ಕರ್ನಾಟಕ

ಬೆಂಗಳೂರು ಗಲಭೆಯ ನಿಯಂತ್ರಣಕ್ಕೆ ತಾರದ ಪೋಲೀಸರ ವಿರುದ್ಧ ಮುಖ್ಯಮಂತ್ರಿ ಗರಂ; ಕಮಿಷನರ್​ಗೆ ಸಿಎಂ ಯಡಿಯೂರಪ್ಪ ತರಾಟೆ

Pinterest LinkedIn Tumblr

ಬೆಂಗಳೂರು: ಬೆಂಗಳೂರಿನ ಡಿ.ಜೆ. ಹಳ್ಳಿ ಮತ್ತು ಕೆ.ಜಿ ಹಳ್ಳಿ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಮಂಗಳವಾರ ರಾತ್ರಿ ನಡೆದ ಗಲಭೆ ಕುರಿತು ಸಿಎಂ ಬಿ.ಎಸ್. ಯಡಿಯೂರಪ್ಪ ಬೆಂಗಳೂರು ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಂದ ವರದಿ ತರಿಸಿಕೊಂಡಿದ್ದಾರೆ. ಇಷ್ಟೆಲ್ಲ ಅನಾಹುತಗಳಾದರೂ ಯಾಕೆ ಪರಿಸ್ಥಿತಿಯನ್ನು ಬೇಗ ನಿಯಂತ್ರಣಕ್ಕೆ ತರಲಿಲ್ಲ ಎಂದು ತರಾಟೆ ತೆಗೆದುಕೊಂಡಿರುವ ಮುಖ್ಯಮಂತ್ರಿ ಯಡಿಯೂರಪ್ಪ ಆದಷ್ಟು ಬೇಗ ಆರೋಪಿಗಳನ್ನು ಪತ್ತೆಹಚ್ಚಿ, ಕಾನೂನು ಕ್ರಮ ಕೈಗೊಳ್ಳಿ ಎಂದು ಖಡಕ್ ಸೂಚನೆ ನೀಡಿದ್ದಾರೆ.

ನಿನ್ನೆ ರಾತ್ರಿ ಕೆ.ಜಿ. ಹಳ್ಳಿ, ಡಿ.ಜೆ. ಹಳ್ಳಿ ಪೊಲೀಸ್ ಠಾಣೆಗಳು ಹಾಗೂ ಕಾವಲ್​ಭೈರಸಂದ್ರದಲ್ಲಿರುವ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಗೆ ಪ್ರತಿಭಟನಾಕಾರರ ಗುಂಪು ಬೆಂಕಿ ಹಚ್ಚಿ, ಗಲಭೆಯೆಬ್ಬಿಸಿತ್ತು. ಅಖಂಡ ಶ್ರೀನಿವಾಸ್ ಮೂರ್ತಿ ಅವರ ಸಂಬಂಧಿ ಸಾಮಾಜಿಕ ಜಾಲತಾಣದಲ್ಲಿ ಕೋಮುಪ್ರಚೋದಿತ ಪೋಸ್ಟ್ ಹಾಕಿದ್ದರು ಎಂಬ ಕಾರಣಕ್ಕೆ ಅವರನ್ನು ಬಂಧಿಸುವಂತೆ ಪಟ್ಟು ಹಿಡಿದಿದ್ದ ಗುಂಪು ಪೊಲೀಸ್ ಠಾಣೆಯ ಎದುರು ಜಮಾಯಿಸಿತ್ತು. ಬಳಿಕ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ ಜನರು ಕಲ್ಲು ತೂರಾಟ ನಡೆಸಿ, ಠಾಣೆಗೆ ಬೆಂಕಿ ಹಚ್ಚಿತ್ತು.

