ಕರ್ನಾಟಕ

ರಾಮನಗರ ಜಿಲ್ಲೆಯ ಕೊರೋನಾ ಸೋಂಕಿತರಿಗೆ ಡಿಕೆಶಿಯಿಂದ ಫೈವ್ ಸ್ಟಾರ್ ಊಟ-ತಿಂಡಿ

Pinterest LinkedIn Tumblr


ರಾಮನಗರ: ಜಿಲ್ಲೆಯಲ್ಲಿ ಕೊರೋನಾ ಸೋಂಕಿಗೆ ಒಳಗಾಗಿರುವ ರೋಗಿಗಳಿಗೆ ಹಾಗೂ ಕ್ವಾರಂಟೈನ್ ನಲ್ಲಿರುವವರ ಪಾಲಿಗೆ ಡಿಕೆ ಬ್ರದರ್ಸ್ ನಿಜ ಜನಸೇವಕರಾಗಿ ಹೊರಹೊಮ್ಮಿದ್ದಾರೆ. ಸರ್ಕಾರದ ಹಣದೊಂದಿಗೆ ತಮ್ಮ ಡಿಕೆಎಸ್ ಚಾರಿಟೆಬಲ್ ಟ್ರಸ್ಟ್ ನಿಂದ ಹಣ ನೀಡಿ ಕೋವಿಡ್ ರೋಗಿಗಳಿಗೆ ಫೈವ್ ಸ್ಟಾರ್ ಹೋಟೆಲ್ ರೀತಿಯಲ್ಲಿಯೇ ಊಟ, ತಿಂಡಿ ನೀಡಲಾಗುತ್ತಿದೆ. ಡಿಕೆಎಸ್ ಟ್ರಸ್ಟ್ ನ ಈ ಕಾರ್ಯಕ್ಕೆ ಜಿಲ್ಲೆಯ ಜನರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.

ಹೌದು, ರೇಷ್ಮೆನಗರಿ ರಾಮನಗರ ‌ಜಿಲ್ಲೆಯಲ್ಲಿ ಮೊದಮೊದಲು‌ ಕ್ವಾರಂಟೈನ್ ಸೆಂಟರ್ ಹಾಗೂ ಕೋವಿಡ್ ಆಸ್ಪತ್ರೆಗೆ ಬಂದ ರೋಗಿಗಳಿಗೆ ಸರಿಯಾಗಿ ಗುಣಮಟ್ಟದ ಊಟ ನೀಡುತ್ತಿಲ್ಲ ಎಂಬ ಆರೋಪಗಳು ಪ್ರತಿನಿತ್ಯ ಕೇಳಿ ಬರುತ್ತಿತ್ತು. ಈ ಸಂದರ್ಭದಲ್ಲಿ ನೆರವಿಗೆ ಬಂದವರೇ ಡಿಕೆ ಬ್ರದರ್ಸ್. ನಮ್ಮ ಕ್ಷೇತ್ರದ ಜನರು ಯಾವುದೇ ರೀತಿಯ ತೊಂದರೆ ಅನುಭವಿಸಬಾರದು ಎಂಬ ಮುಖ್ಯ ಉದ್ದೇಶದಿಂದ ಕೆಪಿಸಿಸಿ‌‌ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಸಂಸದ ಡಿ.ಕೆ.ಸುರೇಶ್ ಜೊತೆಗೂಡಿ ಗುಣಮಟ್ಟಣ ಆಹಾರ ನೀಡುವಲ್ಲಿ ಯಶಸ್ವಿಯಾಗಿದ್ದಾರೆ. ಜಿಲ್ಲೆಯಲ್ಲಿರುವ ಕೋವಿಡ್ ರೋಗಿಗಳು ಹಾಗೂ ಕ್ವಾರಂಟೈನ್ ನಲ್ಲಿರುವ ಎಲ್ಲರಿಗೂ ವಿಶೇಷ ಭೋಜನ ಸಿಗುತ್ತಿದೆ. ಪ್ರತಿ ರೋಗಿಗೆ ಸರ್ಕಾರದಿಂದ 60 ರೂಪಾಯಿ ಕೊಡಲಾಗುತ್ತಿತ್ತು. ಇದರ ಜೊತೆಗೆ ಡಿಕೆಎಸ್ ಟ್ರಸ್ಟ್ ನಿಂದ 150 ರೂ.ಗಳನ್ನು ಊಟದ ಖರ್ಚಿಗೆ ನೀಡಲಾಗುತ್ತಿದೆ.

ಮೊದಲಿಗೆ ಕ್ವಾರಂಟೈನ್​ನಲ್ಲಿ ಇದ್ದ ಕೋವಿಡ್ ರೋಗಿಗಳ ಸಂಪರ್ಕಿತರು ಮತ್ತು ಕೋವಿಡ್ ಆಸ್ಪತ್ರೆಯಲ್ಲಿದ್ದ ರೋಗಿಗಳು ತಮಗಾಗುತ್ತಿರುವ ತೊಂದರೆಗಳ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಬಿಡಿಬಿಡಿಯಾಗಿ‌‌ ಹೇಳಿಕೊಳ್ಳುತ್ತಿದ್ದರು. ಇದಕ್ಕೆ ಸ್ಪಂದಿಸಿದ ಸಂಸದ ಡಿ.ಕೆ.ಸುರೇಶ್ ತಾವೇ ಖುದ್ದಾಗಿ ರೋಗಿಗಳಿಗೆ ಆಹಾರ ನೀಡುವ ಬಗ್ಗೆ ಯೋಚನೆ ಮಾಡಿದರು. ಈಗ ಕಳೆದ 15 ದಿನಗಳಿಂದ ಸರಿಸುಮಾರು 700ಕ್ಕೂ ಹೆಚ್ಚು ಜನರಿಗೆ ಪ್ರತಿದಿನ ತಿಂಡಿ- ಊಟ ವಿತರಣೆ ಮಾಡಲಾಗ್ತಿದೆ.

