ಕರ್ನಾಟಕ

ಶ್ರೀರಾಮುಲು ಕೊಟ್ಟ ಲೆಕ್ಕವು ಸತ್ಯ ಹೇಳುವ ಬದಲು ಸುಳ್ಳನ್ನು ಮುಚ್ಚಿಡಲು ಪರದಾಟ – ಸಿದ್ದರಾಮಯ್ಯ

Pinterest LinkedIn Tumblr


ಬೆಂಗಳೂರು(ಜು.20): ಕೋವಿಡ್‌ -19 ಉಪಕರಣಗಳ ಖರೀದಿಯಲ್ಲಿ 2,200 ಕೋಟಿ ರೂ. ಅವ್ಯವಹಾರ ನಡೆದಿದೆ ಎಂಬ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆರೋಪಕ್ಕೆ ಆರೋಗ್ಯ ಸಚಿವ ಬಿ ಶ್ರೀರಾಮುಲು ಉತ್ತರ ನೀಡಿದ್ದರು. ಈ ಬೆನ್ನಲ್ಲೀಗ ಆರೋಗ್ಯ ಸಚಿವ ಬಿ. ಶ್ರೀರಾಮುಲು ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

ಆರೋಗ್ಯ ಸಚಿವ ಬಿ. ಶ್ರೀರಾಮುಲು ವಿರುದ್ಧ ಸರಣಿ ಟ್ವೀಟ್​​ಗಳ ಮೂಲಕ ದಾಳಿ ನಡೆಸಿರುವ ಸಿದ್ದರಾಮಯ್ಯ ಹೀಗೆ ಬರೆದುಕೊಂಡಿದ್ದಾರೆ. ಕೊರೋನಾ ನಿಯಂತ್ರಣದಲ್ಲಿನ ಅವ್ಯವಹಾರದ ಬಗೆಗಿನ ನನ್ನ ಆರೋಪಕ್ಕೆ ಪತ್ರಿಕಾಗೋಷ್ಠಿಯಲ್ಲಿ ಉತ್ತರ ನೀಡಲು ಪ್ರಯತ್ನಿಸಿರುವ ಆರೋಗ್ಯ ಸಚಿವ ಶ್ರೀರಾಮುಲು ಮತ್ತು ಉಪಮುಖ್ಯಮಂತ್ರಿ ಅಶ್ವಥ್ ನಾರಾಯಣ ಅವರು ಸತ್ಯವನ್ನು ಬಿಚ್ಚಿಡುವ ಬದಲಿಗೆ ಸುಳ್ಳನ್ನು ಮುಚ್ಚಿಡಲು ಪರದಾಡಿದ್ದಾರೆ ಎಂದು ಆರೋಪಿಸಿದ್ಧಾರೆ.

ನಾನು ಕೇಳಿರುವ ಯಾವ ಪ್ರಶ್ನೆಗಳಿಗೆ ಸಚಿವರು ಉತ್ತರ ನೀಡಿದ್ದಾರೆನ್ನುವುದು ನನಗೆ ತಿಳಿದಿಲ್ಲ. ರಾಜ್ಯ ಸರ್ಕಾರದ ಲಿಖಿತ ಸ್ಪಷ್ಟನೆ ಕೈ ಸೇರಿದ ನಂತರ ವಿವರವಾಗಿ ಪ್ರತಿಕ್ರಿಯಿಸುವೆ. ಆದರೆ, ಪತ್ರಿಕಾಗೋಷ್ಠಿಯಲ್ಲಿ ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಕಾಣಲಿಲ್ಲ. ಸರ್ಕಾರದೊಳಗೊಂದು ಸರ್ಕಾರ ಇದೆಯೇ? ಎಂದು ಪ್ರಶ್ನಿಸಿದ್ಧಾರೆ.

ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಒಟ್ಟು ರೂ.323 ಕೋಟಿ ಖರ್ಚು ಮಾಡಿದೆ ಎಂದು ಶ್ರೀರಾಮುಲು ತಿಳಿಸಿದ್ದಾರೆ. ಆದರೆ ಅವರು ನೀಡಿರುವ ಲೆಕ್ಕವನ್ನು ಎಷ್ಟೇ ಕೂಡಿಸಿ ಕಳೆದರೂ ಅದು 100 ಕೋಟಿ ರೂಪಾಯಿ ದಾಟುವುದಿಲ್ಲ ಎಂದು ಮತ್ತೊಂದು ಟ್ವೀಟ್​​ನಲ್ಲಿ ಸಿದ್ದರಾಮಯ್ಯ ಕುಟುಕಿದ್ಧಾರೆ.

ಉಳಿದ ದುಡ್ಡಿಗೆ ಲೆಕ್ಕ ಎಲ್ಲಿದೆ? ಪಿಎಂ ಕೇರ್ಸ್​ನಲ್ಲಿ ಕೇಂದ್ರ ಸರ್ಕಾರ ತಲಾ ರೂ.4 ಲಕ್ಷ ಕೊಟ್ಟು ವೆಂಟಿಲೇಟರ್ ಖರೀದಿಸಿದೆ. ನಮ್ಮಲ್ಲಿ ಮಾತ್ರ ವೆಂಟಿಲೇಟರ್‌ಗಳನ್ನು 12 ರಿಂದ 18 ಲಕ್ಷ ರೂಪಾಯಿ ವರೆಗೆ ನೀಡಿ ಖರೀದಿಸಲಾಗಿದೆ. ಅಂತಹ ವಿಶೇಷತೆ ಈ ವೆಂಟಿಲೇಟರ್​​ಗಳಲ್ಲೇನಿದೆ? ಇವುಗಳ ಬೆಲೆಯಲ್ಲಿ ಯಾಕೆ ಇಷ್ಟೊಂದು ವ್ಯತ್ಯಾಸ? ಎಂದು ಖಡಕ್​​ ಆಗಿ ಕೇಳಿದ್ದಾರೆ.

ಆರೋಗ್ಯ ಸಚಿವರು ಮತ್ತು ಉಪಮುಖ್ಯಮಂತ್ರಿಗಳಿಬ್ಬರೂ ಖರೀದಿ ಮಾಡಿರುವ ಸಲಕರಣೆಗಳ ದುಬಾರಿ ದರವನ್ನು ಸಮರ್ಥಿಸುತ್ತಾ, ದರ ವ್ಯತ್ಯಾಸಕ್ಕೆ ಗುಣಮಟ್ಟದಲ್ಲಿನ ವ್ಯತ್ಯಾಸ ಕಾರಣ ಎಂದು ಹೇಳಿದ್ದಾರೆ. ಆದರೆ ಇದನ್ನು ತಾಂತ್ರಿಕವಾಗಿ ಸಮರ್ಥಿಸುವ ಯಾವ ದಾಖಲೆಗಳನ್ನು ಯಾಕೆ ನೀಡಿಲ್ಲ? ಎಂದು ಪುನರ್​​ ಪ್ರಶ್ನಿಸಿದ್ಧಾರೆ.

ಹೀಗೆ ಮುಂದುವರಿದ ಅವರು, ನಾನು ಕೊರೋನಾ ನಿಯಂತ್ರಣದ ಸಲಕರಣೆಗಳ ಲೆಕ್ಕ ಮಾತ್ರ ಕೇಳಿದ್ದಲ್ಲ. ಆಹಾರ ಧಾನ್ಯ, ಮತ್ತು ಆಹಾರ ಸಾಮಗ್ರಿಗಳ ಕಿಟ್, ಮತ್ತು ಆಸ್ಪತ್ರೆಗಳಿಗೆ‌ ಖರೀದಿಸಲಾದ ಬೆಡ್​ಗಳ ಬೆಲೆ, ಕ್ವಾರಂಟೈನ್ ಕೇಂದ್ರಗಳು, ಐಸೋಲೇಷನ್ ವಾರ್ಡ್​ಗಳಿಗೆ ಆಗಿರುವ ಖರ್ಚಿನ ವಿವರವನ್ನೂ ಕೇಳಿದ್ದೇನೆ. ಆ ಲೆಕ್ಕ‌ ಎಲ್ಲಿದೆ? ಕೊಡಿ ಎಂದು ಆಗ್ರಹಿಸಿದ್ದಾರೆ.

Comments are closed.