ಬೆಂಗಳೂರು: ಹಳೇ ದ್ವೇಷದ ಹಿನ್ನೆಲೆ ರೌಡಿಶೀಟರ್ ಸುನೀಲ್ ಕುಮಾರ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ಭೀಕರ ಹತ್ಯೆ ಮಾಡಿರುವ ಘಟನೆ ಬೆಂಗಳೂರು ನಗರ ಮೈಸೂರು ರಸ್ತೆಯಲ್ಲಿ ನಡೆದಿದೆ.
ಎಂಟು ಮಂದಿಯಿಂದ ಇಪ್ಪತ್ತಕ್ಕೆ ಹೆಚ್ಚು ಬಾರಿ ಇರಿದು ಕೊಲೆ ಮಾಡಲಾಗಿದೆ. ಶುಕ್ರವಾರ ರಾತ್ರಿ ಎಂಟು ಗಂಟೆಯ ಸಮಯದಲ್ಲಿ ಮೈಸೂರು ರಸ್ತೆ ಕದಂಬ ಹೋಟೆಲ್ ಸಮೀಪ ನಡೆದ ಘಟನೆಯ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಕಾರಿನೊಳಗೆ ಕೂತಿದ್ದ ಸುನೀಲ್ ನನ್ನು ಮತ್ತೊಂದು ಕಾರಿನಲ್ಲಿ ಬಂದಿದ್ದ ಎಂಟು ಮಂದಿಯ ದುಷ್ಕರ್ಮಿಗಳ ಗುಂಪು ಕಾರಿನಿಂದ ಹೊರಗೆಳೆದು ಕೊಲೆ ಮಾಡಿ ಕ್ಷಣಾರ್ಧದಲ್ಲಿ ಪರಾರಿಯಾಗಿದೆ. ಕೊಲೆಯಾದ ಸುನೀಲ್ ಆನೆಕಲ್, ಅತ್ತಿಬೆಲೆ, ಹೊಸಕೋಟೆ ಪೋಲೀಸ್ ಠಾಣೆ ವ್ಯಾಪ್ತಿಯಲ್ಲಿ ಅಪರಾಧ ಕೃತ್ಯ ನಡೆಸಿ ಪೋಲೀಸರಿಗೆ ಬೇಕಾದವನಾಗಿದ್ದ, ಅಲ್ಲದೆ ಹಲವು ಪ್ರಕರಣಗಳಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದ. 2019ರಲ್ಲಿ ನ್ಯಾಯ ಬಗೆಹರಿಸುವ ನೆಪದಲ್ಲಿ ಜಯಂತ್ ಎಂಬಾತನನ್ನು ಕೊಲೆ ಮಾಡಿದ್ದು ಆತನ ಮೇಲಿನ ಗಂಭೀರ ಕೊಲೆ ಪ್ರಕರಣವಾಗಿತ್ತು.
ಘಟನಾ ಸ್ಥಳಕ್ಕೆ ರಾಮನಗರ ಎಸ್ಪಿ ಅನೂಪ್ ಶೆಟ್ಟಿ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕುಂಬಳಗೋಡು ಪೋಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದಾರೆ.
Comments are closed.