ಕರ್ನಾಟಕ

ಪಾಕ್ ಪರ ಘೋಷಣೆ ಕೂಗಿದ್ದ ಅಮೂಲ್ಯ ಲಿಯಾನ್ ವಿರುದ್ಧ ದೇಶದ್ರೋಹ ಪ್ರಕರಣ: ಎನ್ ಐಎ ತನಿಖೆಗೆ ಹೈಕೋರ್ಟ್ ನಕಾರ

Pinterest LinkedIn Tumblr


ಬೆಂಗಳೂರು: 19 ವರ್ಷದ ಕಾಲೇಜ್ ವಿದ್ಯಾರ್ಥಿನಿ ಅಮೂಲ್ಯ ಲಿಯಾನ್ ವಿರುದ್ಧದ ದೇಶದ್ರೋಹ ಪ್ರಕರಣವನ್ನು ರಾಷ್ಟ್ರೀಯ ತನಿಖಾ ಏಜೆನ್ಸಿಗೆ (ಎನ್ ಐಎ) ವರ್ಗಾಯಿಸಬೇಕೆಂದು ಮಂಡ್ಯದ ವಕೀಲರೊಬ್ಬರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್ ಮಂಗಳವಾರ ವಜಾಗೊಳಿಸಿದೆ.

ಇದು ಎನ್ ಐಎ ತನಿಖೆಗೆ ವಹಿಸುವಂತಹ ಪ್ರಕರಣವಲ್ಲಾ ಎಂದು ಅಭಿಪ್ರಾಯಪಟ್ಟ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಒಕಾ ಮತ್ತು ನ್ಯಾಯಾಧೀಶ ಹೆಚ್. ಪಿ. ಸಂದೇಶ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಆಕೆಗೆ ಜಾಮೀನು ಮಂಜೂರಾತಿಯನ್ನು ರದ್ದುಗೊಳಿಸುವಂತೆ ಅಥವಾ ಚಾರ್ಜ್ ಶೀಟ್ ದಾಖಲಿಸಲು ವಿಳಂಬ ಮಾಡುತ್ತಿರುವ ತನಿಖಾ ಅಧಿಕಾರಿಗಳ ವಿರುದ್ಧ ತನಿಖೆಗೆ ಆದೇಶಿಸುವಂತೆ ಮ್ಯಾಜಿಸ್ಟ್ರೇಟ್ ಕೋರ್ಟ್ ಗೆ ಆದೇಶಿಸಿದೆ.

ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಫೆಬ್ರವರಿ 21 ರಂದು ಸಿಎಎ ವಿರುದ್ಧದ ಸಮಾವೇಶದಲ್ಲಿ ಪಾಕಿಸ್ತಾನ ಜಿಂದಾಬಾದ್ ಎಂದು ಘೋಷಣೆ ಕೂಗಿದ ಅಮೂಲ್ಯಳನ್ನು ಬಂಧಿಸಿದ ನಗರ ಪೊಲೀಸರು ಆಕೆಯ ವಿರುದ್ಧ ದೇಶದ್ರೋಹ ಪ್ರಕರಣವನ್ನು ದಾಖಲಿಸಿದ್ದರು. ಜೂನ್ ನಲ್ಲಿ ಜಾಮೀನಿನ ಮೇಲೆ ಆಕೆ ಜೈಲಿನಿಂದ ಹೊರಗೆ ಬಂದಿದ್ದಾಳೆ.

ಜೂನ್. 16 ರಂದು ಹೆಚ್.ಎಲ್. ವಿಶಾಲ ರಘು ಎಂಬುವರು ಸಲ್ಲಿಸಿದ್ದ ಅರ್ಜಿಯನ್ನು ಏಕ ಸದಸ್ಯ ಪೀಠ, ವಿಭಾಗೀಯ ಪೀಠಕ್ಕೆ ವರ್ಗಾಯಿಸಿತ್ತು.ಅಮೂಲ್ಯ ಭಾಷಣದ ಹಿಂದೆ ಸಲಹಾ ಸಮಿತಿ ಇದೆಯೇ? ಅದು ಉಗ್ರ ಸಂಘಟನೆಯೊಂದಿಗೆ ನಂಟು ಹೊಂದಿರುವುದೇ
ಎಂಬುದರ ಬಗ್ಗೆ ದೃಢಪಡಿಸಿಕೊಳ್ಳಬೇಕಾಗಿದೆ ಎಂದು ರಘು ಅರ್ಜಿಯಲ್ಲಿ ಹೇಳಿದ್ದರು.

ಈ ಮಧ್ಯೆ ಜೆಎಂಎಫ್ ಸಿ ಮತ್ತು ಸೆಷನ್ಸ್ ಕೋರ್ಟ್ ನಲ್ಲಿ ಅಮೂಲ್ಯ ವಿರುದ್ದದ ದೇಶದ್ರೋಹ ಪ್ರಕರಣದ ಪರ ವಾದ ಮಂಡಿಸಲು ಐಎಸ್ ಪ್ರಮೋದ್ ಚಂದ್ರ ಅವರನ್ನು ವಿಶೇಷ ಪಬ್ಲಿಕ್ ಪ್ಯಾಸಿಕ್ಯೂಟರ್ ಆಗಿ ರಾಜ್ಯಸರ್ಕಾರ ನೇಮಕ ಮಾಡಿದೆ.

Comments are closed.