ನವದೆಹಲಿ: ಭಾರತೀಯ ವಾಯುಸೇನೆ ಮಟ್ಟಿಗೆ ಗೇಮ್ ಚೇಂಜರ್ ಎಂದೇ ಹೇಳಲಾಗುತ್ತಿರುವ ರಾಫೆಲ್ ಯುದ್ಧ ವಿಮಾನಗಳು ಕೊನೆಗೂ ಭಾರತಕ್ಕೆ ಬಂದಿಳಿದಿದ್ದು, ಶೀಘ್ರದಲ್ಲೇ ಸೇನಾ ಬತ್ತಳಿಕೆಗೆ ಅಧಿಕೃತವಾಗಿ ಸೇರ್ಪಡೆಯಾಗಲಿವೆ.
ಕಳೆದ ಹಲವು ವರ್ಷಗಳಿಂದ ದೇಶದಲ್ಲಿ ಸದ್ದು ಮಾಡುತ್ತಿದ್ದ ಈ ರಾಫೆಲ್ ಯುದ್ಧ ವಿಮಾನ ವಿವಾದಗಳಿಂದಲೇ ಜನಪ್ರಿಯತೆ ಪಡೆದುಕೊಂಡಿತ್ತು. ಫ್ರಾನ್ಸ್‌ನ ಡಸಾಲ್ಟ್ ಏವಿಯೇಷನ್ ತಯಾರಿಸಿರುವ ಈ ಯುದ್ಧ ವಿಮಾನ ಖರೀದಿ ಒಪ್ಪಂದ ಭಾರತದ ಮಟ್ಟಿಗೆ ಅತ್ಯಂತ ಪ್ರಮುಖವಾಗಿತ್ತು. ವಾಯುಪಡೆ ಬಳಿ ಈಗ ಇರುವ ಹಲವು ಯುದ್ಧವಿಮಾನಗಳ ಆಯಸ್ಸು ಮುಗಿದಿದ್ದು, ಅವು ಬಳಕೆಗೆ ಯೋಗ್ಯವಲ್ಲ. ಅವೆಲ್ಲವನ್ನೂ ಗಮನದಲ್ಲಿರಿಸಿಕೊಂಡೇ ‘ಎಂಎಂಆರ್‌ಸಿಎ 126’ ಕಾರ್ಯಕ್ರಮವನ್ನು ರೂಪಿಸಲಾಗಿತ್ತು. ಹಳೆಯ ಯುದ್ಧವಿಮಾನಗಳ ಜಾಗದಲ್ಲಿ ಹೊಸವನ್ನು ತುಂಬಲೇಬೇಕು. ಇಲ್ಲದಿದ್ದಲ್ಲಿ ವಾಯುಪಡೆಯ ಸಾಮರ್ಥ್ಯವೇ ಕುಗ್ಗಿಹೋಗಲಿದೆ ಎಂದು ಹೇಳಲಾಗಿತ್ತು.
ಫ್ರೆಂಚ್ ಯುದ್ಧ ವಿಮಾನಕ್ಕೆ ಯಾಕಿಷ್ಟು ಮಹತ್ವ
ಸೇನಾ ತಜ್ಞರು ಅಭಿಪ್ರಾಯಪಟ್ಟಿರುವಂತೆ ರಾಫೆಲ್ ಯುದ್ಧ ವಿಮಾನವು ನಿಜಕ್ಕೂ ಗೇಮ್ ಚೇಂಜರ್.. ಕಣ್ಣಿಗೆ ಕಾಣದಷ್ಟು ದೂರದಿಂದಲೇ ಶುತ್ರಪಾಳಯದ ಗುರಿಗಳನ್ನು ಹೊಡೆದುರುಳಿಸಬಲ್ಲದು. ಜಗತ್ತಿನ ಅತ್ಯಾಧುನಿಕ ಯುದ್ಧವಿಮಾನ ಎಂಬ ಖ್ಯಾತಿ ಈ ರಾಫೆಲ್ ಗಿದೆ. ಅತ್ಯಂತ ಶಕ್ತಿಶಾಲಿ ಮತ್ತು ಭಾರವಾದ ಶಸ್ತ್ರಾಸ್ತ್ರಗಳನ್ನು ಹೊತ್ತೊಯ್ಯುವ ಸಾಮರ್ಥ್ಯ ಈ ಯುದ್ಧ ವಿಮಾನಕ್ಕಿದೆ. ಏಕಕಾಲಕ್ಕೇ ಹಲವು ಗುರಿಗಳನ್ನು ನಾಶ ಮಾಡುವ, ಅಣ್ವಸ್ತ್ರ ಸಿಡಿತಲೆಯ ಕ್ಷಿಪಣಿಗಳನ್ನು ಉಡ್ಡಯನ ಮಾಡುವ ಸಾಮರ್ಥ್ಯ ಕೂಡ ಇದೆ. ಒಂದು ರಫೇಲ್, ವೈರಿ ಪಡೆಯ ಹಲವು ಯುದ್ಧವಿಮಾನಗಳಿಗೆ ಸಮ. ಒಂದು ರಫೇಲ್ ಯುದ್ಧ ವಿಮಾನವನ್ನು ಎದುರಿಸಲು ವೈರಿ ಪಡೆಯು ಹಲವು ಯುದ್ಧ ವಿಮಾನಗಳನ್ನು ನಿಯೋಜಿಸಬೇಕು.
