ಕರ್ನಾಟಕ

ಭೀಮಾತೀರದಲ್ಲಿ 5 ಕೋಟಿಗಾಗಿ ಚಿನ್ನದ ವ್ಯಾಪಾರಿಗೆ ಜೀವ ಬೆದರಿಕೆ; ಭಾಗಪ್ಪ ಹರಿಜನ, ಮಹಾದೇವ ಸಾಹುಕಾರ್ ಸೇರಿ ಮೂವರ ವಿರುದ್ಧ ಕೇಸ್!

Pinterest LinkedIn Tumblr


ಚಡಚಣ: ವಿಜಯಪುರ ಜಿಲ್ಲೆಯ ಭೀಮಾತೀರದಲ್ಲಿ ಗುಂಡಿನ ಶಬ್ಧ, ಕೊಲೆ, ಅಪಹರಣ ಪ್ರಕರಣಗಳು ಆಗಾಗ ಕೇಳಿ ಬರುತ್ತಿರುತ್ತವೆ. ಇದೀಗ 5 ಕೋಟಿ ಹಣಕ್ಕಾಗಿ ಚಿನ್ನದ ವ್ಯಾಪಾರಿಯೊಬ್ಬರಿಗೆ ಜೀವ ಬೆದರಿಕೆ ಹಾಕಿರುವ ಸುದ್ದಿ ಭೀಮಾತೀರದ ಜನರಲ್ಲಿ ಸಂಚಲನ ಮೂಡಿಸಿದೆ.

ಇಂಡಿ ಪಟ್ಟಣದ ಚಿನ್ನದ ವ್ಯಾಪಾರಿ ನಾಮದೇವ ಡಾಂ ಅವರ ದೂರಿನ ಮೇರೆಗೆ ಇಂಡಿ ಪಟ್ಟಣದ ಹೋಟೆಲ್​ ಉದ್ಯಮಿ ಲಕ್ಷ್ಮೀಕಾಂತ ಪಾಟೀಲ ಎಸ್​. ಪಾಟೀಲ (ಕಾಂತುಗೌಡ), ಭೀಮಾತೀರದ ಹಂತಕ ಚಂದಪ್ಪ ಹರಿಜನನ ಬಲಗೈ ಬಂಟನಾಗಿದ್ದ ಭಾಗಪ್ಪ ಹರಿಜನ ಮತ್ತು ಭೀಮಾತೀರದ ಹಂತಕ ಮಹಾದೇವ ಸಾಹುಕಾರ್ ಭೈರಗೊಂಡ ವಿರುದ್ಧ ಚಡಚಣ ಪೊಲೀಸ್​ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

”ಜು.19ರಂದು ‘ನಿನ್ನ ಬಳಿ ಏನೋ ಮಾತನಾಡುವುದಿದೆ’ ಎಂದ ಕೆರೂರ ಗ್ರಾಮದ ಮಹಾದೇವ್ ಸಾಹುಕಾರ್ ಭೈರಗೊಂಡ ನನ್ನನ್ನು ಅವರ ತೋಟದ ಮನೆಗೆ ಕರೆಸಿಕೊಂಡರು. ಅಲ್ಲಿ ಭೈರಗೊಂಡ ಜತೆಗೆ ಲಕ್ಷ್ಮೀಕಾಂತ ಎಸ್​. ಪಾಟೀಲ, ಭಾಗಪ್ಪ ಹರಿಜನ ಕೂಡ ಇದ್ದರು. ನನ್ನ ಮುಖ ಕಂಡ ಕೂಡಲೇ ಲಕ್ಷ್ಮೀಕಾಂತ ಮತ್ತು ಬಾಗಪ್ಪ ಅವಾಚ್ಯವಾಗಿ ನಿಂದಿಸಿದರು. ‘ಇನ್ನೆರಡು ದಿನಗಳಲ್ಲಿ ನಮಗೆ 5 ಕೋಟಿ ರೂ. ಇಲ್ಲವೇ 3 ಕೆ.ಜಿ. ಚಿನ್ನ ತಂದುಕೊಡಬೇಕು’ ಎಂದು ಬೇಡಿಕೆ ಇಟ್ಟರು. ‘ಇದಕ್ಕೆ ತಪ್ಪಿದ್ದಲ್ಲಿ ನಿನ್ನ ತಲೆ ತೆಗೆಯುವೆ’ ಎಂದು ಭಾಗಪ್ಪ ಹರಿಜನ ಬೆದರಿಕೆ ಹಾಕಿದರು. ಅಲ್ಲದೆ, ‘ಹಾಡಹಗಲೇ ನಿನ್ನ ಮನೆಗೆ ನುಗ್ಗಿ ನಿನ್ನ ಹಣೆಗೆ ಗುಂಡಿಟ್ಟು ಸಾಯಿಸುವೆ’ ಎಂದು ಲಕ್ಷ್ಮೀಕಾಂತ ಕೂಡ ಜೀವಬೆದರಿಕೆ ಹಾಕಿದರು. ‘ಈ ವಿಷಯ ಪೊಲೀಸರಿಗೆ ಅಥವಾ ಇನ್ನಾರಿಗಾದರೂ ತಿಳಿಸಿದ್ದೇ ಆದಲ್ಲಿ ನಿನ್ನ ಅಂಗಡಿ, ಮನೆ ಲೂಟಿ ಮಾಡಿ ಇಡೀ ಕುಟುಂಬವನ್ನೇ ಸರ್ವನಾಶ’ ಮಾಡುತ್ತೇವೆ ಎಂದು ಎಚ್ಚರಿಸಿದರು” ಎಂದು ದೂರಿನಲ್ಲಿ ಚಿನ್ನದ ವ್ಯಾಪಾರಿ ನಾಮದೇವ ಡಾಂ ವಿವರಿಸಿದ್ದಾರೆ.

