ಕರ್ನಾಟಕ

ಬೆಂಗಳೂರಿನಲ್ಲಿ ಒಂದು ವಾರ ಲಾಕ್ ಡೌನ್; ಪರಿಶೀಲನೆ ನಡೆಸಿದ ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್

Pinterest LinkedIn Tumblr

ಬೆಂಗಳೂರು:ನಗರದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕಳೆದ ರಾತ್ರಿಯಿಂದ ಜುಲೈ 22ರವರೆಗ ಒಂದು ವಾರ ಲಾಕ್ ಡೌನ್ ಘೋಷಿಸಿದೆ.

ಈ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆಯಿಂದಲೇ ದಿನನಿತ್ಯದ ವ್ಯಾಪಾರ, ವಹಿವಾಟು, ಕೆಲಸಗಳು ಸ್ಥಗಿತಗೊಂಡಿವೆ. ಮೆಡಿಕಲ್ ಹೊರತುಪಡಿಸಿ ಬೇರೆ ದಿನಸಿ, ತರಕಾರಿ ಅಂಗಡಿಗಳು ಮಧ್ಯಾಹ್ನ 12 ಗಂಟೆಯವರೆಗೆ ಮಾತ್ರ ತೆರೆದಿರುತ್ತದೆ.

ಇಂದು ಬೆಳಗ್ಗೆಯೇ ನಗರ ಪೊಲೀಸ್ ಆಯುಕ್ತ ಎನ್. ಭಾಸ್ಕರ್ ರಾವ್ ಕಬ್ಬನ್ ಪಾರ್ಕ್ ಬಳಿ ವಾಕಿಂಗ್ ಮಾಡುತ್ತಾ ಸುತ್ತಮುತ್ತ ಪ್ರದೇಶಗಳಲ್ಲಿ ಲಾಕ್ ಡೌನ್ ಹೇಗೆ ಜಾರಿಗೆ ಬಂದಿದೆ ಎಂದು ಪರಿಶೀಲನೆ ನಡೆಸಿದರು. ಕಬ್ಬನ್ ಪಾರ್ಕ್ ಬಳಿ ಬಸ್ ನಿಲ್ಧಾಣದಲ್ಲಿ ನಿಂತಿದ್ದ ಜನರನ್ನು ಮಾತನಾಡಿಸಿ ಯಾಕೆ ನಿಂತಿದ್ದೀರಿ, ಎಲ್ಲಿಗೆ ಹೋಗುತ್ತಿರುವಿರಿ ಎಂದು ಕೇಳಿದರು.

ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಎನ್ ಭಾಸ್ಕರ್ ರಾವ್, ಸಂಚಾರ ಪೊಲೀಸ್ ಸಿಬ್ಬಂದಿ ರಾತ್ರಿ 8 ಗಂಟೆಯಿಂದ ಬೆಳಗ್ಗೆ 8 ಗಂಟೆಯವರೆಗೆ ಇರುತ್ತಾರೆ. ನಗರದಲ್ಲಿ ಪ್ರಯಾಣಿಕರ ಸಂಚಾರದ ಬಗ್ಗೆ, ಅಲ್ಲಲ್ಲಿ ಬ್ಯಾರಿಕೇಡ್ ಹಾಕುವ ಬಗ್ಗೆ ಟ್ರಾಫಿಕ್ ಪೊಲೀಸರು ನೋಡಿಕೊಳ್ಳುತ್ತಾರೆ. ವಿಮಾನ ನಿಲ್ದಾಣ ಮತ್ತು ರೈಲ್ವೆ ನಿಲ್ದಾಣ ಪ್ರಯಾಣಕ್ಕೆ ಮುಕ್ತವಾಗಿರುವ ಸಂದರ್ಭದಲ್ಲಿ ಲಾಕ್ ಡೌನ್ ನಿರ್ಬಂಧ ನಿರ್ವಹಿಸುವುದು ಸವಾಲಾಗಿದೆ ಎಂದರು.

ಈ ಲಾಕ್ ಡೌನ್ ಏಕೆ ಜಾರಿಗೆ ತಂದಿದೆ ಸರ್ಕಾರ ಎಂದು ಜನರು ಪರಿಸ್ಥಿತಿ ಅರ್ಥ ಮಾಡಿಕೊಂಡು ಜವಾಬ್ದಾರಿಯಿಂದ ವರ್ತಿಸಲಿ, ಜನರಿಗೆ ಅಗತ್ಯ ವಸ್ತುಗಳು, ಸೇವೆಗಳನ್ನು ಪಡೆಯಲು ಮಧ್ಯಾಹ್ನ 12 ಗಂಟೆಯವರೆಗೆ ಅವಕಾಶವಿದೆ. ತೀರಾ ಅಗತ್ಯವಿದ್ದರೆ ಮಾತ್ರ ಮನೆಯಿಂದ ಹೊರಬನ್ನಿ ಎಂದು ಮನವಿ ಮಾಡಿಕೊಂಡ ಭಾಸ್ಕರ್ ರಾವ್ ಅನಗತ್ಯವಾಗಿ ಬೀದಿಗಳಲ್ಲಿ ಓಡಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆಯನ್ನು ನೀಡಿದರು.

ರೈತರು ತರಕಾರಿ, ಹಣ್ಣು ಬೆಳೆಗಳನ್ನು ನಗರದೊಳಗೆ ತಂದು ಮುಕ್ತವಾಗಿ ಮಾರಾಟ ಮಾಡಲು ಸರ್ಕಾರ ವ್ಯವಸ್ಥೆ ಮಾಡಿದೆ, ಇದರಲ್ಲಿ ಯಾವುದೇ ಸಮಸ್ಯೆಯಿಲ್ಲ, ಬೆಳೆಗಾರರಿಗೆ ನಾವು ಯಾವುದೇ ತೊಂದರೆ ಕೊಡುವುದಿಲ್ಲ ಎಂದರು.

ಬೆಂಗಳೂರು ರಸ್ತೆಗಳ ಅಲ್ಲಲ್ಲಿ ಪೊಲೀಸರು ನಿಂತು ಜನರ ಓಡಾಟದ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ವಾಹನಗಳಲ್ಲಿ ಹೋಗುವವರಲ್ಲಿ ಪೊಲೀಸರು ಐಡಿ ಕಾರ್ಡು ಕೇಳುತ್ತಿರುವುದು, ಪರಿಶೀಲಿಸುತ್ತಿರುವುದು ಕಂಡುಬಂತು. ನಗರದ ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣದಲ್ಲಿ ಸಾಲುಗಟ್ಟಲೆ ಪ್ರಯಾಣಿಕರು ನಿಂತಿರುವುದು ಇಂದು ಬೆಳಗ್ಗೆಯೇ ಕಂಡುಬಂತು.

Comments are closed.