ಈ ಬಗ್ಗೆ ಇಂದು ಬೆಳಗ್ಗೆ ಪೊಲೀಸ್ ಆಯುಕ್ತ ಕಮಲ್ ಪಂತ್ ಅವರಿಂದ ವರದಿ ತರಿಸಿಕೊಂಡ ಸಿಎಂ, ಗಲಭೆಗೆ ಕಾರಣ, ಗಲಭೆ ನಡೆಸಿದವರು, ಕೈಗೊಂಡ ಭದ್ರತೆ, ಕಾನೂನು ಸುವ್ಯವಸ್ಥೆ ಬಗ್ಗೆ ವರದಿ ಪಡೆದಿದ್ದಾರೆ. ಪೊಲೀಸರು ತಕ್ಷಣ ಗಲಭೆ ನಿಯಂತ್ರಣ ಮಾಡದ ಹಿನ್ನೆಲೆ ಪೊಲೀಸ್ ಇಲಾಖೆ ಮೇಲೆ ಗರಂ ಆಗಿರುವ ಸಿಎಂ ಯಡಿಯೂರಪ್ಪ, ಗಲಭೆ ತುಂಬಾ ಹೊತ್ತು ನಡೆಯಲು ಬಿಟ್ಟು ನೀವೆಲ್ಲ ಏನು ಮಾಡುತ್ತಿದ್ದಿರಿ? ಎಂದು ತರಾಟೆ ತೆಗೆದುಕೊಂಡಿದ್ದಾರೆ. ಸಾರ್ವಜನಿಕರ ವಾಹನಗಳು, ಮನೆಗಳಿಗೆ ಸಾಕಷ್ಟು ಹಾನಿಯಾಗಿದೆ. ಕಿಡಿಗೇಡಿಗಳ ದಾಂಧಲೆಯನ್ನು ಆರಂಭದಲ್ಲೇ ಯಾಕೆ ತಡೆಯಲಿಲ್ಲ? ಎಂದು ಪ್ರಶ್ನಿಸಿದ್ದಾರೆ.

ಇದು ಪೂರ್ವ ನಿಯೋಜಿತ ಕೃತ್ಯವಾದರೂ ಮೊದಲೇ ಯಾಕೆ ಪೊಲೀಸ್ ಇಲಾಖೆಗೆ ಗೊತ್ತಾಗಲಿಲ್ಲ? ಎಂದು ಸಿಎಂ ಯಡಿಯೂರಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕಿಡಿಗೇಡಿಗಳನ್ನು ಆದಷ್ಟು ಬೇಗ ಪತ್ತೆ ಮಾಡಿ ಮತ್ತು ಕಾನೂನು ಕ್ರಮ ತೆಗೆದುಕೊಳ್ಳುವಂತೆ ಸಿಎಂ ಸೂಚನೆ ನೀಡಿದ್ದಾರೆ. ಈ ಘಟನೆಯ ಕುರಿತು ಗೃಹ ಸಚಿವ ಬಸವರಾಜ ಬೊಮ್ಮಾಯಿ ಕೂಡ ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕಟ್ಟುನಿಟ್ಟಿನ ಆದೇಶ ನೀಡಿದ್ದಾರೆ.

ಡಿಜೆ ಹಳ್ಳಿ ಗಲಭೆ ಸಂಬಂಧ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ತನಿಖೆ ನಡೆಸಲು ಇಬ್ಬರು ಹೆಚ್ಚುವರಿ‌ ಪೊಲೀಸ್ ಆಯುಕ್ತರು, ಓರ್ವ ಡಿಸಿಪಿ ನೇತೃತ್ವದಲ್ಲಿ ಸಭೆ ನಡೆಸಲಾಗಿದೆ. ಹೆಚ್ಚುವರಿ ಪೊಲೀಸ್ ಆಯುಕ್ತರುಗಳಾದ ಸೌಮೇಂದು ಮುಖರ್ಜಿ, ಹೇಮಂತ್ ನಿಂಬಾಳ್ಕರ್, ಡಿಸಿಪಿ ರಾಹುಲ್ ಶಾಪುರವಾಡ್ ಸಭೆ ನಡೆಸಿದ್ದಾರೆ. ಪ್ರಕರಣದ ಹಿಂದೆ ಯಾವ ಸಂಘಟನೆ, ಯಾರ ಕೈವಾಡ ಇದೆ ಎಂಬುದರ ಬಗ್ಗೆ ತನಿಖೆ ನಡೆಸಲಾಗುವುದು. ಈ‌ ಹಿಂದೆ ಪೂರ್ವ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿದ್ದ ಹೇಮಂತ್ ‌ನಿಂಬಾಳ್ಕರ್ ಹಾಗೂ ಪೂರ್ವ ವಿಭಾಗ ಡಿಸಿಪಿಯಾಗಿದ್ದ ರಾಹುಲ್ ಅವರು ಕಿಡಿಗೇಡಿಗಳು, ಕೆಲವು ರೌಡಿ ಆಸಾಮಿಗಳು ಘಟನೆಯಲ್ಲಿ ಭಾಗಿಯಾಗಿರೋ ಬಗ್ಗೆ ತನಿಖೆ ನಡೆಸಲಿದ್ದಾರೆ. ಹಳೇ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿಗಳ ಪಟ್ಟಿ ಮಾಡಿ ಆರೋಪಿಗಳನ್ನು ಪತ್ತೆಹಚ್ಚಲಿದ್ದಾರೆ.

Comments are closed.