ಕರ್ನಾಟಕ

ಕೊರೋನಾದಿಂದ ರಾಯಚೂರಿನಲ್ಲಿ ಮಠಕ್ಕೂ ತಟ್ಟಿದ ಆರ್ಥಿಕ ಸಂಕಷ್ಟ

Pinterest LinkedIn Tumblr


ರಾಯಚೂರು: ಆಂಧ್ರ ಪ್ರದೇಶದ ಕರ್ನೂಲ್‌ ಜಿಲ್ಲೆಯಲ್ಲಿರುವ ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ಮಠಕ್ಕೆ ಕರ್ನಾಟಕದ ಭಕ್ತರು ಅಧಿಕ. ಕರ್ನೂಲ್‌, ಎಮ್ಮಿಗನೂರು, ನಾರಾಣಪುರಂಗಳಲ್ಲಿ ಅತ್ಯಧಿಕ ಕೊರೋನಾ ಸೋಂಕಿತರಿರುವುದರಿಂದ ಮಂತ್ರಾಲಯದ ಮಠಕ್ಕೆ ಭಕ್ತರ ಪ್ರವೇಶವನ್ನು ನಿಷೇಧಿಸಲಾಗಿದೆ. ಇದರಿಂದಾಗಿ ಭಕ್ತರಿಂದ ಬರುವ ಆದಾಯ ನಿಂತಿದೆ. ಹೀಗಾಗಿ ಮಠದಲ್ಲಿಯ ಸಿಬ್ಬಂದಿಗೆ ವೇತನ ನೀಡಲು ಸಹ ಸಾಧ್ಯವಾಗದ ಸ್ಥಿತಿಗೆ ಶ್ರೀರಾಘವೇಂದ್ರ ಸ್ವಾಮಿಗಳ ಮಠ ತಲುಪಿದೆ ಎನ್ನಲಾಗುತ್ತಿದೆ.

ಮಂತ್ರಾಲಯದ ಶ್ರೀರಾಘವೇಂದ್ರ ಮಠಕ್ಕೆ ಪ್ರತಿ ತಿಂಗಳು ಮಠದ ಹುಂಡಿಯಿಂದ ಒಂದು ಕೋಟಿ ರೂಪಾಯಿಯಷ್ಟು ಆದಾಯ ಬರುತ್ತಿತ್ತು. ಈ ಕೋಟಿ ರೂಪಾಯಿ ಆದಾಯವು ಮಠದ ಸಿಬ್ಬಂದಿಗೆ ವೇತನ ನೀಡಲು ಸಾಕಾಗುತ್ತಿತ್ತು. ಆದರೆ, ಮಾರ್ಚ್‌ 21 ರಿಂದ ಶ್ರೀಮಠವು ಬಾಗಿಲು ಹಾಕಿದ್ದರಿಂದ ಆದಾಯ ಬರುತ್ತಿಲ್ಲ. ಜೂನ್‌ ಅಂತ್ಯದ ವೇಳೆಗೆ ಆನ್‌ಲೈನ್‌ ಸೇವೆಯಿಂದಾಗಿ ಸುಮಾರು 70 ಲಕ್ಷ ರೂಪಾಯಿಯಷ್ಟು ಹಣ ಸಂಗ್ರಹವಾಗಿದೆ.

ಇದರಿಂದ ಮಠದ ಸಿಬ್ಬಂದಿಗಳಿಗೆ ಒಂದು ತಿಂಗಳ ವೇತನ ನೀಡಲು ಸಾಕಾಗುವುದಿಲ್ಲ, ಈ ಮಧ್ಯೆ ಸ್ವಾಮಿಜಿಗಳಿಗೆ ಕಾಣಿಕೆ ರೂಪದಲ್ಲಿ ಬಂದ ಹಣದಲ್ಲಿ ಇಲ್ಲಿಯವರೆಗೂ ವೇತನ ನೀಡಲಾಗಿದೆ. ಆದರೆ, ಮಠವು ಭಕ್ತರಿಗೆ ಅವಕಾಶ ನೀಡದಿದ್ದರೆ ಮುಂದಿನ ದಿನಗಳು ಹೇಗೆ ಎಂಬಂತಾಗಿದೆ. ಸಾಮಾನ್ಯವಾಗಿ ಆಷಾಢ ಮಾಸ ಆರಂಭವಾಗುತ್ತಲೇ ಮಠದಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯುತ್ತಿರುತ್ತವೆ.

