ಬೆಂಗಳೂರು (ಜು. 28): ಫೇಸ್ಬುಕ್, ಯೂಟ್ಯೂಬ್, ಇನ್ಸ್ಟಾಗ್ರಾಂ ಮುಂತಾದ ಸಾಮಾಜಿಕ ಮಾಧ್ಯಮಗಳನ್ನು ದುರ್ಬಳಕೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಹಣಕ್ಕಾಗಿ ಆನ್‌ಲೈನ್‌ನಲ್ಲಿ ಅಪ್ರಾಪ್ತರ ಅಶ್ಲೀಲ ವಿಡಿಯೋ ಹಾಕುತ್ತಾ, ಬ್ಲಾಕ್ಮೇಲ್ ಮಾಡುತ್ತಿದ್ದ ಯುವಕನನ್ನು ಬೆಂಗಳೂರು ಸೈಬರ್ ಕ್ರೈಂ ವಿಭಾಗದ ಪೊಲೀಸರ ಬಂಧಿಸಿದ್ದಾರೆ. ಉಡುಪಿ ಮೂಲದ ಸೌರವ್ ಶೆಟ್ಟಿ ಎಂಬಾತನನ್ನು ಬಂಧನ ಮಾಡಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಬಂಧಿತ ಸೌರವ್ ಶೆಟ್ಟಿಯ ಬಗ್ಗೆ ನ್ಯಾಷನಲ್ ಕ್ರೈಂ ರೆಕಾರ್ಡ್ ಬ್ಯೂರೋ ಕರ್ನಾಟಕದ ಸಿಐಡಿ ನೋಡಲ್ ಅಧಿಕಾರಿಗಳಿಗೆ ಮಾಹಿತಿ ನೀಡಿತ್ತು. ಅದರಂತೆ ಸಿಐಡಿ ಅಧಿಕಾರಿಗಳು ದೂರು ದಾಖಲಿಸಿಕೊಂಡಿದ್ದರು. ನಂತರ ಯಾವ ಯಾವ ವೆಬ್ಸೈಟ್ಗಳಿಗೆ ಲಿಂಕ್ ಪೋಸ್ಟ್ ಮಾಡುತ್ತಿದ್ದ ಎಂಬ ಬಗ್ಗೆ ಮಾಹಿತಿ ಕಲೆಹಾಕಿದ್ದರು. ಈ ವೇಳೆ ಅಧಿಕಾರಿಗಳಿಗೆ ಆರೋಪಿ ಇನ್ಸ್ಟಾಗ್ರಾಂ ಮೂಲಕ ಅಶ್ಲೀಲ ವಿಡಿಯೋ ಲಿಂಕ್ ರವಾನಿಸಿ ಬ್ಲಾಕ್ಮೇಲ್ ಮಾಡಿ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದ ಎಂಬುದು ಗೊತ್ತಾಗಿತ್ತು.
ವೆಬ್ ಲಿಂಕ್ ಮಾಹಿತಿ ಆಧರಿಸಿ ಉಡುಪಿಯಲ್ಲಿದ್ದ ಸೌರಭ್ ಶೆಟ್ಟಿಯನ್ನು ಸಿಐಡಿಯ ಸೈಬರ್ ಕ್ರೈಂ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ತನಿಖೆ ವೇಳೆ ಆರೋಪಿ ಆನ್‌ಲೈನ್ ಸ್ಟೋರೇಜ್ನಲ್ಲಿಯೂ ವಿಡಿಯೋಗಳನ್ನು ಸಂಗ್ರಹಿಸಿಟ್ಟಿರುವುದು ಪತ್ತೆಯಾಗಿದೆ. ಅದರಂತೆ ಅಶ್ಲೀಲ ವಿಡಿಯೋ ಸಂಗ್ರಹಿಸಿಟ್ಟಿದ್ದ ಡಿಜಿಟಲ್ ಉಪಕರಣಗಳು, ಕ್ಲೌಡ್ ಖಾತೆಗಳನ್ನು ಜಪ್ತಿ ಮಾಡಿದ್ದಾರೆ. ಪ್ರಕರಣದಲ್ಲಿ ಅನ್ಯ ರಾಜ್ಯಗಳ ವ್ಯಕ್ತಿಗಳು ಸಾಕಷ್ಟು ಜನರು ಭಾಗಿಯಾಗಿರುವ ಮಾಹಿತಿ ಸಹ ವಿಚಾರಣೆ ವೇಳೆ ಬಯಲಾಗಿದೆ. ಆದರೆ, ಯಾರ್ಯಾರು ಎಂಬ ಬಗ್ಗೆ ಪೊಲೀಸರು ಮಾಹಿತಿ ಕೊಟ್ಟಿಲ್ಲ.
ಆದರೆ, ಪ್ರಕರಣದಲ್ಲಿ ಭಾಗಿಯಾಗಿರುವ ಬಗ್ಗೆ ಈಗಾಗಲೇ ಮಾಹಿತಿ ಕಲೆಹಾಕಿದ್ದು ಆಯಾ ರಾಜ್ಯಗಳ ಸಂಬಂಧಪಟ್ಟ ನೋಡಲ್ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿದೆ. ಒಟ್ಟಿನಲ್ಲಿ ಅಪ್ರಾಪ್ತರ ಅಶ್ಲೀಲ ವಿಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಾಕಿ ಹಣ ಮಾಡುತ್ತಿದ್ದ ಗ್ಯಾಂಗ್ನ ಪ್ರಮುಖ ಸದಸ್ಯ ಸಿಕ್ಕಿದ್ದು ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
Comments are closed.