ಕರ್ನಾಟಕ

ಮನೆ ಬಾಗಿಲಿಗೇ ಕಬ್ಬಿಣದ ಶೀಟ್ ಹೊಡೆದು ಸೀಲ್ಡೌನ್; ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಾರ್ವಜನಿಕರು

Pinterest LinkedIn Tumblr

ಬೆಂಗಳೂರು: ದೊಮ್ಮಲೂರಿನ ಅಪಾರ್ಟ್’ಮೆಂಟ್ ವೊಂದರಲ್ಲಿ ವ್ಯಕ್ತಿಯೊಬ್ಬರಿಗೆ ಕೊರೋನಾ ಪಾಸಿಟಿವ್ ಬಂದ ಹಿನ್ನೆಲೆಯಲ್ಲಿ ಮನೆ ಬಾಗಿಲಿಗೇ ಕಬ್ಬಿಣದ ಶೀಟ್ ಹೊಡೆಯುವ ಮೂಲಕ ಸೀಲ್ಡೌನ್ ಮಾಡಿದ್ದ ಬಿಬಿಎಂಪಿ ಅಧಿಕಾರಿಗಳ ವಿರುದ್ಧ ಸಾರ್ವಜನಿಕುರು ತೀವ್ರ ಕಿಡಿಕಾರಲು ಆರಂಭಿಸಿದ್ದಾರೆ.

ಮನೆ ಬಾಗಿಲಿಗೇ ಕಬ್ಬಿಣದ ಶೀಟ್ ಹೊಡೆದು ಸೀಲ್ಡೌನ್ ಮಾಡಿರುವ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಫೋಟೋಗಳನ್ನು ಹಾಕಿರುವ ಸ್ಥಳೀಯರು ಬಿಬಿಎಂಪಿ ವಿರುದ್ಧ ತೀವ್ರವಾಗಿ ಕಿಡಿಕಾರುತ್ತಿದ್ದಾರೆ.

ಒಂದು ಮನೆಯಲ್ಲಿ ಇಬ್ಬರು ಮಕ್ಕಳು ಮತ್ತು ಮಹಿಳೆ ಇದ್ದಾರೆ, ಪಕ್ಕದ ಮನೆಯಲ್ಲಿ ಇಬ್ಬರು ವಯಸ್ಸಾದ ವ್ಯಕ್ತಿಗಳು ವಾಸಿಸುತ್ತಿದ್ದಾರೆ. ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡರೆ ಅವರೇನು ಮಾಡಬೇಕು. ಕೊರೋನಾ ನಿಯಂತ್ರಣಕ್ಕೆ ಕಂಟೈನ್ಮೆಂಟ್ ಮಾಡಬೇಕು. ನಿಜ, ಆದರೆ ಇದು ಅತಿರೇಕದ ಪರಮಾವಧಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿ ವೈರಲ್ ಆಗುತ್ತಿದ್ದಂತೆಯೇ ಗಮನಹರಿಸಿದ ಬಿಬಿಎಂಪಿ ಅಧಿಕಾರಿಗಳು, ಕೂಡಲೇ ಸ್ಥಳಕ್ಕೆ ಧಾವಿಸಿ ಶೀಟ್ ಗಳನ್ನು ತೆರವುಗೊಳಿಸಿದ್ದಾರೆ.

ಘಟನೆಗೆ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಪ್ರತಿಕ್ರಿಯೆ ನೀಡಿರುವ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಅವರು, ಬ್ಯಾರಿಕೇಡ್’ನ್ನು ಕೂಡಲೇ ತೆರವುಗೊಳಿಸಲಾಗುತ್ತಿದೆ. ಪ್ರತೀಯೊಬ್ಬರನ್ನೂ ಗೌರವದಿಂದ ಕಾಣಲು ನಾವು ಬದ್ಧರಾಗಿದ್ದೇವೆ. ಕಂಟೈನ್ಮೆಂಟ್ ಪ್ರದೇಶಗಳನ್ನು ಸೀಲ್’ಡೌನ್ ಮಾಡುವಾಗ ಸರ್ಕಾರ ರೂಪಿಸಿರುವ ಮಾದರಿ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆಂದು ಹೇಳಿದ್ದಾರೆ.

Comments are closed.