ಕರ್ನಾಟಕ

ವೈದ್ಯಕೀಯ ಸಮುದಾಯ ಕೊರೋನಾ ಹೋರಾಟದಲ್ಲಿ ತೊಡಗಿಕೊಂಡಿರುವುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟ ಡಾ, ಜಗದೀಶ್ ಹಿರೇಮಠ

Pinterest LinkedIn Tumblr


ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರು ಸೇರಿದಂತೆ ಇಡೀ ರಾಜ್ಯವನ್ನು ಕೊರೊನಾ ವೈರಸ್ ಎಂಬ ಮಹಾಮಾರಿ ಕಾಡುತ್ತಿದೆ. ದಿನದಿಂದ ದಿನ್ಕೆಕ ಹೆಚ್ಚಾಗುತ್ತಿರುವ ಸೋಂಕು, ಜನರಲ್ಲಿ ಆತಂಕ ಹಾಗೂ ದುಗುಡವನ್ನು ಹೆಚ್ಚಿಸಿದೆ.

ಈ ಮಧ್ಯೆ ಕೊರೊನಾ ವೈರಸ್ ವಿರುದ್ಧದ ಹೋರಾಟದಲ್ಲಿ ಮುಂಚೂಣಿಯಲ್ಲಿರುವ ವೈದ್ಯಕೀಯ ಸಿಬ್ಬಂದಿಯ ಕಾರ್ಯಕ್ಕೆ ಎಲ್ಲೆಡೆ ಮೆಚ್ಚುಗೆಯೂ ವ್ಯಕ್ತವಾಗುತ್ತಿದೆ. ಮಾರಕ ವೈರಾಣು ಹರಡದಂತೆ ತಡೆಯಲು ಪ್ರಯತ್ನಿಸುತ್ತಿರುವ ವೈದ್ಯರ ಸೇವೆ ನಿಜಕ್ಕೂ ಅಭಿನಂದನೀಯ.

ಆದರೆ ಕೆಲವು ಕಡೆ ಕೊರೊನಾ ಪೀಡಿತರಿಗೆ ಚಿಕಿತ್ಸೆ ನೀಡುತ್ತಿರುವ ವೈದ್ಯರ ವಿರುದ್ಧ ಜನರ ಆಕ್ರೋಶ ಕಂಡುಬರುತ್ತಿದ್ದು, ಸೂಕ್ತ ಚಿಕಿತ್ಸೆ ನೀಡುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ.

ಪ್ರಮುಖವಾಗಿ ರಾಜ್ಯದ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಯಲ್ಲಿ ಕೊರೊನಾ ಪೀಡಿತರನ್ನು ದಾಖಲಿಸಿಕೊಳ್ಳುತ್ತಿಲ್ಲ ಎಂಬ ದೂರು ಕೇಳಿ ಬರುತ್ತಿದ್ದು, ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರ ನಿಜಕ್ಕೂ ದೃಢ ಹೆಜ್ಜೆಯನ್ನಿಡಬೇಕಿದೆ.

ಆದರೆ ವೈದ್ಯರ ವಿರುದ್ಧ ಕಂಡುಬರುತ್ತಿರುವ ಆಕ್ರೋಶ ಅದೆಷ್ಟರ ಮಟ್ಟಿಗೆ ಸರಿ ಎಂಬ ಪ್ರಶ್ನೆಯೂ ಹಲವರನ್ನು ಕಾಡುತ್ತಿದೆ. ಕೊರೊನಾ ಇಲ್ಲವಾಗಿಸಲು ಹಗಲಿರುಳು ದಡಿಯುತ್ತಿರುವ ವೈದ್ಯ ಸಮುದಾಯದ ವಿರುದ್ಧ ಈ ಆಕ್ರೋಶ ಸರಿಯೇ ಎಂದು ನಮ್ಮನ್ನು ನಾವೇ ಪ್ರಶ್ನಿಸಿಕೊಳ್ಳಬೇಕಿದೆ.

