಯಲ್ಲಿ ಹಣಕ್ಕಾಗಿ ವೃದ್ಧ ದಂಪತಿಗಳನ್ನ ಕೊಲೆ ಮಾಡಿದ್ದ ಆರೋಪದ ಮೇಲೆ ಪ್ರಸಾದ್ ಎನ್ನುವಾತನನ್ನು ಪೊಲೀಸರು ಬಂಧಿಸಲು ತೆರಳಿದ್ದರು. ಈ ವೇಳೆ ಶರಣಾಗುವಂತೆ ಮನವಿ ಮಾಡಿದರೂ ಬಗ್ಗದ ಆರೋಪಿ ಪ್ರಸಾದ್. ಬಂಧಿಸಲು ಮುಂದಾದ ಡಿಸಿಐಬಿ ಇನ್ಸ್ ಪೆಕ್ಟರ್ ವಿನಯ್ ಮೇಲೆ ಚಾಕುವಿನಿಂದ ಹಲ್ಲೆಗೆ ಯತ್ನಿಸಿದ್ದಾನೆ. ಘಟನೆಯಲ್ಲಿ ಇನ್ಸ್ ಪೆಕ್ಟರ್ ಎಡಗೈಗೆ ಗಾಯವಾಗಿದ್ದು, ರಕ್ಷಣೆಗಾಗಿ ವಿನಯ್ ಜೊತೆ ಇದ್ದ ಇನ್ಸ್ ಪೆಕ್ಟರ್ ಸಿದ್ದರಾಮೇಶ್ವರ್ ಅವರು ಫೈರಿಂಗ್ ಮಾಡಿದ್ದು ಆರೋಪಿ ಪ್ರಸಾದ್ ಮಂಡಿ ಭಾಗಕ್ಕೆ ಗುಂಡು ತಗುಲಿದೆ. ಈತನನ್ನು ಹಾಸನದ ಹಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಇನ್ಸ್ಪೆಕ್ಟರ್ ವಿನಯ್ ಕೂಡ ಚಿಕಿತ್ಸೆಗಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಆಲಗೊಂಡನಹಳ್ಳಿ ಜೋಡಿ ಕೊಲೆ ಆರೋಪದ ಮೇಲೆ ಇನ್ನೂ ಮೂವರು ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರೆದಿದೆ.
Comments are closed.