ಕರ್ನಾಟಕ

ಕಬಿನಿ ಡ್ಯಾಂನಿಂದ 30 ಸಾವಿರ ಕ್ಯೂಸೆಕ್ ಹೊರಹರಿವು: ಕಪಿಲಾ ನದಿಯಲ್ಲಿ ಪ್ರವಾಹ ಭೀತಿ

Pinterest LinkedIn Tumblr

ಎಚ್‌.ಡಿ.ಕೋಟೆ (ಮೈಸೂರು): ತಾಲೂಕಿನ ಬೀಚನಹಳ್ಳಿಯಲ್ಲಿರುವ ಕಬಿನಿ ಜಲಾಶಯದಿಂದ ಮಂಗಳವಾರ ರಾತ್ರಿ ವೇಳೆಗೆ 30 ಸಾವಿರ ಕ್ಯೂಸೆಕ್‌ ನೀರನ್ನು ಹೊರ ಬಿಡಲಾಗುತ್ತಿದೆ. ಒಳಹರಿವು ಮತ್ತಷ್ಟು ಹೆಚ್ಚುತ್ತಿದ್ದು, ಹೊರ ಹರಿವಿನ ಪ್ರಮಾಣ ಹೆಚ್ಚಳವಾಗುವ ಸಂಭವ ಇದೆ.

ಕಬಿನಿ ಜಲಾಶಯ ವ್ಯಾಪ್ತಿಯ ಕೇರಳ ರಾಜ್ಯದ ವಯನಾಡು ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಮಳೆ ಪ್ರಾರಂಭವಾಗಿದ್ದು, ಸೋಮವಾರದಂದು ಕೇವಲ 6 ಸಾವಿರ ಕ್ಯೂಸೆಕ್‌ ಇದ್ದ ಒಳಹರಿವು, ಮಂಗಳವಾರ ಬೆಳಗಿನ ವೇಳೆಗೆ 30 ಸಾವಿರ ಕ್ಯೂಸೆಕ್‌ಗೆ ಏರಿತ್ತು.

ಜಲಾಶಯದ ಮಟ್ಟ ಕೂಡ 2279.50 ಅಡಿಗೆ ಏರಿದೆ. ಒಳ ಹರಿವಿನ ಪ್ರಮಾಣದಷ್ಟೇ ನೀರನ್ನು ಜಲಾಶಯದಿಂದ ಹೊರ ಬಿಡಲಾಗುತ್ತಿದೆ. ಜಲಾಶಯದ ಗರಿಷ್ಠ ಮಟ್ಟ 2284 ಅಡಿಗಳು. ಜಲಾಶಯದ ಒಟ್ಟು ಸಂಗ್ರಹಣಾ ಸಾಮರ್ಥ್ಯ 19.55 ಟಿಎಂಸಿ.

ಸೇತುವೆ ಮುಳುಗಡೆ ಸಂಭವ: ಈಗಾಗಲೇ ಜಲಾಶಯದಿಂದ 30 ಸಾವಿರ ಕ್ಯೂಸೆಕ್‌ ನೀರನ್ನು ಬಿಡುತ್ತಿರುವುದರಿಂದ ಜಲಾಶಯದ ಮುಂಭಾಗ ಇರುವ ಸೇತುವೆ ಮೇಲೆ ನೀರು ಹರಿಯುತ್ತಿದ್ದು, ಸೇತುವೆ ಮುಳುಗಿದೆ.

ಪ್ರವಾಹ, ಇಇ ಎಚ್ಚರಿಕೆ: ಕಪಿಲಾ ನದಿಗೆ ಹೆಚ್ಚು ನೀರು ಬಿಡುವುದರಿಂದ, ನದಿಯಲ್ಲಿ ಪ್ರವಾಹ ಹೆಚ್ಚುವ ಸಂಭವ ಇದೆ. ನದಿ ಪಾತ್ರದ ಜನತೆ ಎಚ್ಚರಿಕೆಯಿಂದ ಇದ್ದು, ಜಾನುವಾರುಗಳನ್ನು ರಕ್ಷಿಸಿಕೊಳ್ಳಬೇಕು ಎಂದು ಕಬಿನಿ ಜಲಾಶಯದ ಕಾರ್ಯ ಪಾಲಕ ಎಂಜಿನಿಯರ್‌ ಸುಜಾತಾ ತಿಳಿಸಿದ್ದಾರೆ.

2019 ಹಿನ್ನೋಟ: ಕಳೆದ ವರ್ಷ ಇದೇ ರೀತಿಯಲ್ಲಿ ಆಗಸ್ಟ್‌ 4, 2019 ರಂದು ಜಲಾಶಯದಲ್ಲಿ ಕೇವಲ 2268 ಅಡಿ ನೀರು ಇತ್ತು. ನಂತರ ಕುಂಭದ್ರೋಣ ಮಳೆಯಿಂದ ಆಗಸ್ಟ್‌ 7ಕ್ಕೆ ನೀರು ಗರಿಷ್ಠ ಮಟ್ಟ ತಲುಪಿತ್ತು. ಆಗಸ್ಟ್ 8 ರಂದು ಹೊರ ಹರಿವು 90 ಸಾವಿರ ಕ್ಯೂಸೆಕ್‌ ಇದ್ದು, ಆಗಸ್ಟ್ 10 ರಂದು 1 ಲಕ್ಷ ಕ್ಯೂಸೆಕ್‌ ನೀರನ್ನು ಜಲಾಶಯದಿಂದ ಬಿಡಲಾಗಿದ್ದು, ಇತಿಹಾಸ ನಿರ್ಮಿಸಿದೆ. ಕಳೆದ ಸಾಲಿನಲ್ಲಿ ಅತಿವೃಷ್ಟಿಯಿಂದ ತಾಲೂಕಿನಲ್ಲಿ ಬೆಳೆ ಹಾಗೂ ಮನೆ ಹಾನಿ ಆಗಿತ್ತು.

 

Comments are closed.