ಕರ್ನಾಟಕ

ವಿವಾಹ ಬಂಧನಕ್ಕೊಳಗಾದ ಅಫಜಲಪುರ ತಾಲೂಕು ಪಂಚಾಯತ್ ಅಧ್ಯಕ್ಷೆ ಮತ್ತು ಉಪಾಧ್ಯಕ್ಷ

Pinterest LinkedIn Tumblr


ಕಲಬುರ್ಗಿ(ಜುಲೈ.14): ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳು ಪರಸ್ಪರ ಎದುರಾಳಿ ಪಕ್ಷಗಳು. ವಿಧಾನಸಭೆ ಅಧಿವೇಶನದಿಂದ ಹಿಡಿದು, ಹೊರಗಡೆಯೂ ಮುಖಂಡರು ಪರಸ್ಪರ ವಾಕ್ಸಮರ, ಆರೋಪ-ಪ್ರತ್ಯಾರೋಪ ಮಾಡಿಕೊಳ್ಳುವುದುಂಟು. ಹಾವು-ಮುಂಗುಸಿ ರೀತಿಯಲ್ಲಿ ಕೆಲವೊಮ್ಮೆ ಕಚ್ಚಾಡುವುದು ಉಂಟು. ಇದು ಹೀಗಿರಬೇಕಾದ್ರೆ ಕಲಬುರ್ಗಿಯಲ್ಲೊಂದು ಇದಕ್ಕೆ ತದ್ವಿರುದ್ಧವಾದ ಘಟನೆ ನಡೆದಿದೆ. ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷದ ಪ್ರತಿನಿಧಿಗಳ ನಡುವೆ ಪ್ರೀತಿ ಮೊಳಕೆಯೊಡೆದು, ಸಪ್ತಪದಿವರೆಗೂ ಕೊಂಡೊಯ್ದಿದೆ.

ಆಕೆ ಕಲಬುರ್ಗಿ ಜಿಲ್ಲೆಯ ಅಫಜಲಪುರ ತಾಲೂಕು ಪಂಚಾಯತ್ ಅಧಕ್ಷೆ ರುಕ್ಮಿಣಿ ಜಮಾದಾರ. ಈತ ಅದೇ ತಾಲೂಕು ಪಂಚಾಯತ್ ಉಪಾಧ್ಯಕ್ಷ ಭೀಮಾಶಂಕರ ಹೊನ್ನಕೇರಿ. ತಾಲೂಕು ಪಂಚಾಯತ್ ಒಂದೇ ಯಾಗಿದ್ದರೂ ಇವರಿಬ್ಬರ ಪಕ್ಷಗಳು ಮಾತ್ರ ಬೇರೆ ಬೇರೆ. ರುಕ್ಮಿಣಿ ಜಮಾದಾರ ಚೌಡಾಪುರ ತಾಲೂಕು ಪಂಚಾಯತ್ ಕ್ಷೇತ್ರದಿಂದ ಬಿಜೆಪಿ ಪಕ್ಷದಿಂದ ಆಯ್ಕೆಯಾಗಿ, ತಾಲೂಕು ಪಂಚಾಯತ್ ಅಧ್ಯಕ್ಷ ಗದ್ದುಗೆ ಏರಿದವರು.

ಇನ್ನು ಭೀಮಾಶಂಕರ ಹೊನ್ನಕೇರಿ ಕರ್ಜಗಿ ತಾಲೂಕು ಪಂಚಾಯತ್ ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಗೆದ್ದು ಬಂದು ಉಪಾಧ್ಯಕ್ಷ ಸ್ಥಾನ ಅಲಂಕರಿಸಿದವರು. ಅಫಜಲಪುರ ತಾಲೂಕು ಪಂಚಾಯತ್ ಅಧ್ಯಕ್ಷ – ಉಪಾಧ್ಯಕ್ಷರಾಗಿ ಆಯ್ಕೆಯಾದ ನಂತರ ಇವರಿಬ್ಬರ ನಡುವೆ ಪ್ರೀತಿ ಅಂಕುರವಾಗಿದೆ. ಕೊನೆಗೆ ಅದು ದಾಂಪತ್ಯ ಜೀವನದವರೆಗೂ ಕರೆದೊಯ್ದಿದೆ.

ಅಫಜಲಪುರ ತಾಲೂಕು ಪಂಚಾಯತ್​ನಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳು ಮೈತ್ರಿ ಮಾಡಿಕೊಂಡಿಲ್ಲ. ಆದರೆ ಬಹುಮತದ ಕಾರಣದಿಂದಾಗಿ ಅಧ್ಯಕ್ಷ ಸ್ಥಾನ ಬಿಜೆಪಿಗೆ ಹಾಗೂ ಮೀಸಲಾತಿ ಕಾರಣದಿಂದಾಗಿ ಉಪಾಧ್ಯಕ್ಷ ಸ್ಥಾನ ಕಾಂಗ್ರೆಸ್ ಪಕ್ಷಕ್ಕೆ ಒಲಿದು ಬಂದಿತ್ತು. ಇವರಿಬ್ಬರು ಅಧ್ಯಕ್ಷ-ಉಪಾಧ್ಯಕ್ಷರಾಗಿ ಜೋಡೆತ್ತಿನ ರೀತಿಯಲ್ಲಿ ಕೆಲಸ ಮಾಡುವ ವೇಳೆ ಇಬ್ಬರ ನಡುವೆ ಪ್ರೀತಿ ಅಂಕುರಿಸಿತ್ತು.

ಇಬ್ಬರು ಒಂದು ಸಮುದಾಯಕ್ಕೆ ಸೇರಿದವರಾಗಿದ್ದರಿಂದ ತಮ್ಮ ಕುಟುಂಬದ ಸದಸ್ಯರ ಜೊತೆ ಚರ್ಚಿಸಿ, ಅವರನ್ನು ಒಪ್ಪಿಸುವಲ್ಲಿ ಈ ಜೋಡಿ ಯಶಸ್ವಿಯಾಗಿತ್ತು. ಕೆಲ ದಿನಗಳ ಹಿಂದೆಯಷ್ಟೇ ನಿಶ್ಚಿತಾರ್ಥವನ್ನೂ ಮಾಡಿಕೊಂಡಿದ್ದರು.
ಇದೀಗ ಆಳಂದ ತಾಲೂಕಿನ ಜಿಡಗಾ ಮಠದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಕೊರೋನಾ ಹಿನ್ನೆಲೆಯಲ್ಲಿ ಸರಳವಾಗಿ ನಡೆದ ವಿವಾಹದಲ್ಲಿ ಸಪ್ತಪದಿ ತುಳಿಯುವ ಮೂಲಕ ತಮ್ಮ ಪ್ರೀತಿಯ ಬುನಾದಿಗೆ ದಾಂಪತ್ಯದ ಸೌಧ ಕಟ್ಟಿದ್ದಾರೆ. ಇವರಿಬ್ಬರ ವಿವಾಹದಲ್ಲಿ ಪಕ್ಷ ಬೇಧ ಮರೆತು ಮುಖಂಡರು ಭಾಗಿಯಾಗಿದ್ದರು. ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮತ್ತಿತರ ಪಕ್ಷಗಳ ನಾಯಕರು ಮತ್ತು ಕೆಲ ಆಪ್ತರು ಸರಳ ವಿವಾಹದಲ್ಲಿ ಭಾಗಿಯಾಗಿ ನವ ದಂಪತಿಗಳಿಗೆ ಶುಭ ಹಾರೈಸಿದ್ದಾರೆ.

Comments are closed.