ಇನ್ನು ಕೋವಿಡ್ ರೋಗಿಗಳಿಗೆ ಹಾಗೂ ಕ್ವಾರಂಟೈನ್ ನಲ್ಲಿರುವವರಿಗೆ ಊಟ ತಯಾರಾಗುತ್ತಿರುವುದು ಬಿಡದಿಯ ಅರಳಾಳುಸಂದ್ರ ಗ್ರಾಮದ ಚೇತನ್ ಎಂಬುವವರ ಆರ್.ಕೆ.ಫಾರ್ಮ್ ಹೌಸ್ ನಲ್ಲಿ. ಬೆಳಗಿನ ತಿಂಡಿಗೆ ಪ್ರತಿದಿನ ವಾಂಗೀಬಾತ್, ಬಿಸಿಬೇಳೆ ಬಾತ್, ಮೆಂತ್ಯಾ ಬಾತ್ ಸೇರಿದಂತೆ ಬೇರೆ ಬೇರೆ ತಿಂಡಿ ಸಿಗುತ್ತಿದ್ದರೆ, ಮಧ್ಯಾಹ್ನದ ಊಟಕ್ಕೆ 4 ಪೂರಿ, ಅನ್ನ ಸಾಂಬಾರ್, ಸಾಗು, ಫಲ್ಯ ಜೊತೆಗೆ ಮೊಟ್ಟೆ, ಮೊಸರು ನೀಡಲಾಗುತ್ತಿದೆ. ಇನ್ನು ರಾತ್ರಿ ಊಟಕ್ಕೆ ಚಪಾತಿ ಪಲ್ಯ, ಅನ್ನ ಸಾಂಬಾರ್, ಹಪ್ಪಳ ಬಾಳೆಹಣ್ಣು ಮೊಸರು ನೀಡಲಾಗುತ್ತಿದೆ. ಇನ್ನು ವಿಶೇಷ ಅಂದರೆ ಮಂಗಳವಾರ , ಶುಕ್ರವಾರ , ಭಾನುವಾರ ಮೂರು ದಿನ ಮಾಂಸಾಹಾರಿ ನೀಡಲಾಗುತ್ತಿದೆ. ಪ್ರತಿ ನಾಲ್ಕು ತಾಲೂಕಿಗೆ 4 ವಾಹನಗಳಲ್ಲಿ ಊಟ ಸರಬರಾಜು ಮಾಡಲಾಗುತ್ತಿದೆ. 40 ಜನರ ತಂಡ ಹಗಲು ರಾತ್ರಿ ಅಡುಗೆ ಮಾಡುವುದರಲ್ಲಿ ನಿರತರಾಗಿದ್ದಾರೆಂದು ಅಡುಗೆ ಭಟ್ಟರಾದ ಚಂದ್ರು ತಿಳಿಸಿದ್ದಾರೆ.

ಒಟ್ಟಾರೆ ಡಿಕೆ ಸಹೋದರರು ಕೋವಿಡ್ ರೋಗಿಗಳ ಪಾಲಿಗೆ ಈಗ ಅನ್ನದಾತರಾಗಿದ್ದಾರೆ. ಇದೇ ರೀತಿ ರಾಜ್ಯದ ಉಳಿದ ಜಿಲ್ಲೆ ಹಾಗೂ ತಾಲೂಕಿನ ಜನಪ್ರತಿನಿಧಿಗಳು ತಮ್ಮ ತಮ್ಮ‌ ಕ್ಷೇತ್ರದಲ್ಲಿನ ಕೊರೋನಾ ರೋಗಿಗಳಿಗೆ ಇದೇ ರೀತಿ ಸ್ಪಂದಿಸಬೇಕಿದೆ ಎಂಬ ಮಾತುಗಳು ಕೇಳಿಬಂದಿವೆ. ಡಿಕೆಎಸ್ ಚಾರಿಟೆಬಲ್ ಟ್ರಸ್ ಮಾಡುತ್ತಿರುವ ಸಮಾಜ ಸೇವೆಗೆ ಎಲ್ಲೆಡೆಯಿಂದ ಶ್ಲಾಘನೆ ವ್ಯಕ್ತವಾಗಿದೆ. ಇನ್ನು ದಿನನಿತ್ಯದ ಈ ಕಾರ್ಯಕ್ರಮವನ್ನು ಕಾಂಗ್ರೆಸ್ ಮುಖಂಡರಾದ ದಿಲೀಪ್, ಚೇತನ್, ಗಾಣಕಲ್ ನಟರಾಜ್, ಬೆಟ್ಟಣ್ಣ ಸೇರಿದಂತೆ ಹಲವರು ಡಿಕೆ ಬ್ರದರ್ಸ್ ಸೂಚನೆ ಮೇರೆಗೆ ನಿರ್ವಹಿಸುತ್ತಿದ್ದಾರೆ.

Comments are closed.