ಉದಾಹರಣೆಗೆ, ಈಗ, ಪಾಕಿಸ್ತಾನದ ಒಂದು ಎಫ್–16 ಯುದ್ಧವಿಮಾನ ಎದುರಿಸಲು ಭಾರತವು 2 ಸುಖೋಯ್ ವಿಮಾನ ನಿಯೋಜಿಸಬೇಕಾಗುತ್ತದೆ. ಮುಂದೆ, ಭಾರತದ ಒಂದು ರಾಫೆಲ್ ಲ್‌ಗೆ ಪಾಕಿಸ್ತಾನವು ಎರಡು ಎಫ್–16 ನಿಯೋಜಿಸಬೇಕಾಗುತ್ತದೆ. ಅಲ್ಲದೆ ರಾಫೆಲ್ ಯುದ್ಧ ವಿಮಾನವೂ ಚೀನಾದ ಜೆ-20 ಯುದ್ಧ ವಿಮಾನಗಳಿಗಿಂತ ಬಲಿಷ್ಠವಾಗಿದೆ. ಇದೇ ಕಾರಣಕ್ಕೆ ರಾಫೆಲ್ ಭಾರತಕ್ಕೆ ಆನೆಬಲ ಎಂದು ಹೇಳಲಾಗುತ್ತಿದೆ.
ಇನ್ನು ಆಕಾಶದಲ್ಲಿ ಹಾರುತ್ತಿರುವಾಗಲೇ ಎದುರಾಳಿ ವಿಮಾನಗಳಿಗೆ ಬಾಂಬ್ ಎಸೆಯುವ (ಏರ್ ಟು ಏರ್), ಆಕಾಶದಿಂದ ಭೂಮಿಯ ಮೇಲಿರುವ ಗುರಿಗೆ ಬಾಂಬ್ ಹಾಕುವ (ಏರ್ ಟು ಅರ್ಥ್), ಭಾರತದ ವೈವಿಧ್ಯಮಯ ಹವಾಮಾನದಲ್ಲಿ ಕಾರ್ಯನಿರ್ವಹಿಸಬಲ್ಲ, ಕಣ್ಣಿಗೆ ಕಾಣಿಸದಷ್ಟು ದೂರದಿಂದ ದಾಳಿ ನಡೆಸಬಲ್ಲ (ಸ್ಟಾಂಡ್ ಆಫ್ ಸಾಮರ್ಥ್ಯ) ವೈಶಿಷ್ಟ್ಯತೆಗಳನ್ನು ಹೊಂದಿರುವುದರಿಂದ ರಾಫೆಲ್ ಯುದ್ಧ ವಿಮಾನ ಭಾರತಕ್ಕೆ ಅತ್ಯಂತ ಮಹತ್ವದ್ದಾಗಿದೆ.
ಅಣ್ವಸ್ತ್ರ ಸಿಡಿತಲೆ ಇರುವ ಕ್ಷಿಪಣಿಗಳನ್ನು ಉಡ್ಡಯನ ಮಾಡುವ ಸಾಮರ್ಥ್ಯ ಈ ಯುದ್ಥ ವಿಮಾನಕ್ಕಿದ್ದು, ಮುಂದಿನ ತಲೆಮಾರಿನ ಬ್ರಹ್ಮೋಸ್ ಕ್ರೂಸ್ ಕ್ಷಿಪಣಿಗಳನ್ನು ಅಳವಡಿಸಲು ಚಿಂತನೆ ನಡೆಲಾಗಿದೆ.
ರಾಫೆಲ್ ನಲ್ಲಿ ಏನೇನಿದೆ?
ರಾಫೆಲ್ ಮುಂದಿನ ತಲೆ ಮಾರಿನ ಅತ್ಯಾಧುನಿಕ ಯುದ್ಧ ವಿಮಾನವಾಗಿದ್ದು, ಆಗಸದಿಂದ ನೆಲಕ್ಕೆ ದಾಳಿಯಿಡುವ ಸಾಮರ್ಥ್ಯದ ಫ್ರೆಂಚ್ ಹ್ಯಾಮರ್ (Highly Agile and Manoeuvrable Munition Extended Range), ಆಗಸದಿಂದ ಆಗಸಕ್ಕೆ ಚಿಮ್ಮುವ ಕ್ಷಿಪಣಿ, ಕ್ರೂಸ್ ಕ್ಷಿಪಣಿ, ಇಸ್ರೇಲ್ ನಿರ್ಮಿತ ಹೆಲ್ಮೆಟ್, ರಾಡಾರ್ ಮುನ್ನೆಚ್ಚರಿಕಾ ರಿಸೀವರ್ ಮತ್ತು ಜಾಮರ್ ಗಳಿವೆ.
ಅಂತೆಯೇ ಸತತ 10-ಗಂಟೆಗಳ ಹಾರಾಟದ ದತ್ತಾಂಶ ರೆಕಾರ್ಡಿಂಗ್ ಸಾಮರ್ಥ್ಯ ಮತ್ತು ಇನ್ಫ್ರಾ-ರೆಡ್ ಸರ್ಚ್ ಮತ್ತು ಟ್ರ್ಯಾಕಿಂಗ್ ವ್ಯವಸ್ಥೆ ವಿಮಾನದಲ್ಲಿದ್ದು, ಈ ಹಿಂದೆ ಏರ್ ಸ್ಟ್ಕೈರ್ ವೇಳೆ ಬಾಲಾಕೋಟ್ ಉಗ್ರನೆಲೆಗಳನ್ನು ಧ್ವಂಸ ಮಾಡಿದ್ದ ಇಸ್ರೇಲ್ ನಿರ್ಮಿತ ಸ್ಪೈಸ್ 2000 ಬಾಂಬ್ ಗಳನ್ನೂ ಕೂಡ ರಾಫೆಲ್ ಹೊಂದಿದೆ.
Comments are closed.