”ಅವರು ಬೆದರಿಕೆ ಹಾಕುತ್ತ ನನ್ನನ್ನು ಜತೆಯಲ್ಲೇ ಕರೆದುಕೊಂಡು ಹೋಗಲು ಯತ್ನಿಸಿದರು. ಈ ವೇಳೆ ಸ್ಥಳದಲ್ಲೇ ಇದ್ದ ಮಹಾದೇವ ಸಾಹುಕಾರ್ ಭೈರಗೊಂಡ, ‘ಈ ವ್ಯಾಪಾರಿಯನ್ನು ಕರೆಸಿದ್ದು ನಾನು. ನನ್ನ ಮನೆಯಲ್ಲಿ ನಿಮ್ಮ ಗೂಂಡಾಗಿರಿ ಬೇಡ. ಹೊರಗಡೆ ಹೋಗಿ ಏನಾದರೂ ಮಾಡಿಕೊಳ್ಳಿ’ ಎನ್ನುತ್ತ ಅವರಿಂದ ನನ್ನನ್ನು ಬಿಡಿಸಿ, ತದ್ದೇವಾಡಿ ಗ್ರಾಮದ ನನ್ನ ಸಂಬಂಧಿಕರ ಮನೆಗೆ ಸುರಕ್ಷಿತವಾಗಿ ಕಳುಹಿಸಿದರು” ಎಂದು ದೂರಿನಲ್ಲಿ ವ್ಯಾಪಾರಿ ತಿಳಿಸಿದ್ದಾರೆ.

ಆರೋಪಿ ಸಾಹುಕಾರ್ ಭೈರಗೊಂಡನನ್ನು ಬುಧವಾರ ಪೊಲೀಸರು ಬಂಧಿಸಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಇನ್ನುಳಿದ ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದು, ಸೂಕ್ತ ತನಿಖೆ ನಡೆಸಲಾಗುತ್ತಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನುಪಮ್ ಅಗರವಾಲ್ ತಿಳಿಸಿದ್ದಾರೆ.

ಕಳೆದ ವರ್ಷ ಜು.22ರಂದು ಮಹಾದೇವ ಸಾಹುಕಾರ್​ನ ಜನ್ಮದಿನದಂದು ಆಗಿನ ಸಿಪಿಐ ಎಂ.ಬಿ. ಆಸೂಡೆ ಹಾಗೂ ಪಿಎಸ್​ಐ ಗೋಪಾಲ ಹಳ್ಳೂರ ಪಾಲ್ಗೊಂಡು ಕೇಕ್​ ಕತ್ತರಿಸಿದ ಸುದ್ದಿ ರಾಜ್ಯಾದ್ಯಂತ ಸದ್ದು ಮಾಡಿತ್ತು. ಈ ವರ್ಷದ ಭೈರಗೊಂಡ ಅವರ ಜನ್ಮದಿನದಂದು ಹಣಕ್ಕಾಗಿ ಬೇಡಿಕೆ ಇಟ್ಟ ಪ್ರಕರಣ ಬೆಳಕಿಗೆ ಬಂದಿದ್ದು, ಭೀಮಾ ತೀರದ ಜನರಲ್ಲಿ ಸಂಚಲನ ಮೂಡಿಸಿದೆ.

Comments are closed.