ಕರ್ನಾಟಕ

ಕೊರೋನಾ ಸೋಂಕಿತರಿಂದ ವಸೂಲಿ ಮಾಡಿದ್ದ ಹಣ ಮರುಪಾವತಿಸಬೇಕಿದೆ ಖಾಸಗಿ ಆಸ್ಪತ್ರೆಗಳು!

Pinterest LinkedIn Tumblr


ಬೆಂಗಳೂರು: ಅಧಿಕಾರಿಗಳ ಖಡಕ್ ಸೂಚನೆ ಬಳಿಕ ರಾಜರಾಜೇಶ್ವರಿ ನಗರದಲ್ಲಿನ ಖಾಸಗಿ ಆಸ್ಪತ್ರೆ 20 ಸೋಂಕಿತರಿಂದ ಹೆಚ್ಚುವರಿಯಾಗಿ ಪಡೆದಿದ್ದ ಹಣವನ್ನು ಮರುಪಾವತಿ ಮಾಡಿದ ಬೆನ್ನಲ್ಲೇ ಇದೀಗ ರೋಗಿಗಳಿಂದ ಈ ಹಿಂದೆ ದುಪ್ಪಟ್ಟು ಹಣ ವಸೂಲಿ ಮಾಡಿದ್ದ ನಗರದಲ್ಲಿರುವ ಇತರೆ ಖಾಸಗಿ ಆಸ್ಪತ್ರೆಗಳಿಗೆ ಭೀತಿ ಶುರುವಾಗಿದೆ.

ಸೋಂಕು ಪೀಡಿತರಿದೆ ಶೇ.50ರಷ್ಟು ಹಾಸಿಗೆ ನೀಡುವಂತೆ ಖಾಸಗಿ ಆಸ್ಪತ್ರೆಗಳಿಗೆ ಸರ್ಕಾರ ಸೂಚನೆ ನೀಡಿದ್ದು, ಇದಕ್ಕೆ ಒಪ್ಪಿಗೆ ಸೂಚಿಸಿದ ಬಳಿಕವೂ ಖಾಸಗಿ ಆಸ್ಪತ್ರೆಗಳು ಸೋಂಕಿತರಿಂದ ದುಪ್ಪಟ್ಟು ಹಣ ವಸೂಲಿ ಮಾಡುತ್ತಿರುವುದು ಕಂಡು ಬಂದಿತ್ತು.

ಈ ಬಗ್ಗೆ ಗಮನಹರಿಸಿದ ಅಧಿಕಾರಿಗಳು ಇದೀಗ ಖಾಸಗಿ ಆಸ್ಪತ್ರೆಗಳ ವರ್ತನೆ ವಿರುದ್ಧ ನಿಗಾ ಇರಿಸಿದ್ದಾರೆ. ಈ ಹಿಂದೆ ರಾಜರಾಜೇಶ್ವರಿ ನಗರದ ಖಾಸಗಿ ಆಸ್ಪತ್ರೆಯು ಸೋಂಕಿತ ವ್ಯಕ್ತಿಗಳಿಂದ ದುಪ್ಪಟ್ಟು ಹಣ ವಸೂಲಿ ಮಾಡಿತ್ತು. ಈ ಬಗ್ಗೆ ಮಾಹಿತಿ ತಿಳಿದ ಡಿಐಜಿ ರೂಪಾ ಅವರು ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಖಡಕ್ ಎಚ್ಚರಿಕೆ ನೀಡಿದ್ದರು. ಇದಕ್ಕೆ ಬೆದರಿದ ಆಸ್ಪತ್ರೆ ನಂತರ ಜೂ.23 ರಂದು ಸೋಂಕಿತ 22 ಜನರಿಗೆ ಹಣವನ್ನು ಮರುಪಾವತಿ ಮಾಡಿತ್ತು.

