ಕರ್ನಾಟಕ

ಕೋಲಾರ: ತಮ್ಮನಿಗೆ ಕೊರೋನಾ ಬಂತೆಂದು ಅಣ್ಣ ಆತ್ಮಹತ್ಯೆ

Pinterest LinkedIn Tumblr


ಕೋಲಾರ (ಜು. 19): ಮನುಕುಲಕ್ಕೆ ಮಾರಕವಾಗಿರುವ ಮಹಾಮಾರಿ ಕೊರೋನಾ ಸೋಂಕು ಪ್ರಪಂಚವನ್ನೇ ತಲ್ಲಣಗೊಳ್ಳುವಂತೆ ಮಾಡಿದೆ. ರಾಜ್ಯದಲ್ಲೂ ಕೊರೋನಾ ಅಟ್ಟಹಾಸ ದಿನೇದಿನೆ ಕೈ ಮೀರಿ ಹರಡುತ್ತಿದ್ದು, ಸಾವಿನ ಪ್ರಮಾಣವೂ ಹೆಚ್ಚುತ್ತಿದೆ. ಇನ್ನು ತಮ್ಮನಿಗೆ ಕೊರೋನಾ ಬಂದಿದೆಯೆಂದು ಖಿನ್ನತೆಗೆ ಒಳಗಾದ ಅಣ್ಣ, ಮನೆಯಲ್ಲೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗುವ ಮೂಲಕ ಸಾವನ್ನಪ್ಪಿದ್ದಾರೆ. ಕೋಲಾರ ನಗರದ ಗಾಂಧೀನಗರ ಬಡಾವಣೆಯ 13ನೇ ಕ್ರಾಸ್‍ನಲ್ಲಿ , ಶನಿವಾರ ರಾತ್ರಿ 9 ಗಂಟೆ ಸುಮಾರಿಗೆ ಘಟನೆ ನಡೆದಿದ್ದು, 37 ವರ್ಷದ ನಾಗರಾಜ್ ಆತ್ಮಹತ್ಯೆ ಮಾಡಿಕೊಂಡಿರುವ ದುರ್ದೈವಿಯಾಗಿದ್ದಾರೆ.

ನಿನ್ನೆ ಮಧ್ಯಾಹ್ನ ಮೃತ ನಾಗರಾಜ್ ಅವರ ಸಹೋದರ, 32 ವರ್ಷದ ವ್ಯಕ್ತಿಗೆ ಸೋಂಕು ದೃಢವಾಗಿತ್ತು. ಖುದ್ದು ಅವರೇ ಜಿಲ್ಲಾ ಸರ್ಕಾರಿ ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದರು. ಈ ವಿಚಾರ ತಿಳಿದು ಮನೆಗೆ ಆಗಮಿಸಿದ ನಾಗರಾಜ್ ಮನೆಯ ಒಳಹೋದವರು, ರಾತ್ರಿವರೆಗೂ ಬಾಗಿಲು ತೆರೆಯಲಿಲ್ಲ. ಎಷ್ಟು ಸಾರಿ ಕೂಗಿದರು ಸ್ಪಂದಿಸಿಲಿಲ್ಲ. ಹೀಗಾಗಿ, ಬಾಗಿಲು ಮುರಿದು ಮನೆಯವರು ನೋಡಿದಾಗ ಕೊಕ್ಕೆಗೆ ಬಟ್ಟೆಯಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು ಕಂಡುಬಂದಿದೆ. ಈ ಕುರಿತು ಮಾತನಾಡಿರುವ ಮೃತರ ಸಹೋದರ ಗೋವಿಂದಪ್ಪ, ಕೊರೋನಾ ಆತಂಕಕ್ಕೆ ಒಳಗಾಗಿಯೇ ತಮ್ಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆಂದು ತಿಳಿಸಿದ್ದಾರೆ.

