ಹೈದರಾಬಾದ್: ಮಹಿಳೆಯೊಬ್ಬಳು ತನ್ನ ಒಂಬತ್ತನೇ ಪತಿಯಿಂದ ಕೊಲೆಯಾಗಿರುವ ಘಟನೆ ಹೈದರಾಬಾದಿನ ಪಹದಿ ಶರೀಫ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಪರಪುರುಷರೊಂದಿಗಿನ ಸಲುಗೆಯೇ ಹತ್ಯೆಗೆ ಕಾರಣ ಎಂದು ತಿಳಿದುಬಂದಿದೆ.
ಮೃತ ಮಹಿಳೆಯನ್ನು ವರಲಕ್ಷ್ಮೀ (30) ಎಂದು ಗುರುತಿಸಲಾಗಿದ್ದು, ಆರೋಪಿ ಪತಿ ನಾಗರಾಜನನ್ನು ಪೊಲೀಸರು ಬಂಧಿಸಿದ್ದಾರೆ. ಪ್ರಕರಣ ಬಗ್ಗೆ ವಿವರಣೆ ನೀಡಿರುವ ಸಬ್ಇನ್ಸ್ಪೆಕ್ಟರ್ ಕುಮಾರಸ್ವಾಮಿ, ಹತ್ಯೆಯಾದ ವರಲಕ್ಷ್ಮೀ ಈಗಾಗಲೇ 8 ಮದುವೆಯಾಗಿದ್ದಳು. ಆರೋಪಿ ನಾಗರಾಜು ಆಂಧ್ರ ಪ್ರದೇಶದ ಕರ್ನೂಲ್ ಜಿಲ್ಲೆಯವನು. ಆತ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ಜಲ್ಲಪಲ್ಲಿ ಮುನ್ಸಿಪಲ್ ಏರಿಯಾದ ಶ್ರೀರಾಮ ಕಾಲನಿಯಲ್ಲಿ ಕಳೆದ 3 ವರ್ಷಗಳಿಂದ ವಾಸವಿದ್ದ. ವೃತ್ತಿಯಲ್ಲಿ ಕ್ಯಾಬ್ ಡ್ರೈವರ್ ಆಗಿದ್ದ ನಾಗರಾಜುವಿಗೆ ಸ್ಥಳೀಯ ನಿವಾಸಿ ವರಲಕ್ಷ್ಮೀ ಪರಿಚಯವಾಗಿದೆ ಎಂದು ತಿಳಿಸಿದ್ದಾರೆ.
ವರಲಕ್ಷ್ಮೀ ಕಾಟೆದನ್ ಏರಿಯಾದ ಪೆಟ್ರೋಲ್ ಬಂಕ್ ಒಂದರಲ್ಲಿ ಕೆಲಸ ಮಾಡುತ್ತಿದ್ದಳು. ಈಗಾಗಲೇ ಮದುವೆಯಾಗಿದ್ದ ಆಕೆಗೆ ಓರ್ವ ಮಗನಿದ್ದನು. ಇದರ ನಡುವೆ ನಾಗರಾಜು ಮತ್ತು ವರಲಕ್ಷ್ಮೀ ನಡುವಿನ ಸ್ನೇಹ ಪ್ರೀತಿಗೆ ತಿರುಗಿತ್ತು. ಬಳಿಕ ಆಕೆ ತನ್ನ ಪತಿ ಮತ್ತು ಮಗನನ್ನು ಬಿಟ್ಟು ಎರಡು ವರ್ಷಗಳ ಹಿಂದೆ ನಾಗರಾಜು ಜತೆ ವಿವಾಹವಾಗಿದ್ದಳು. ಇದಾದ ಕೆಲ ದಿನಗಳವರೆಗೆ ಇಬ್ಬರ ವೈವಾಹಿಕ ಜೀವನ ಪ್ರಶಾಂತವಾದ ಕಡಲಿನಂತೆಯೇ ಇತ್ತು. ಇದರ ನಡುವೆ ವರಲಕ್ಷ್ಮೀ ಪರ ಪುರುಷರೊಂದಿಗೆ ಸಖ್ಯ ಬೆಳೆಸಿರುವುದು ಹಾಗೂ ಅವರೊಂದಿಗೆ ತುಂಬಾ ಸಲುಗೆಯಿಂದಿರುವುದು ನಾಗರಾಜುಗೆ ಗೊತ್ತಾಗಿದೆ. ಇದೇ ವಿಚಾರ ಇಬ್ಬರ ನಡುವಿನ ಜಗಳಕ್ಕೆ ಬುನಾದಿಯಾಯಿತು ಎಂದು ಮಾಹಿತಿ ನೀಡಿದರು.
ಹೀಗೆ ಇಬ್ಬರ ನಡುವೆ ಪ್ರತಿದಿನ ಜಗಳ ನಡೆಯುತ್ತಿರುವಾಗ ಮಂಗಳವಾರ ಬೆಳಗ್ಗೆ ಇಬ್ಬರ ನಡುವಿನ ಗಲಾಟೆ ತಾರಕಕ್ಕೇರಿ, ತಾಳ್ಮೆ ಕಳೆದುಕೊಂಡ ನಾಗರಾಜು, ವರಲಕ್ಷ್ಮೀ ಕತ್ತು ಹಿಸುಕಿ ಕೊಂದಿದ್ದಾನೆ. ಬಳಿಕ ತಾನೇ ಪಹದಿ ಶರೀಫ್ ಪೊಲೀಸ್ ಠಾಣೆಗೆ ಬಂದು ಶರಣಾದನು ಎಂದು ಸಬ್ಇನ್ಸ್ಪೆಕ್ಟರ್ ಕುಮಾರಸ್ವಾಮಿ ತಿಳಿಸಿದರು.
ಗಂಡನೊಂದಿಗಡ ಕ್ಯಾತೆ ತೆಗೆದಿದ್ದ ವರಲಕ್ಷ್ಮೀ ಮತ್ತೊಬ್ಬನನ್ನು ಮದುವೆಯಾಗಲು ತಯಾರಾಗಿದ್ದಳು ಎಂದು ತಿಳಿದುಬಂದಿದೆ. ಇದೇ ಕಾರಣಕ್ಕೆ ಪದೇಪದೆ ಜಗಳ ಮಾಡುತ್ತಿದ್ದಳು ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ.
Comments are closed.