ಕರ್ನಾಟಕ

ಪ್ರೀತಿಗಾಗಿ ಹುಬ್ಬಳ್ಳಿಯಲ್ಲಿ ಯುವಕರ ಕಲಹ ಕೊಲೆಯಲ್ಲಿ ಅಂತ್ಯ

Pinterest LinkedIn Tumblr


ಹುಬ್ಬಳ್ಳಿ (ಜು. 29): ಹುಬ್ಬಳ್ಳಿಯಲ್ಲಿ 18 ವರ್ಷದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಚಿಗುರು ಮೀಸೆಯ ಸ್ನೇಹಿತರ ಕಲಹ ಕೊಲೆಯಲ್ಲಿ ಅಂತ್ಯವಾಗಿದೆ. ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಕೊರೋನಾ ಆತಂಕದಲ್ಲೇ ಬದುಕು ಸಾಗಿಸುತ್ತಿರುವ ಹುಬ್ಬಳ್ಳಿಯ ಜನರು, ನಿನ್ನೆ ಸೂರ್ಯ ಮುಳುಗುತ್ತಿದ್ದಂತೆ ಬೆಚ್ಚಿಬಿದ್ದಿದ್ದರು. ಕಳೆದು ಹಲವು ತಿಂಗಳಿನಿಂದ ಶಾಂತವಾಗಿದ್ದ ಹುಬ್ಬಳ್ಳಿಯಲ್ಲಿ ಮತ್ತೆ ಮಚ್ಚು, ಲಾಂಗ್‌ಗಳು ಝಳಪಿಸಿದ್ದವು. ಪ್ರತಿಷ್ಠಿತ ಏರಿಯಾ ದೇಶಪಾಂಡೆ ನಗದಲ್ಲಿ ನೆತ್ತರು ಹರಿದಿತ್ತು. ಏನಾಯ್ತು ಎನ್ನುವಷ್ಟರಲ್ಲೇ ಹದಿನೆಂಟು ವರ್ಷದ ಹುಡುಗ ಲೋಕೇಶ್ ಕಡೆಮನಿ ರಕ್ತದ ಮಡುವಿನಲ್ಲಿ ಬಿದ್ದಿದ್ದ‌.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ್ದ ಹುಬ್ಬಳ್ಳಿ ಉಪನಗರ ಠಾಣೆ ಪೊಲೀಸರು ಹುಡುಗನನ್ನು ಕಿಮ್ಸ್ ಆಸ್ಪತ್ರೆಗೆ ಶಿಫ್ಟ್ ಮಾಡಿಸಿದರು. ಕಿಮ್ಸ್‌ಗೆ ದಾಖಲಿಸುವಷ್ಟರಲ್ಲೇ ಲೋಕೇಶನ ಜೀವ ಹೋಗಿತ್ತು. ಎದೆಯೆತ್ತರಕ್ಕೆ ಬೆಳೆದು ನಿಂತಿದ್ದ ಮಗ ಬೀದಿಬದಿ ಹೆಣವಾಗಿದ್ದನ್ನು ಕಂಡು ಕುಟುಂಬದವರಿಗೆ ಆಕಾಶವೇ ಕಳಚಿ‌ ತಲೆಮೇಲೆ ಬಿದ್ದಂತಾಗಿತ್ತು. ತಂದೆ, ಬಂಧು- ಬಳಗದವರ ಆಕ್ರಂದನ ಮುಗಿಲು ಮುಟ್ಟಿತ್ತು. ಮನೆಯವರ ಪ್ರಕಾರ ಲೋಕೇಶ್ ಸೀದಾಸಾದಾ ಹುಡುಗ. ಇತ್ತೀಚೆಗಷ್ಟೇ ಸ್ಯಾನಿಟೈಸರ್ ಬ್ಯುಜಿನೆಸ್ ಮಾಡುತ್ತ ಚೆನ್ನಾಗಿಯೇ ಇದ್ದ.

