ಕರ್ನಾಟಕ

ಕೋಲಾರ: ಜನಸಂಚಾರವಿದ್ದ ರಸ್ತೆಯಲ್ಲೇ ಯುವತಿಯ ಅಪಹರಣ

Pinterest LinkedIn Tumblr


ಕೋಲಾರ(ಆ. 13): ಹಾಡಹಗಲೇ ಯುವತಿ ಹಾಗು ಅವರ ತಂಗಿ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೇಳೆ, ದುಷ್ಕರ್ಮಿಗಳು ಇನ್ನೋವಾ ಕಾರಲ್ಲಿ ಬಂದು ಅಪಹರಣ ಮಾಡಿರುವ ಸಿನಿಮೀಯ ಘಟನೆ ಕೋಲಾರ ನಗರದ ಎಂಬಿ ರಸ್ತೆಯಲ್ಲಿ ಗುರುವಾರ ಬೆಳಗ್ಗೆ‌‌ ಸುಮಾರು 11.45 ರ ವೇಳೆಗೆ ನಡೆದಿದೆ. ನಗರದ ಕಿಲ್ಲಾರಿಪೇಟೆ ಬಡಾವಣೆಯ 23 ವರ್ಷದ ಯುವತಿಯನ್ನ ನಗರದ ನಿವಾಸಿ ಶಿವು ಹಾಗು ಅವರ ಸ್ನೇಹಿತರು ಇನ್ನೋವಾ ಕಾರಲ್ಲಿ ಕಿಡ್ನಾಪ್ ಮಾಡಿರುವುದಾಗಿ ಪೋಷಕರು ಕೋಲಾರದ ಗಲ್ ಪೇಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಯುವತಿ ಹಾಗು ತಂಗಿ ರಸ್ತೆಯಲ್ಲಿ ನಡೆದು ಮನೆಗೆ ವಾಪಾಸ್ ಆಗುತ್ತಿದ್ದ ವೇಳೆ, ಇನ್ನೋವಾ ಕಾರಲ್ಲಿ ಎದುರಿಗೆ ಬಂದ ದುಷ್ಕರ್ಮಿಗಳು ಸ್ವಲ್ಪ ದೂರಕ್ಕೆ ಕಾರು ನಿಲ್ಲಿಸಿ ಯುವತಿಯನ್ನ ಎಳೆದೊಯ್ದಿರುವ ದೃಶ್ಯಗಳು ಪಕ್ಕದ ಎಲೆಕ್ಟ್ರಾನಿಕ್ ಮಳಿಗೆಯೊಂದರ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಯುವತಿಯ ತಂಗಿ ಬಿಡಿಸಲು ಹೋದಾಗ ಬಲವಾಗಿ ತಳ್ಳಿ, ಕ್ಷಣ ಮಾತ್ರದಲ್ಲಿ ಸ್ಥಳದಿಂದ ಪರಾರಿಯಾಗಿದ್ದಾರೆ. ಅಪಹರಣ ಮಾಡಿದಾಗ ಕಾರಲ್ಲಿ ನಾಲ್ವರು ಇದ್ದರು ಎನ್ನಲಾಗಿದ್ದು, ಶಿವು ಹಾಗು ಅವರ ಸ್ನೇಹಿತರು ಕೃತ್ಯದಲ್ಲಿ ಭಾಗಯಾಗಿರುವ ಆರೋಪವಿದೆ.

ಮದುವೆ ಪ್ರಸ್ತಾಪವನ್ನು ನಿರಾಕರಿಸಿದ್ದಕ್ಕೆ ಕಿಡ್ನಾಪ್ ಶಂಕೆ:
ಹಾಡಹಗಲೇ ಯುವತಿಯನ್ನ ಕಾರಲ್ಲಿ ಕಿಡ್ನಾಪ್ ಮಾಡಿದ್ದಕ್ಕೆ ನಗರದ ಜನರನ್ನು ಬೆಚ್ಚಿ ಬೀಳುವಂತೆ ಮಾಡಿದೆ. ಇನ್ನು ಯುವತಿಯನ್ನ ಕಿಡ್ನಾಪ್ ಮಾಡಿದನೆನ್ನಲಾದ ಆರೋಪಿ ಶಿವು, ನಗರದ ಮೊಬೈಲ್ ಶಾಪ್ ಒಂದರಲ್ಲಿ ಮೆಕ್ಯಾನಿಕ್ ಆಗಿ ಕೆಲಸ ಮಾಡುತ್ತಿದ್ದಾನೆ. ಯುವತಿಯು ಬಿಎಸ್ಸಿ ಓದುತ್ತಿದ್ದು ಪರಸ್ಪರ ಒಬ್ಬರಿಗೊಬ್ಬರು ಪರಿಚಯವೂ ಇದೆ. ಪರಿಚಯ ಪ್ರೀತಿಗೆ ತಿರುಗಿದ್ದು, ಮದುವೆ ಮಾಡಿಕೊಳ್ಳುವ ಪ್ರಸ್ತಾಪ ಬಂದಾಗ ಯುವತಿ ತನ್ನ ಪೋಷಕರ ಒಪ್ಪಿಗೆ ಬೇಕಿದೆ ಎಂದಿದ್ದಾರೆ. ಇಬ್ಬರ ಪ್ರೀತಿಗೆ ಪೋಷಕರು ವಿರೋಧ ಮಾಡಿದ್ದಾರೆ. ಇದರಿಂದ ಕೆರಳಿರುವ ಭಗ್ನ ಪ್ರೇಮಿ ಶಿವು, ಕಿಡ್ನಾಪ್​ನಂತಹ ದುಷ್ಕೃತ್ಯಕ್ಕೆ ಕೈ ಹಾಕಿದ್ದಿರಬಹುದು ಎಂದು ಶಂಕಿಸಲಾಗಿದೆ.

ಗಲ್​ಪೇಟೆ ಪೊಲೀಸ್ ಠಾಣೆ, ಕೋಲಾರ
ಈ ಸಂಬಂದ ಯುವತಿಯ ಪೋಷಕರು, ಸಂಬಂಧಿಕರು, ಮಾಧ್ಯಮಗಳ ಜೊತೆಗೆ ಮಾತನಾಡಲು ನಿರಾಕರಿಸಿದ್ದಾರೆ. ಘಟನೆ ಸಂಬಂದ ಗಲ್ ಪೇಟೆ ಪೊಲೀಸ್ ಠಾಣೆಯಲ್ಲಿ ಕಿಡ್ನಾಪ್ ಕೇಸ್ ದಾಖಲಿಸಿರುವ ಪೋಷಕರು, ಮಗಳನ್ನ ಹುಡುಕಿ ಕೊಡುವಂತೆ ಮನವಿ ಮಾಡಿದ್ದಾರೆ. ಸ್ಥಳಕ್ಕೆ ಹೆಚ್ಚುವರಿ ಎಸ್ಪಿ ಜಾಹ್ನವಿ ಹಾಗು ಗಲ್ ಪೇಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದ್ದಾರೆ. ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Comments are closed.