ಇದಕ್ಕೆ ಪೂರಕವಾಗಿ ACE ಹೆಲ್ತ್ ಕೇರ್ ಮುಖ್ಯಸ್ಥರಾಗಿರುವ ಡಾ. ಜಗದೀಶ್ ಹಿರೇಮಠ ಎಂಬುವವರು ರಾಜ್ಯದ ಜನತೆಗೆ ಮಾಡಿಕೊಂಡಿರುವ ಮನವಿಯ ವಿಡಿಯೋ ವೈದ್ಯರು ಎದುರಿಸುತ್ತಿರುವ ಕಷ್ಟಗಳನ್ನು ಅನಾವರಣಗೊಳಿಸಿದೆ.

ಏನಂತಾರೆ ಡಾ, ಜಗದೀಶ್ ಹಿರೇಮಠ?:

ACE ಹೆಲ್ತ್ ಕೇರ್ ಮುಖ್ಯಸ್ಥರಾಗಿರುವ ಡಾ. ಜಗದೀಶ್ ಹೀರೆಮಠ, ರಾಜ್ಯದ ವೈದ್ಯಕೀಯ ಸಮುದಾಯ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಹೇಗೆ ತೊಡಗಿಕೊಂಡಿದೆ ಎಂಬುದನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದು, ನಿರಂತರ ದುಡಿಮೆ ವೈದ್ಯರನ್ನು ದೈಹಿಕವಾಗಿ ಹಾಗೂ ಮಾನಸಿಕವಾಗಿ ಕುಗ್ಗಿಸಿದೆ ಎಂದು ಹೇಳಿದ್ದಾರೆ.

ಸರ್ಕಾರಿ ಹಾಗೂ ಖಾಸಗಿ ವೈದ್ಯರು ದಿನಕ್ಕೆ ಕೇವಲ 2-4 ಗಂಟೆಗಳ ಕಾಲ ಮಾತ್ರ ನಿದ್ದೆ ಮಾಡುತ್ತಿದ್ದು, ಉಳಿದೆಲ್ಲಾ ಸಮಯವನ್ನು ಕೊರೊನಾ ಪೀಡಿತರ ಚಿಕಿತ್ಸೆಗೆ ಮುಡಿಪಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಅಸಮರ್ಪಕ ವ್ಯವಸ್ಥೆಗೆ ವೈದ್ಯರನ್ನು ದೂರದೇ ಅವರು ಸಲ್ಲಿಸುತ್ತಿರುವ ನಿಸ್ವಾರ್ಥ ಸೇವೆಯನ್ನು ಪರಿಗಣಿಸುವಂತೆ ಡಾ. ಹಿರೇಮಠ ಮನವಿ ಮಾಡಿದ್ದಾರೆ.

ಇದೇ ವೇಳೇ ಕೊರೊನಾ ಸೋಂಕು ಕೇವಲ ವಯಸ್ಕರಿಗೆ ಮಾತ್ರ ತಗುಲುತ್ತದೆ ಎಂಬ ಭ್ರಮೆಯಲ್ಲಿ ಇರಬೇಡಿ ಎಂದು ಮನವಿ ಮಾಡಿರುವ ಡಾ. ಹಿರೇಮಠ, ಆರೋಗ್ಯವಂತ ಜನರಲ್ಲೂ ಸೋಂಕು ಕಾಣಿಸಿಕೊಂಡಿರುವ ಹಲವು ಉದಾಹರಣೆ ನೀಡಿದ್ದಾರೆ.

ಒಟ್ಟಿನಲ್ಲಿ ಕೊರೊನಾ ಅಸಮರ್ಪಕ ಚಿಕಿತ್ಸೆಗಾಘಿ ವೈದ್ಯಕೀಯ ಸಮುದಾಯವನ್ನು ದೂರುವ ಮನೋಭಾವನೆ ಬದಲಾಗಬೇಕಿದ್ದು, ಆರೋಗ್ಯವಂತ ಸಮಾಜ ನಿರ್ಮಾಣಕ್ಕಾಗಿ ದುಡಿಯುತ್ತಿರು ವೈದ್ಯರ ನಿಸ್ವಾರ್ಥ ಸೇವೆಯನ್ನು ಪರಿಗಣಿಸುವ ಮತ್ತು ಅವರೊಂದಿಗೆ ಗಟ್ಟಿಯಾಗಿ ನಿಲ್ಲುವ ಕಾಲ ಕೂಡಿ ಬಂದಿದೆ ಎಂದು ಹೇಳಬಹುದಾಗಿದೆ.

Comments are closed.