
ಬೆಂಗಳೂರು (ಆ. 7): ಮಹಿಳೆಯ ಮೊಬೈಲ್ ನಂಬರ್ ಹ್ಯಾಕ್ ಮಾಡಿ ಸ್ನೇಹಿತರಿಗೆ ಅಶ್ಲೀಲ ಸಂದೇಶ ಕಳುಹಿಸಿರುವವರ ವಿರುದ್ದ ಕಾನೂನು ಕ್ರಮ ಕೈಗೊಳ್ಳುವಂತೆ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರು ದೂರು ದಾಖಲು ಮಾಡಿದ್ದಾರೆ. ಬೆಂಗಳೂರಿನ ಬಸವನಗುಡಿ ನಿವಾಸಿ 36 ವರ್ಷದ ವಿವಾಹಿತ ಮಹಿಳೆಯ ನಂಬರ್ ಹ್ಯಾಕ್ ಆಗಿದೆ. ಸಂತ್ರಸ್ತ ಮಹಿಳೆ ಹಾಗೂ ಅವರ ಸ್ನೇಹಿತರು ಸೇರಿ ಒಂದು ವಾಟ್ಸಾಪ್ ಗ್ರೂಪ್ ಕ್ರಿಯೇಟ್ ಮಾಡಿದ್ದರು. ಈ ಗ್ರೂಪ್ ಗೆ ಸಂತ್ರಸ್ತ ಮಹಿಳೆ ಕೂಡ ಅಡ್ಮಿನ್ ಆಗಿದ್ದರು. ಇದೇ ವೇಳೆ ಯಾರೋ ಅಪರಿಚಿತರು ಕರೆಮಾಡಿ ನಿಮಗೆ ಲಿಂಕ್ ಒಂದು ಕಳುಹಿಸಿದ್ದೇವೆ, ನೋಡಿ ಅಂದಿದ್ದಾರೆ.
ಲಿಂಕ್ ಅನ್ನು ಓಪನ್ ಮಾಡಿ ನೋಡಿ ಎಂದು ಕಾಲ್ ಕಟ್ ಮಾಡಿದ್ದಾರೆ. ಅದರಂತೆ ಲಿಂಕ್ ಓಪನ್ ಮಾಡುತ್ತಿದ್ದಂತೆ ಮಹಿಳೆಯ ನಂಬರ್ ಹ್ಯಾಕ್ ಆಗಿದೆ. ಹ್ಯಾಕ್ ಆಗಿದ್ದೇ ಗ್ರೂಪ್ ನಲ್ಲಿರೋ ಎಲ್ಲ ನಂಬರ್ ಗೆ ಕೆಲ ಅಶ್ಲೀಲ ಫೋಟೋ ಕಳುಹಿಸಲಾಗಿದೆ. ಅಷ್ಟೇ ಅಲ್ಲದೆ, ಮಹಿಳೆಯ ನಂಬರ್ನಿಂದ ಅಶ್ಲೀಲ ವಿಡಿಯೋಗಳನ್ನೂ ಕಳುಹಿಸಿದ್ದು, ಆ ಮಹಿಳೆಗೆ ತನ್ನ ಸ್ನೇಹಿತರಿಂದಲೇ ಕರೆ ಬರೋಕೆ ಶುರುವಾಗಿದೆ. ಯಾಕೆ ಈ ತರ ಮೆಸೇಜ್ ಮಾಡ್ತಾ ಇದೀರಿ ಅಂತೆಲ್ಲ ಕೇಳಿದ್ದಾರೆ. ಇದಾದ ಬಳಿಕ ಮತ್ತೆ ಹ್ಯಾಕ್ ಮಾಡಿದ ಹ್ಯಾಕರ್ಸ್ ಮಹಿಳೆಯ ನಂಬರ್ನಿಂದ ಸ್ನೇಹಿತರಿಗೆ ಪರ್ಸನಲ್ ಮೆಸೇಜ್ ಮಾಡಿದ್ದಾರೆ. ನಿಮ್ಮ ಹಾಟ್ ಫೋಟೋ ಕಳುಹಿಸಿ, ಒಂದೊಂದು ಫೋಟೋಗೆ ಇಂತಿಷ್ಟು ಹಣ ಕೊಡುತ್ತೇನೆ. ನೀವು ಆರಾಮವಾಗಿ ಜೀವನ ನಡೆಸಬಹುದು ಎಂದು ಮೆಸೇಜ್ ಸಹ ಮಾಡಿದ್ದಾರೆ.
ಇಷ್ಟೆಲ್ಲಾ ಆದ ಬಳಿಕ ಮಹಿಳೆ ಶಾಕ್ ಗೆ ಒಳಗಾಗಿದ್ದು ನ್ಯಾಯಕ್ಕಾಗಿ ಪೊಲೀಸರ ಮುಂದೆ ದೂರು ನೀಡಿದ್ದಾರೆ. ಮಹಿಳೆಯ ಗೌರವಕ್ಕೆ ಧಕ್ಕೆ ಉಂಟಾದ ಹಿನ್ನೆಲೆ ದಕ್ಷಿಣ ವಿಭಾಗ ಸಿಇಎನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಮಹಿಳೆಯ ಮೊಬೈಲ್ ನಂಬರ್ ಜಾಡು ಹಿಡಿದು ಯಾರು? ಹೇಗೆ ಹ್ಯಾಕ್ ಮಾಡಿದರು? ಎಂದು ತನಿಖೆ ಶುರು ಮಾಡಿದ್ದಾರೆ. ಇಷ್ಟೇ ಅಲ್ಲದೆ ವಾಟ್ಸಪ್ ಗ್ರೂಪ್ನಲ್ಲಿರುವ ಎಲ್ಲರನ್ನೂ ಪೊಲೀಸರು ವಿಚಾರಣೆ ಮಾಡಲು ಮುಂದಾಗಿದ್ದಾರೆ.
Comments are closed.