ಕರ್ನಾಟಕ

ಬೆಂಗಳೂರು ಏರ್‌ಪೋರ್ಟ್‌ನಲ್ಲಿ ಸ್ಪರ್ಶರಹಿತ ಮಾಹಿತಿ ಡೆಸ್ಕ್ ಆರಂಭ..!

Pinterest LinkedIn Tumblr


ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಕೊರೊನಾ ವೈರಸ್ ಹರಡದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡು ಪ್ರಯಾಣಿಕರಿಗೆ ಮಾಹಿತಿ ನೀಡುವ ಉದ್ದೇಶದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇನ್‌ಫರ್ಮೇಷನ್‌ ಡೆಸ್ಕ್ ಇದೀಗ‌ಸ್ಪರ್ಶರಹಿತವಾಗಿ ಪರಿವರ್ತಿತವಾಗುತ್ತಿದೆ.

ಟರ್ಮಿನಲ್‌ನಲ್ಲಿನ ನಾಲ್ಕು ಸ್ಥಳಗಳಲ್ಲಿ ಲಭ್ಯವಾಗಲಿರುವ ಈ ವರ್ಚುವಲ್‌ ಡೆಸ್ಕ್‌ಗಳು, ಸಂಪರ್ಕ ರಹಿತ ಪ್ರಯಾಣಿಕರ ಸಂಸ್ಕರಣಾ ಪ್ರಕ್ರಿಯೆಗೆ ನೂತನ ಆಯಾಮ ನೀಡಲಿದೆ ಎಂದು ಬಿಐಎಎಲ್‌ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಂಸ್ಥೆಯು ಮಾನವ ಸಂಪರ್ಕ ಇಲ್ಲದಂತಹ ಹಾಗೂ ಸುರಕ್ಷಿತವಾಗಿ ಸಹಾಯ ಮತ್ತು ಮಾಹಿತಿಗಳನ್ನು ಪ್ರಯಾಣಿಕರು ಪಡೆದುಕೊಳ್ಳಬಹುದಾದಂತಹ ಹಾಗೂ ಸ್ಪರ್ಶರಹಿತವಾದ ಸೇವೆ ನೀಡುವ ವರ್ಚುವಲ್‌ ಇನ್‌ಫರ್ಮೇಷನ್‌ ಡೆಸ್ಕ್‌ ಅನ್ನು ಪರಿಚಯಿಸಿದೆ.

ಸ್ಪರ್ಶರಹಿತವಾಗಿ ವಿಡಿಯೋ ಮೂಲಕ ದೂರದಲ್ಲಿರುವ ವಿಮಾನ ನಿಲ್ದಾಣ ಸಿಬ್ಬಂದಿಯೊಂದಿಗೆ ತತ್‌ಕ್ಷಣ ಸಂಭಾಷಣೆ ನಡೆಸಲು ಪ್ರಯಾಣಿಕರಿಗೆ ವರ್ಚುವಲ್‌ ಇನ್‌ಫಾರ್ಮೇಷನ್‌ ಡೆಸ್ಕ್‌ ಅವಕಾಶ ಮಾಡಿಕೊಡಲಿದೆ. ಪ್ರಯಾಣಿಕರು ವರ್ಚುವಲ್‌ ಡೆಸ್ಕ್‌ ಮುಂದೆ ಹೋಗಿ ನಿಂತ ಕೂಡಲೇ ಅಲ್ಲಿನ ಸೆನ್ಸರ್‌ಗಳಿಗೆ ಚಾಲನೆ ಲಭಿಸುತ್ತದೆಯಲ್ಲದೆ, ಪರಸ್ಪರ ಸಂವಾದ ಆರಂಭವಾಗುತ್ತದೆ.

ಪ್ರಯಾಣಿಕರು ಹಗಲು ಮತ್ತು ರಾತ್ರಿಯಲ್ಲಿ ಈ ಸೌಲಭ್ಯವನ್ನು ಪಡೆದುಕೊಳ್ಳಬಹುದಾಗಿರುತ್ತದೆ. ಬೆಂಗಳೂರು ವಿಮಾನ ನಿಲ್ದಾಣ, ಸೌಲಭ್ಯಗಳು, ವಿಮಾನ ಹಾರಾಟಗಳು, ಆಹಾರ ಮತ್ತು ಪೇಯಗಳು, ಸಾರಿಗೆ ಕುರಿತ ಮಾಹಿತಿಯನ್ನು ಈ ಮೂಲಕ ಪ್ರಯಾಣಿಕರು ಪಡೆದುಕೊಳ್ಳಬಹುದು ಎಂದು ತಿಳಿಸಲಾಗಿದೆ.

ಈ ಸೇವೆ ಪ್ರಸ್ತುತ ಇಂಗ್ಲಿಷ್‌, ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಲಭ್ಯವಿರುತ್ತದೆ. ಬೆಂಗಳೂರು ವಿಮಾನ ನಿಲ್ದಾಣದ ಟರ್ಮಿನಲ್‌ನಲ್ಲಿರುವ ಸಿಬ್ಬಂದಿಗೆ ಈ ವರ್ಚುವಲ್‌ ವೇದಿಕೆ ಮೂಲಕ ಎಲ್ಲಾ ಮೂರು ಭಾಷೆಗಳಲ್ಲಿ ಪ್ರಯಾಣಿಕರ ಪ್ರಶ್ನೆಗಳಿಗೆ ಉತ್ತರ ನೀಡಿ ನಿಭಾಯಿಸುವುದಕ್ಕಾಗಿ ತರಬೇತಿ ನೀಡಲಾಗಿರುತ್ತದೆ.

ಬಿ.ಐ.ಎ.ಎಲ್‌. ಮತ್ತು ವಿಮಾನಯಾನ ಸಂಸ್ಥೆಗಳ ಸಿಬ್ಬಂದಿ ಕೂಡ ಟರ್ಮಿನಲ್‌ನಲ್ಲಿ ಲಭ್ಯವಿದ್ದು, ಪ್ರಯಾಣಿಕರಿಗೆ ಅಗತ್ಯವಾದ ರೀತಿಯಲ್ಲಿ ಸಹಾಯ ಮತ್ತು ಮಾಹಿತಿಯನ್ನು ಪೂರೈಸುತ್ತಾರೆ.

Comments are closed.