ಈ ಬೆಳವಣಿಗೆ ಹಿನ್ನೆಲೆಯಲ್ಲಿ ನಗರದಲ್ಲಿರುವ ಇತರೆ ಖಾಸಗಿ ಆಸ್ಪತ್ರೆಗಳು ಈಗಾಗಲೇ ಸೋಂಕಿತರಿಂದ ದುಪ್ಪಟ್ಟು ಹಣಪಡೆದಿರುವ ಹಿನ್ನೆಲೆಯಲ್ಲಿ ಹಣ ಕಟ್ಟಿದ ಸೋಂಕಿತರು ತಮಗೂ ಹಣ ಮರಪಾವತಿಯಾಗಬಹುದು ಎಂದು ನಿರೀಕ್ಷಿಸುತ್ತಿದ್ದಾರೆ.

ಈ ನಡುವೆ ಈ ಬಗ್ಗೆ ಅಧಿಕಾರಿಗಳ ಮಧ್ಯೆ ಹಿರಿಯ ಐಎಎಸ್ ಅಧಿಕಾರಿಯೊಬ್ಬರು ದನಿ ಎತ್ತಿದ್ದಾರೆಂದು ವಿಧಾನಸೌಧದ ಮೂಲಗಳು ಮಾಹಿತಿ ನೀಡಿವೆ.

ಸರ್ಕಾರಿ ಅನುದಾನದ ಅಡಿಯಲ್ಲಿ ಬರುವ ಖಾಸಗಿ ಆಸ್ಪತ್ರೆಗಳ ನಿಗದಿತ ದರಕ್ಕಿಂತ ಹೆಚ್ಚಿನ ಹಣವನ್ನು ಪಾವತಿಸಿದ ಎಲ್ಲರಿಗೂ ಮರುಪಾವತಿ ಮಾಡುವಂತೆ ಮಾಡಬೇಕೆಂದು ಹೇಳಿದ್ದಾರೆಂದು ತಿಳಿದುಬಂದಿದೆ.

ಈ ವಿಚಾರ ಕುರಿತು ಐಎಎಸ್ ಅಧಿಕಾರಿ ದನಿ ಎತ್ತರಿಸುವ ಹಿನ್ನೆಲೆಯಲ್ಲಿ ಶೇ.50ರಷ್ಟು ಕೋಟಾದ ಅಡಿಯಲ್ಲಿ ಬರುವ ಖಾಸಗಿ ಆಸ್ಪತ್ರೆಗಳು ವಿಳಂಬ ನೀತಿ ಅನುಸರಿಸದೆ ಸ್ವಯಂಪ್ರೇರಿತವಾಗಿ ಮರುಪಾವತಿ ಮಾಡುವಂತೆ ಸೂಚಿಸಲು ನಿಮಯ ಜಾರಿಗೆ ತರುವ ಅಥವಾ ಈ ಬಗ್ಗೆ ಆದೇಶ ಹೊರಡಿಸುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.

ಈ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಖಾಸಗಿ ಆಸ್ಪತ್ರೆಗಳ ಮೂಲಗಳು, ಈಗಾಗಲೇ ಆಸ್ಪತ್ರೆಗಳು ಆರ್ಥಿಕ ಸಂಕಷ್ಟದಲ್ಲಿದೆ. 384 ಆಸ್ಪತ್ರೆಗಳ ಪೈಕಿ 58 ಆಸ್ಪತ್ರೆಗಳು ಈಗಾಗಲೇ ಬಂದ್ ಆಗಿವೆ. 25-26 ಆಸ್ಪತ್ರೆಗಳು ಬಂದ್ ಆಗುವ ಮಟ್ಟದಲ್ಲಿವೆ. ಮರುಪಾವತಿ ಮಾಡಲು ಸರ್ಕಾರ ಆದೇಶ ಹೊರಡಿಸಿದರೆ, ಮತ್ತಷ್ಟು ಆಸ್ಪತ್ರೆಗಳು ಬಾಗಿಲು ಮುಚ್ಚುವ ಸಾಧ್ಯತೆಗಳಿವೆ ಎಂದು ಹೇಳಿದೆ.

Comments are closed.