ಆಷಾಢದಲ್ಲಿ ಸ್ವಾಮೀಜಿಗಳ ಚಾತುರ್ಮಾಸ್ಯ, ರಾಯರ ಆರಾಧನೆ, ತುಂಗಾರತಿ ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಡೆಯುತ್ತವೆ. ಈ ಸಮಯದಲ್ಲಿ ಭಕ್ತರ ಸಂಖ್ಯೆಯೂ ಅತ್ಯಧಿಕವಾಗಿರುತ್ತದೆ. ಆದರೆ, ಕೊರೋನಾ ಲಾಕ್‌ಡೌನ್‌ ಹಿನ್ನಲೆಯಲ್ಲಿ ಬಾಗಿಲು ಹಾಕಿದ್ದ ಶ್ರೀ ಮಠವು ಇನ್ನೂ ಆರಂಭವಾಗಿಲ್ಲ.

ಮಂತ್ರಾಲಯದ ಸುತ್ತಲಿನ‌ ಕರ್ನೂಲ್‌ನಲ್ಲಿ 2671 ಜನ ಸೋಂಕಿತರಿದ್ದರು. ಅದರಲ್ಲಿ 1978 ಜನ ಗುಣಮುಖರಾಗಿದ್ದಾರೆ. ಅಲ್ಲದೆ, 89 ಜನ ಸಾವನ್ನಪ್ಪಿದ್ದಾರೆ. ಹೀಗಾಗಿ ಕೊರೋನಾ ಸೋಂಕು ತಹಬಂಧಿಗೆ ಬಾರದ ಹಿನ್ನಲೆಯಲ್ಲಿ ಕರ್ನೂಲ್ ಜಿಲ್ಲಾಡಳಿತ ಈವರೆಗೆ ದೇವಾಲಯ ಆರಂಭಿಸಲು ಅನುಮತಿ ನೀಡಿಲ್ಲ. ಅಲ್ಲದೆ ಕರ್ನಾಟಕ ಸೇರಿದಂತೆ ಬೇರೆ ರಾಜ್ಯದಿಂದ ಬರುವವರು ಸೇವಾ ಸಿಂಧುವಿನಲ್ಲಿ ಅರ್ಜಿ ಹಾಕಿ ಪರವಾನಿಗೆ ಪಡೆದು ಬರಬೇಕಾಗಿದೆ.

ದೇವಾಲಯ ಆರಂಭಿಸುವ ಕುರಿತು ಮಠವು ಎರಡು ಬಾರಿ ಸಮಯ ನಿಗಧಿ ಮಾಡಲಾಗಿತ್ತು. ಆದರೆ, ಕೊನೆಯ ಕ್ಷಣದಲ್ಲಿ ಬಾಗಿಲು ತೆಗೆಯುವುದಕ್ಕೆ ಹಿಂಜರಿದಿದ್ದಾರೆ. ಒಟ್ಟಾರೆಯಾಗಿ ರಾಯರ ಕ್ಷೇತ್ರದಲ್ಲಿ ಕೊರೋನಾ ಆರ್ಥಿಕ ಹಿನ್ನಡೆಯನ್ನುಂಟು ಮಾಡಿದೆ. ಇದಕ್ಕೆ ರಾಯರೆ ಮಾರ್ಗ ತೋರಿಸಬೇಕಾಗಿದೆ ಎನ್ನುತ್ತಿದ್ದಾರೆ ಭಕ್ತರು.

Comments are closed.