ಮೃತ ನಾಗರಾಜ್ ಅವರು ಅತಿಥಿ ಉಪನ್ಯಾಸಕರಾಗಿಯೂ ಕೆಲಸ ಮಾಡಿದ್ದು, ಲಾಕ್‍ಡೌನ್ ವೇಳೆ ಕೆಲಸವಿಲ್ಲದೆ, ಸಣ್ಣ ಪುಟ್ಟ ಕೆಲಸಗಳನ್ನು ಮಾಡುತ್ತಿದ್ದರು ಎನ್ನಲಾಗಿದೆ. ಮಧ್ಯಾಹ್ನ ತಮ್ಮನಿಗೆ ಕೊರೋನಾ ಪಾಸಿಟಿವ್ ದೃಢವಾಗ್ತಿದ್ದಂತೆ, ಮನೆ ಬಳಿಗೆ ಗಾಂಧಿನಗರ ನಗರಸಭೆ ಸದಸ್ಯ ಪ್ರವೀಣ್ ಭೇಟಿ ನೀಡಿ ಧೈರ್ಯವನ್ನು ತುಂಬಿದ್ದು, ಎಲ್ಲರೂ ಕೋವಿಡ್ ಪರೀಕ್ಷೆಗೆ ಒಳಗಾಗುವಂತೆ ತಿಳಿಸಿದ್ದರಂತೆ. ಆದರೆ, ಸಂಜೆ ವೇಳೆಗೆ ಖಿನ್ನತೆಗೆ ಒಳಗಾಗಿದ್ದ ನಾಗರಾಜ್ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಸ್ಥಳಕ್ಕೆ ಗಲ್‍ಪೇಟೆ ಪೊಲೀಸರು ಭೇಟಿ ನೀಡಿದ್ದು, ಶನಿವಾರ ರಾತ್ರಿಯೇ ಮೃತದೇಹವನ್ನು ಪಿಪಿಇ ಕಿಟ್ ಧರಿಸಿದ‌ ಸಿಬ್ಬಂದಿ ಜಿಲ್ಲಾಸ್ಪತ್ರೆ ಶವಾಗರಾಕ್ಕೆ ರವಾನಿಸಿದ್ದಾರೆ. ಈ ಕುರಿತು ವಿಷಾದ ವ್ಯಕ್ತಪಡಿಸಿರುವ ನಗರಸಭೆ ಸದಸ್ಯರು, ಮುಂದೆ ಯಾರೊಬ್ಬರೂ ಸಂಯಮ ಕಳೆದುಕೊಂಡು ದುಡುಕಬೇಡಿ ಎಂದು ಮನವಿ ಮಾಡಿದ್ದಾರೆ.

ಕೋಲಾರ ಜಿಲ್ಲೆಯಲ್ಲಿ ಜುಲೈ 18ರವರೆಗಿನ ಆರೋಗ್ಯ ಇಲಾಖೆಯ ಮಾಹಿತಿಯಂತೆ, ಸೋಂಕಿತರ ಸಂಖ್ಯೆ ಐನೂರರ ಹತ್ತಿರದಲ್ಲಿದ್ದು, ದಿನೇದಿನೇ ಸೋಂಕಿತರ ಸಂಖ್ಯೆಯು ಏರುತ್ತಿದೆ. ಜೊತೆಗೆ ಇನ್ನೂರಕ್ಕೂ ಹೆಚ್ಚು ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದು ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾರೆ. ಹಾಗಾಗಿ ಕೊರೋನಾ ಸೋಂಕಿಗೆ ಸೂಕ್ತ ಚಿಕಿತ್ಸೆಯಿದ್ದು ಯಾರೊಬ್ಬರೂ ದುಡುಕಿ ಆತ್ಮಹತ್ಯೆಯಂತಹ ನಿರ್ಧಾರ ತೆಗೆದುಕೊಳ್ಳಬಾರದೆಂದು ಆರೋಗ್ಯ ಇಲಾಖೆ ಮನವಿ ಮಾಡಿದೆ.

Comments are closed.