ನಿನ್ನೆ ಸಂಜೆ ಅರ್ಧ ಗಂಟೆಯಲ್ಲಿ ಬರುವುದಾಗಿ ಹೇಳಿ ಮನೆಯಿಂದಾಚೆ ಹೋಗಿದ್ದ. ಆದ್ರೆ ಜೀವಂತವಾಗಿ ಬರಲೇ ಇಲ್ಲ. ದುಷ್ಕರ್ಮಿಗಳ ದಾಳಿಗೆ ಬರ್ಬರವಾಗಿ ಕೊಲೆಯಾಗಿದ್ದಾನೆ. ಲೋಕೇಶ್ ಕಡೆಮನಿ ತಂದೆ-ತಾಯಿಗೆ ಒಬ್ಬನೇ ಮಗನಾಗಿದ್ದ. ಕೆಲಸ ಮುಗಿಯುತ್ತಿದ್ದಂತೆ ಚಾಮುಂಡೇಶ್ವರಿ ನಗರದಲ್ಲಿರುವ ಮನೆಗೆ ಬಂದು ಬಿಡುತ್ತಿದ್ದ. ಆದರೆ, ನಿನ್ನೆ ರಾತ್ರಿ ಕೆಲಸವಿದೆ ಬಾ ಎಂದು ಹೇಳಿ ಕರೆಸಿದ ಸ್ನೇಹಿತರು ಜಗಳ ತೆಗೆದು ಕೊಲೆ ಮಾಡಿದ್ದಾರೆ‌. ಮೇಲೆರಗಿದ ದುಷ್ಕರ್ಮಿಗಳಿಂದ ತಪ್ಪಿಸಿಕೊಳ್ಳಲು ಲೋಕೇಶ ಸಾಕಷ್ಟು ಪ್ರಯತ್ನಿಸಿದ್ದ. ಬೈಕ್ ಅಲ್ಲೇ ಬಿಟ್ಟು ಓಡಲು ಶುರುಮಾಡಿದ್ದ.

ಆದರೆ, ಮಾರಕಾಸ್ತ್ರಗಳಿಂದ ದಾಳಿ ಮಾಡಿದ ದುಷ್ಟರು ಪ್ರಾಣ ತೆಗೆದು ಪರಾರಿಯಾಗಿದ್ದರು. ತಕ್ಷಣ ಕಾರ್ಯಚರಣೆ ನಡೆಸಿದ್ದ ಖಾಕಿ ಪಡೆಗೆ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಏಳು ಜನರನ್ನು ಬಂಧಿಸಲಾಗಿದೆ. ಕೊಲೆಗೆ ಯುವಕರ ಲವ್ ಕಾರಣ ಎನ್ನುವುದು ಪೊಲೀಸ್ ತನಿಖೆ ವೇಳೆ ಗೊತ್ತಾಗಿದೆ. ಸಾಗರ್ ದಾಬಡೆ ಎಂಬಾತ ಓರ್ವ ಯುವತಿಯನ್ನು ಪ್ರೀತಿಸುತ್ತಿದ್ದನಂತೆ. ಆತನ ಪ್ರೀತಿಗೆ ಲೋಕೇಶ್ ಅಡ್ಡಿಯಾಗಿದ್ದನಂತೆ. ತನ್ನ ಪ್ರೀತಿಗೆ ಲೋಕೇಶ್ ಅಡಚಣೆ ಆಗಿದ್ದಾನೆ ಎಂಬುದು ಸಾಗರ್‌ನ ಭಾವನೆ. ಹೀಗಾಗಿ ಸಾಗರ್ ದಾಬಡೆ ಮತ್ತು ಲೋಕೇಶ್ ಕಡೆಮನಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು ಎನ್ನಲಾಗಿದೆ.

ದ್ವೇಷ ವಿಕೋಪಕ್ಕೆ ತಿರುಗಿ ಕೊಲೆ ನಡೆದಿದೆ ಎನ್ನುವುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ಪ್ರೇಮ ಕಲಹದಲ್ಲಿ ಇನ್ನೂ ಬದುಕಿ ಬಾಳಬೇಕಿದ್ದ ಯುವಕ ಹತ್ಯೆಯಾಗಿದ್ದಾನೆ. ಲೋಕೇಶ್ ಅಕಾಲಿಕ ಸಾವು ಕುಟುಂಬಸ್ಥರನ್ನು ಜರ್ಜರಿತರನ್ನಾಗಿ ಮಾಡಿದೆ. ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹುಬ್ಬಳ್ಳಿ ಉಪನಗರ ಠಾಣೆ ಪೊಲೀಸರು ಸಾಗರ್ ದಾಬಡೆ, ಕಿರಣ್ ಹೊನ್ನಳ್ಳಿ, ರಜತ್ ನಾಯಕ್, ಸಿದ್ದು ಸೇರಿದಂತೆ 7 ಜನರನ್ನು ಬಂಧಿಸಿದ್ದಾರೆ. ಎಲ್ಲರೂ ಹದಿನೆಂಟರಿಂದ ಇಪ್ಪತ್ತು ವರ್ಷ ವಯಸ್ಸಿನ ಯುವಕರು. ಸ್ನೇಹಿತರಾಗಿದ್ದ ಎಲ್ಲರೂ ಭವಿಷ್ಯದ ಕುರಿತು ಒಂದಿನಿತು ಚಿಂತಿಸದೆ ದ್ವೇಷದ ಕೈಗೆ ಬುದ್ಧಿ ಕೊಟ್ಟಿದ್ದಾರೆ. ಗೆಳೆಯನನ್ನು ಕೊಂದು ಜೈಲು ಪಾಲಾಗಿದ್ದಾರೆ.

Comments are closed.