ಬೆಂಗಳೂರು (ಜು. 14): ಬೆಂಗಳೂರಿನಲ್ಲಿ ಪಾಗಲ್ ಪ್ರೇಮಿಯಿಂದ ಪ್ರಿಯತಮೆಯ ಬರ್ಬರ ಕೊಲೆ ನಡೆದಿದೆ. ನಿನ್ನೆ ತಡರಾತ್ರಿ ಗಿರಿನಗರ ಠಾಣಾ ವ್ಯಾಪ್ತಿಯ ದ್ವಾರಕಾ ನಗರದಲ್ಲಿ ಚಾಕುವಿನಿಂದ ಇರಿದು ಯುವತಿಯನ್ನು ಕೊಲೆ ಮಾಡಲಾಗಿದೆ. ಕೊಲೆ ಮಾಡಿದ ಅಭಿ ಗೌಡ ಹಾಗೂ ಕೊಲೆಯಾದ ಯುವತಿ ಸುಮಾರು ದಿನಗಳಿಂದ ಪ್ರೀತಿ ಮಾಡುತ್ತಿದ್ದರು. ಜೊತೆಗೆ ಇಬ್ಬರೂ ರಾಜಾಜಿನಗರದ ಪ್ರಕಾಶ್ ನಗರದ ನಿವಾಸಿಗಳಾಗಿದ್ದರು.
ಆದರೆ, ಇತ್ತೀಚೆಗೆ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದು ಜಗಳ ಮಾಡಿಕೊಂಡಿದ್ದರು. ಈ ವೇಳೆ ಯುವತಿ ರೌಡಿಶೀಟರ್ ಅಭಿ ಗೌಡನ ಜೊತೆ ಮಾತು ಬಿಟ್ಟಿದ್ದಳು. ಆದರೆ, ಸೋಮವಾರ ತಡರಾತ್ರಿ ಆಕೆಯ ಜೊತೆ ಮಾತನಾಡಬೇಕು ಎಂದು ಹೇಳಿ ರೌಡಿಶೀಟರ್ ಅಭಿ ಪ್ರಕಾಶ ನಗರದಿಂದ ಗಿರಿನಗರದ ತನ್ನ ಸ್ನೇಹಿತನ ಮನೆಗೆ ಕರೆದುಕೊಂಡು ಹೋಗಿದ್ದ. ಜೊತೆಗೆ ಒಂದು ಕೈಯಲ್ಲಿ ತಾಳಿ ಹಿಡಿದು ಮತ್ತೊಂದು ಕೈಯಲ್ಲಿ ಚಾಕು ಹಿಡಿದುಕೊಂಡು ಮದುವೆ ಆಗುವಂತೆ ಬೆದರಿಕೆ ಹಾಕಿದ್ದ. ಈ ವೇಳೆ ಯುವತಿ ಮದುವೆಗೆ ನಿರಾಕರಿಸಿದ್ದಾಳೆ. ಆಗ ತನ್ನ ಬಳಿ ಇದ್ದ ಚಾಕುವಿನಿಂದ ಯುವತಿಯನ್ನು ಹೊಟ್ಟೆ ಭಾಗಕ್ಕೆ ಇರಿದು ಕೊಲೆ ಮಾಡಿ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ.
ಇತ್ತ ಯುವತಿ ರಾತ್ರಿ ಆದರೂ ಮನೆಗೆ ಬಾರದ ಕಾರಣ ಆಕೆಯ ಮನೆಯವರು ರಾಜಾಜಿನಗರ ಪೊಲೀಸ್ ಠಾಣೆಯಲ್ಲಿ ಮಿಸ್ಸಿಂಗ್ ಕಂಪ್ಲೇಂಟ್ ಮಾಡಿದ್ದಾರೆ.ಇತ್ತ ಮುಂಜಾನೆ ಕೊಲೆಯ ಬಗ್ಗೆ ಗಿರಿನಗರ ಪೊಲೀಸರಿಗೆ ಗೊತ್ತಾದ ಕೂಡಲೆ ಸ್ಥಳ ಪರಿಶೀಲನೆ ಮಾಡಿದ್ದಾರೆ. ಇದೇ ವೇಳೆಗೆ ಆರೋಪಿ ಹಾಗೂ ರೌಡಿಶೀಟರ್ ಅಭಿ ಗೌಡ ರಾಜಾಜಿನಗರ ಪೊಲೀಸರಿಗೆ ಹೋಗಿ ಸರೆಂಡರ್ ಆಗಿದ್ದಾನೆ. ನಂತರ ರಾಜಾಜಿನಗರ ಪೊಲೀಸರು ಆರೋಪಿಯನ್ನು ಗಿರಿನಗರ ಪೊಲೀಸರಿಗೆ ಒಪ್ಪಿಸಿದ್ದಾರೆ.
ಸದ್ಯ ಗಿರಿನಗರ ಪೊಲೀಸರು ಕೊಲೆಗಾರ ಅಭಿ ಗೌಡನನ್ನು ತೀವ್ರ ವಿಚಾರಣೆ ಮಾಡ್ತಾ ಇದ್ದಾರೆ. ಜೊತೆಗೆ ಆತನ ಸ್ನೇಹಿತರ ಬಗ್ಗೆಯೂ ಮಾಹಿತಿ ಕಲೆ ಹಾಕ್ತಾ ಇದ್ದಾರೆ. ಜೊತೆಗೆ ಕೊಲೆಯಾದ ಯುವತಿಯ ಮೃತದೇಹವನ್ನು ಕಿಮ್ಸ್ ಆಸ್ಪತ್ರೆಗೆ ರವಾನೆ ಮಾಡಿದ್ದು, ಕೋವಿಡ್ ಪರೀಕ್ಷಾ ವರದಿ ಬಳಿಕ ಕುಟುಂಬಸ್ಥರಿಗೆ ಮೃತದೇಹ ನೀಡಲಾಗುವುದು.
Comments are closed.