ಕರ್ನಾಟಕ

ಚಿಕ್ಕಮಗಳೂರಿನಲ್ಲಿ ಧಾರಾಕಾರ ಮಳೆ; ಕಳಸ- ಹೊರನಾಡು ಸಂಪರ್ಕ ಬಂದ್

Pinterest LinkedIn Tumblr


ಚಿಕ್ಕಮಗಳೂರು (ಆ. 8): ಮಲೆನಾಡಲ್ಲಿ ಮಳೆಯ ಆರ್ಭಟ ಮುಂದುವರೆದಿದ್ದು, ಚಿಕ್ಕಮಗಳೂರಿನಲ್ಲಿ ತುಂಗಾ, ಭದ್ರಾ, ಹೇಮಾವತಿ ನದಿಗಳು ಉಕ್ಕಿ ಹರಿಯುತ್ತಿವೆ. ಇದರಿಂದ ಮಲೆನಾಡಿಗರ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ನಾಲ್ಕು ದಿನದ ಮಳೆಗೆ ಸುಸ್ತಾಗಿರುವ ಮಲೆನಾಡಿಗರು ಪ್ರವಾಹದ ಭೀತಿಯಲ್ಲಿದ್ದಾರೆ. ನಿನ್ನೆ ರಾತ್ರಿಯೂ ಚಿಕ್ಕಮಗಳೂರಿನಲ್ಲಿ ಎಡಬಿಡದೆ ಮಳೆ ಸುರಿದಿದೆ. ಹಲವು ಕಡೆ ರಸ್ತೆಗಳಿಗೆ ನದಿ ನೀರು ನುಗ್ಗಿದೆ.

ಭದ್ರಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ. ರಾತ್ರಿಯಿಡೀ ಸುರಿದ ಮಳೆಗೆ ಜನ ಹೈರಾಣಾಗಿದ್ದಾರೆ. ಈಗಾಗಲೇ ಮಲೆನಾಡಿನ ಹಲವು ಕಡೆ ರಸ್ತೆ ಸಂಪರ್ಕ ಕಡಿತಗೊಂಡಿದೆ. ಮಲೆನಾಡಿನ ಬಹುತೇಕ ಗ್ರಾಮಗಳಲ್ಲಿ ನಾಲ್ಕು ದಿನದಿಂದ ವಿದ್ಯುತ್ ವ್ಯತಯವಾಗಿದೆ. ಮಲೆನಾಡಿಗರು ಭಯದಲ್ಲಿ ಬದುಕುತ್ತಿದ್ದಾರೆ. 3 ದಿನಗಳಿಂದ ಮಳೆ ಪ್ರಮಾಣ ಹೆಚ್ಚಾಗಿರುವುದರಿಂದ ನಿನ್ನೆ ತುಂಗಾ ನದಿ ನೀರು ಉಕ್ಕಿ ಶೃಂಗೇರಿ ಪಟ್ಟಣದ ಮನೆಗಳಿಗೂ ನುಗ್ಗಿತ್ತು. ಚಾರ್ಮಾಡಿ, ಶೃಂಗೇರಿ- ಮಂಗಳೂರು ಹೆದ್ದಾರಿಗಳು ಬಂದ್ ಆಗಿದ್ದವು.

ನಿನ್ನೆ ರಾತ್ರಿಯಿಡೀ ಸುರಿದ ಮಳೆ ಕೊಪ್ಪ ತಾಲೂಕಿನ ಗಾಳಿಗಂಡಿ ಗ್ರಾಮದಲ್ಲಿ ಭೂಕುಸಿತವಾಗಿದೆ. ಮನೆಯ ಒಂದು ಬದಿಗೆ ಧರೆ ಕುಸಿತದ ಮಣ್ಣು ಅಪ್ಪಳಿಸಿದೆ. ಇದರಿಂದ ಮನೆಯ ಒಂದು ಭಾಗ ಸಂಪೂರ್ಣ ಜಖಂ ಆಗಿದೆ. ರವೀಂದ್ರ ಎಂಬುವವರ ಮನೆಯೊಳಗೆ ಕೆಸರು ನೀರು ನುಗ್ಗಿದೆ. ಏಕಾಏಕಿ ನೀರು ನುಗ್ಗಿದ್ದನ್ನು ಕಂಡು ಮನೆಯವರು ಕಂಗಾಲಾಗಿದ್ದಾರೆ. ಮನೆ ಮೇಲೆ ಬೃಹದಾಕಾರದ ಮರ, ಮಣ್ಣು ಬಿದ್ದ ಪರಿಣಾಮ ಈ ಘಟನೆ ನಡೆದಿದೆ.

ಚಿಕ್ಕಮಗಳೂರಿನಲ್ಲಿ ಕಳೆದ 4 ದಿನಗಳಿಂದ ಎಡೆಬಿಡದೆ ಸುರಿಯುತ್ತಿರೋ ಧಾರಾಕಾರ ಮಳೆಯಿಂದ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಭದ್ರಾ ನದಿ ಉಕ್ಕಿ ಹರಿಯುತ್ತಿದೆ. ಮೂರು ದಿನದಿಂದಲೂ ಕಳಸ ಸಮೀಪವಿರುವ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ. ಇದರಿಂದ ಮೂರು ದಿನದಿಂದ ಕಳಸ- ಹೊರನಾಡು ಸಂಪರ್ಕ ಬಂದ್ ಆಗಿದೆ. ರಸ್ತೆ ಸಂಪರ್ಕವಿಲ್ಲದೆ ಜನ ಪರದಾಡುತ್ತಿದ್ದಾರೆ. ಹೆಬ್ಬಾಳೆ ಸೇತುವೆ ಮೇಲೆ 6 ಅಡಿ ನೀರು ನಿಂತಿದ್ದು, ಹೆಬ್ಬಾಳೆ ಸೇತುವೆ ಪಕ್ಕದಲ್ಲಿದ್ದ ಅಂಗಡಿ ಜಲಾವೃತವಾಗಿದೆ. ಇದರಿಂದ ಬಾಳೆಹೊನ್ನೂರಿನಲ್ಲಿ ಪ್ರವಾಹದ ಭೀತಿ ಎದುರಾಗಿದೆ. ಭದ್ರಾ ನದಿ ಅಪಾಯ ಮಟ್ಟ ಮೀರಿ ಹರಿಯುತ್ತಿದೆ.

Comments are closed.